×
Ad

ರಾಮ್‌ದೇವ್ ನೇತೃತ್ವದಲ್ಲಿ ವಿಶ್ವದಾಖಲೆಯ ಯೋಗ ಪ್ರದರ್ಶನ

Update: 2018-06-21 22:43 IST

ಜೈಪುರ, ಜೂ.21: ಯೋಗಗುರು ರಾಮ್‌ದೇವ್ ನೇತೃತ್ವದಲ್ಲಿ ಕೋಟದ ಆರ್‌ಎಸಿ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ನಡೆದ ಯೋಗ ಪ್ರದರ್ಶನದಲ್ಲಿ ವಿಶ್ವದಾಖಲೆಯ ಸಾಧನೆ ದಾಖಲಾಗಿದೆ.

ಗಿನ್ನೆಸ್ ವಿಶ್ವದಾಖಲೆ ವಿಭಾಗದ ಭಾರತೀಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದಿರುವ ಈ ಯೋಗಪ್ರದರ್ಶನದಲ್ಲಿ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ಸಹಿತ ಸುಮಾರು 2 ಲಕ್ಷ ಮಂದಿ ಪಾಲ್ಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. 2017ರಲ್ಲಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 55,524 ಮಂದಿ ಯೋಗ ಪ್ರದರ್ಶನ ನಡೆಸಿರುವುದು ಇದುವರೆಗಿನ ವಿಶ್ವದಾಖಲೆಯಾಗಿದೆ. ನಿರ್ದಿಷ್ಟ ಮಾನದಂಡ ಹಾಗೂ ಡ್ರೋಣ್ ಕ್ಯಾಮೆರ ಬಳಸಿ ಎಣಿಕೆ ಕಾರ್ಯ ನಡೆಸಲಾಗಿದೆ. ಯೋಗ ಪ್ರದರ್ಶಕರ ಸಂಖ್ಯೆ 1.05 ಲಕ್ಷದ ಗಡಿ ತಲುಪಿದಾಗ ಅಧಿಕಾರಿಗಳು ವಿಶ್ವದಾಖಲೆ ಸಾಧಿಸಿದ ಪ್ರಮಾಣಪತ್ರ ನೀಡಿದ್ದಾರೆ. ಭಾರತದ ರಾಜಸ್ತಾನದಲ್ಲಿರುವ ಕೋಟ ಕ್ರೀಡಾಂಗಣದಲ್ಲಿ ರಾಜಸ್ತಾನ ಸರಕಾರ, ಪತಂಜಲಿ ಯೋಗಪೀಠ ಹಾಗೂ ಕೋಟ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಸಲಾದ ಯೋಗಪ್ರದರ್ಶನ ವಿಶ್ವದಾಖಲೆಗೆ ಪಾತ್ರವಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

 ಗುರುವಾರ ಬೆಳಿಗ್ಗೆ 5 ಗಂಟೆಗೆ ಯೋಗ ಪ್ರದರ್ಶನ ಆರಂಭಿಸಲಾಯಿತು. ವಿಶ್ವದಾಖಲೆಗೆ ಶಿಷ್ಟಾಚಾರದಂತೆ ಬೆಳಿಗ್ಗೆ 6:30 ರಿಂದ 7:00 ಗಂಟೆಯವರೆಗೆ ಪ್ರಾಣಾಯಾಮ ಸೇರಿದಂತೆ 15 ಯೋಗ ಆಸನಗಳನ್ನು ಪ್ರದರ್ಶಿಸಲಾಯಿತು. ಯೋಗ ಪ್ರದರ್ಶನ ಕಾರ್ಯಕ್ರಮದ ಉಸ್ತುವಾರಿಗೆ 4,500 ಇನ್‌ಸ್ಪೆಕ್ಟರ್‌ಗಳನ್ನು ನೇಮಿಸಲಾಗಿತ್ತು. ಇದೇ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ವಸುಂಧರಾ ರಾಜೆ, ಜಿಲ್ಲಾ ಕೇಂದ್ರಗಳಲ್ಲಿ ಯೋಗ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು ಹಾಗೂ ಆರೋಗ್ಯ ಮತ್ತು ನೆಮ್ಮದಿಯ ಜೀವನ ನಡೆಸಲು ದೈನಂದಿನ ಬದುಕಿನಲ್ಲಿ ಯೋಗಾಭ್ಯಾಸ ನಡೆಸುವಂತೆ ಜನತೆಗೆ ಕರೆ ನೀಡಿದರು.

ಯೋಗದ ಮೂಲಕ ಭಾರತವು ಮತ್ತೊಮ್ಮೆ ವಿಶ್ವಗುರು ಸ್ಥಾನಮಾನ ಪಡೆಯುವತ್ತ ಮುನ್ನಡೆದಿದೆ ಎಂದ ಅವರು, ಕೋಟದಲ್ಲಿ ಆಚಾರ್ಯಕುಲಂ (ಯೋಗಪೀಠ) ಸ್ಥಾಪಿಸುವಂತೆ ರಾಮ್‌ದೇವ್‌ರಲ್ಲಿ ಮನವಿ ಮಾಡಿಕೊಂಡರು. ಸಂಕಲ್ಪ, ಕಠಿಣ ಪರಿಶ್ರಮ ಹಾಗೂ ಒಳ್ಳೆಯ ಸ್ವಭಾವ ಈ ಮೂರು ಯೋಗಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಯೋಗಗುರು ರಾಮ್‌ದೇವ್ ತಿಳಿಸಿದರು.

ರಾಜ್ಯದ ಆರೋಗ್ಯ ಸಚಿವ ಕಾಳಿಚರಣ್ ಸರಾಫ್, ಕೃಷಿ ಸಚಿವ ಪ್ರಭುಲಾಲ್ ಸೈನಿ, ಸಂಸದರಾದ ಓಂ ಬಿರ್ಲಾ ಹಾಗೂ ದುಷ್ಯಂತ್ ಸಿಂಗ್, ಶಾಸಕರು, ಮುಖ್ಯಕಾರ್ಯದರ್ಶಿ, ಡಿಜಿಪಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News