ಯಾತ್ರಿಕರನ್ನು ದೋಚುತ್ತಿದೆಯೇ ಹಜ್ ಸಮಿತಿ ?

Update: 2018-06-23 11:45 GMT

ಕೇಂದ್ರ ಸರಕಾರದ ಹಜ್ ಸಮಿತಿ ವತಿಯಿಂದ ತೆರಳುವ ಹಜ್ ಪ್ರಯಾಣಿಕರ ದರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಒಂದು ರೀತಿಯಲ್ಲಿ ಖಾಸಗಿ ಹಜ್ ಟೂರ್ ನ ದರದ ಸನಿಹಕ್ಕೆ ಸರಕಾರಿ ಹಜ್ ಫೇರ್ ತಲುಪುತ್ತಿದೆ. ಖಾಸಗಿಯವರು ಊಟ, ವಸತಿ ಮೊದಲಾದ ಸಂಪೂರ್ಣ ಸೌಕರ್ಯದೊಂದಿಗೆ ಟೂರ್ ಕೈಗೊಳ್ಳುತ್ತಾರೆ. ಅವರ ವಿಷಯ ಬಿಡೋಣ. ಸೈಲೆಂಟಾಗಿ ಸರಕಾರದ ಹಜ್ ದರ ದುಬಾರಿಯಾಗುತ್ತಿದೆ.

ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಯಾತ್ರಾರ್ಥಿಗಳ ಸರಕಾರದ 2018ರ ಹಜ್ ದರ ಪ್ರಥಮ (ಗ್ರೀನ್) 2,63,450 ರೂ. ಹಾಗೂ ದ್ವಿತೀಯ (ಅಝೀಝಿಯಾ) 2,29,250 ರೂ. ಗೆ ಏರಿಕೆಯಾಗಿದೆ. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಸುಮಾರು 80 ರಿಂದ 90 ಸಾವಿರ ರೂ. ಪ್ರತಿಯೊಬ್ಬ ಯಾತ್ರಾರ್ಥಿಯಿಂದ ಹೆಚ್ಚುವರಿಯಾಗಿ ಹಣ ಪಡೆಯಲಾಗುತ್ತಿದೆ.

ಹೆಚ್ಚೇನೂ ಬೇಡ. ಕಳೆದ 3 ವರ್ಷದ ಅಂಕಿ ಅಂಶಕ್ಕೆ ಕಣ್ಣು ಹಾಯಿಸೋಣ. 2016 ರ ಹಜ್ ಯಾತ್ರಾರ್ಥಿಗೆ ಮಂಗಳೂರಿನಿಂದ ತೆರಳಲು 2,19,450ರೂ. (ಪ್ರಥಮ), 1,85,550 ರೂ. (ದ್ವಿತೀಯ) ಕೇಂದ್ರ ಸರಕಾರ ಪಡೆದಿತ್ತು.

2017 ರಲ್ಲಿ ಅದು 2,39,150ರೂ. (ಪ್ರ) ಹಾಗೂ 2,05,750ರೂ. (ದ್ವಿ) ಕ್ಕೇರಿತು. ಅಂದರೆ ಒಂದೇ ವರ್ಷದಲ್ಲಿ 2016 ರಿಂದ 2017 ಕ್ಕಾಗುವಾಗ ಸುಮಾರು 20,000 ರೂ.ಗಳ ನೆಗೆತ.

2017 ರಿಂದ 2018 ಕ್ಕೆ ಬರುವಾಗ ಬರೋಬ್ಬರಿ 25,000 ರೂ.ಗಳಷ್ಟು ಮತ್ತೆ ಹೆಚ್ಚಳ. ಅಂದರೆ ಕೇವಲ 2016 ರಿಂದ 2018 ರ ತನಕ ಸುಮಾರು 45,000 ರೂ. ದಾಖಲೆಯ ಏರಿಕೆ ಮಾಡಿರುವ ಕೇಂದ್ರ ಸರಕಾರದ ಹಜ್ ಇಲಾಖೆ ಹಾಜಿಗಳನ್ನು ವ್ಯವಸ್ಥಿತವಾಗಿ ದೋಚುತ್ತಿದೆ. ಯಾತ್ರಾರ್ಥಿಗಳು ಸಹನಾಶೀಲರು. ಎಲ್ಲವನ್ನೂ, ಎಲ್ಲರನ್ನೂ ಸಹಿಸುತ್ತಿದ್ದಾರೆ.

ಇನ್ನು ಹಜ್ ನ ಖರ್ಚು ವೆಚ್ಚದ ನಿಜಾವಸ್ಥೆಯನ್ನು ತಿಳಿಯೋಣ. ಸರಕಾರ ಮಕ್ಕಾ ಹಾಗೂ ಮದೀನಾದಲ್ಲಿ ಯಾತ್ರಾರ್ಥಿಗಳಿಗೆ 40 ದಿನಗಳ ತಂಗುವ ವ್ಯವಸ್ಥೆ ಮಾಡಿ ಪುನಃ ಹಿಂದಿರುಗಿಸುತ್ತದೆ. ಹಜ್ ವೀಸಾ, ಹೋಗಲು-ಬರಲು ವಿಮಾನ ಟಿಕೆಟ್, ತಂಗುವ ವ್ಯವಸ್ಥೆ, ಯಾತ್ರಾರ್ಥಿಗಳಿಗೆ ಚುಚ್ಚುಮದ್ದು, ಆರೋಗ್ಯ ಹದಗೆಟ್ಟರೆ ಸಣ್ಣಪುಟ್ಟ ತಪಾಸಣೆ ಇವುಗಳನ್ನು ಬಿಟ್ಟರೆ ಸರಕಾರ ಬೇರೇನೂ ಮಾಡುತ್ತಿಲ್ಲ. ಇವಿಷ್ಟು ಸೇವೆಗೆ ಗರಿಷ್ಟ ಅಂದರೆ 2018ರ ಮಾರುಕಟ್ಟೆಗೆ ಹೋಲಿಸಿದರೆ 1,20,000/- ರೂ. (ಪ್ರಥಮ) ಹಾಗೂ 95,000/- ರೂ. (ದ್ವಿತೀಯ) ಖರ್ಚಾಗಬಹುದು.

ಆಹಾರದ ವ್ಯವಸ್ಥೆಯನ್ನು, ಸುತ್ತಲ ಪುಣ್ಯ ಪ್ರದೇಶ ಸಂದರ್ಶಿಸುವ ಖರ್ಚನ್ನು ಸ್ವತಃ ಪ್ರಯಾಣಿಕನೇ ನೋಡಿ ಕೊಳ್ಳಬೇಕು. ಖುರ್ಬಾನಿ ವ್ಯವಸ್ಥೆ ಬೇಕಾದರೆ ಹಜ್ ಕಮಿಟಿಗೆ ಪ್ರತ್ಯೇಕ ಹಣ ಪಾವತಿಸಬೇಕು. ವಿಮಾನ ಪ್ರಯಾಣ 25,000ರೂ., ಮಕ್ಕಾ ಹೋಟೆಲ್ ಕೋಣೆ (25 ದಿವಸ) 50,000 ರೂ., ಮದೀನಾ ಹೋಟೆಲ್ ಕೋಣೆ (15 ದಿವಸ) 20,000 ರೂ., ಇತರ ಖರ್ಚು (ವೀಸಾ, ಮೆಡಿಕಲ್, ಪೋಸ್ಟೇಜ್, ಕ್ಯಾಂಪ್, ಸಿಬ್ಬಂದಿ ಇತ್ಯಾದಿ) 25,000 ರೂ. ಅಂದರೆ ಒಟ್ಟು 1,20,000 ರೂ. ಇದು ಪ್ರಥಮ (ಗ್ರೀನ್ ಕೆಟಗರಿ). ಆದರೆ ದ್ವಿತೀಯಕ್ಕೆ (ಅಝೀಝಿಯಾ ಕೆಟಗರಿ) ಮಕ್ಕಾದಲ್ಲಿ ತಂಗುವ ಹೋಟೆಲ್ ಕೋಣೆ ದೂರ ಇರುವುದರಿಂದ ಒಟ್ಟು ರೂ. 95,000/- ಆಗಬಹುದು. ಇದು ಇಂದಿನ ಮಾರುಕಟ್ಟೆಗೆ ಹೋಲಿಸಿದಾಗ ಸಿಗುವ ಲೆಕ್ಕಾಚಾರ. ಹಾಗಾದರೆ ಇದರ ದುಪ್ಪಟ್ಟಿಗಿಂತಲೂ ಅಧಿಕ ಪಡೆಯುವ ಮೊತ್ತ ಎಲ್ಲಿಗೆ ಮತ್ತು ಯಾರಿಗೆ ಹೋಗುತ್ತದೆ? ಎಂಬುವುದು ಯಕ್ಷ ಪ್ರಶ್ನೆ. ಇದೆಲ್ಲಾ ಸುಳ್ಳು ಅಂತ ಯಾರಿಗಾದರೂ ಸಂಶಯವಿದ್ದರೆ ಯಾತ್ರಿಕರಿಂದ ಪಡೆಯುವ ಹಣದ ವಿವರಣೆಯನ್ನು (ಟಿಕೆಟ್, ವೀಸಾ, ರೂಮ್, ಮೆಡಿಕಲ್ ಇತ್ಯಾದಿಗಳಿಗೆ ಇಂತಿಷ್ಟು ಮೊತ್ತ ಎಂಬ ವಿವರಣೆ) ಕೇಂದ್ರ ಸರಕಾರದ ಹಜ್ ಅಥವಾ ಸಂಬಂಧಿಸಿದ ವಿದೇಶಾಂಗ ಖಾತೆ ಅಥವಾ ಭಾರತೀಯ ಹಜ್ ಸಮಿತಿ ನೀಡಬೇಕು. ಅದು ಜನ ನಂಬುವಂತಹ ಲೆಕ್ಕಾಚಾರವಾಗಿರಬೇಕು. ಸರಕಾರ ಪ್ರತಿವರ್ಷ ಭಾರತದ ರೂಪಾಯಿ ಮೌಲ್ಯದ ಕುಸಿತ ಹಾಗೂ ಸೌದಿ ರಿಯಾಲ್ ನ ಏರಿಕೆ ಧಾರಣೆಯ ಗುಮ್ಮವನ್ನು ತೋರಿಸಿ ಕಾರಣ ಹೇಳುವ ಪ್ರವೃತ್ತಿಯನ್ನು ನಿಲ್ಲಿಸಬೇಕು.

ಇನ್ನು ಕಳೆದ ವರ್ಷದ ತನಕ ಯಾತ್ರಾರ್ಥಿಗಳು ತೆರಳುವಾಗ 2,100 ಸೌದಿ ರಿಯಾಲನ್ನು ವಿಮಾನ ನಿಲ್ದಾಣದಲ್ಲಿ ಸರಕಾರ ಹಿಂತಿರುಗಿಸುತ್ತದೆ. ಅದು ಈ ವರ್ಷವೂ ಇರಬಹುದು ಎಂಬ ಆಕಾಂಕ್ಷೆ ಹಜ್ಜಾಜ್ ಗಳಲ್ಲಿ ಇದ್ದೇ ಇದೆ. ಈ ವರ್ಷದಿಂದ ಸರಕಾರದ ಸಬ್ಸಿಡಿ ಇಲ್ಲ ಎಂದು ಈಗಾಗಲೇ ಪ್ರಕಟಿಸಲಾಗಿದೆ. ಇವೆಲ್ಲವುಗಳನ್ನು ಮೀರಿ ಪ್ರತಿಯೊಬ್ಬ ಹಜ್ ಯಾತ್ರಿಕನಿಂದ ಪಡೆಯುವ ಹೆಚ್ಚುವರಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಕೇಂದ್ರ ಸರಕಾರ ಏನು ಮಾಡುತ್ತಿದೆ ಎನ್ನುವುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸುವ ಅಗತ್ಯತೆ ಇದೆ. ಹಜ್ ಗೆ ತೆರಳದ ಅಥವಾ ಸಹೋದರ ಧರ್ಮದ ಜನರು ಹಜ್ ಯಾತ್ರಿಕರಿಗೆ ಉತ್ತಮ ಸವಲತ್ತು ನೀಡುತ್ತಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಆ ಗ್ರಹಿಕೆ ತಪ್ಪು. ಪ್ರತಿಯೊಬ್ಬ ಹಾಜಿಯಿಂದ ಒಂದು ಲಕ್ಷವೇ ಹೆಚ್ಚುವರಿಯಾಗಿ ಪಡೆಯುತ್ತೇವೆ ಅಂತ ಇಟ್ಕೊಳ್ಳೋಣ. ಹಾಗಾದರೆ ಭಾರತದಿಂದ ಕೇಂದ್ರ ಸರಕಾರದ ಅಧೀನದಲ್ಲಿ ತೆರಳುವ ಒಂದೂ ಕಾಲು ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳ ಒಟ್ಟು ಹೆಚ್ಚುವರಿ ದುಡ್ಡು ಎಷ್ಟಾಗುತ್ತದೆ ಎನ್ನುವುದನ್ನು ಕ್ಯಾಲ್ಕುಲೇಟರ್ ಹಿಡಿದು ಲೆಕ್ಕ ಮಾಡಲು ಕೂತರೆ ತಲೆ ಗಿರ್ರನೆ ತಿರುಗುತ್ತದೆ.

ಇವಿಷ್ಟು ಮಾತ್ರವಲ್ಲ. ಸರಕಾರದಿಂದ ತೆರಳುವ ಹಾಜಿಗಳ ಯಾತನೆ, ರೋದನ, ಕಷ್ಟ ಎಲ್ಲವೂ ಅರಣ್ಯ ರೋದನವಷ್ಟೆ. ಕೊನೆ ಗಳಿಗೆ ತನಕವೂ ಪ್ರಯಾಣ ಹೊರಡಲು ದಿನಾಂಕ, ಸಮಯ ನಿಗದಿಯಾಗದೇ ಪೂರ್ವ ಸಿದ್ಧತೆಗೆ ಪರಿತಪಿಸುವ ಅವ್ಯವಸ್ಥೆ, ಗಂಟೆಗಟ್ಟಲೆ ಕೆಲವೊಮ್ಮೆ ದಿನಗಟ್ಟಲೆ ವಿಮಾನ ನಿಲ್ದಾಣದಲ್ಲಿ ಸರಿಯಾದ ಆಹಾರವೂ ಇಲ್ಲದೇ ವಿಮಾನಕ್ಕಾಗಿ ಕಾಯುವ ದುಸ್ಥಿತಿ, ಯಾತ್ರೆಯ ಸಂದರ್ಭ ಸಿಗದ ಸೂಕ್ತ ಚಿಕಿತ್ಸೆ, ಸರಿಯಾದ ಮಾರ್ಗದರ್ಶನ ಇಲ್ಲದೇ ಮಕ್ಕಾ ಹಾಗೂ ಮದೀನಾದಲ್ಲಿ ಪ್ರಾರ್ಥನೆ ಸಲ್ಲಿಸಲು ಪಡುವ ಪಾಡು, ವಯಸ್ಕರಿಗೆ, ಮಕ್ಕಳಿಗೆ ದಾರಿ ತೋಚದೇ ಕಾಣೆಯಾಗುವ, ಅವರನ್ನು ಹುಡುಕುವ ವೇದನೆ ಸಂಕಟ ಇವೆಲ್ಲವೂ ಹಜ್ ಸಂದರ್ಭಗಳಲ್ಲಿ ಸರಕಾರದ ನಿರ್ಲಕ್ಷ್ಯದಿಂದಾಗುವ ದುಷ್ಪರಿಣಾಮಗಳು.

ಹಜ್ ಅನ್ನುವುದು ಇಸ್ಲಾಮ್ ಧರ್ಮದ ಪಂಚ ಸ್ಥಂಭಗಳಲ್ಲಿ ಒಂದು. ಹಜ್ ನಲ್ಲಿ ಲೋಕ ಕಲ್ಯಾಣದ ಪ್ರಾರ್ಥನೆಯ ಜೊತೆಗೆ ತಾಳ್ಮೆ, ಸಹನೆಯನ್ನು ಮೈಗೂಡಿಸಬೇಕು. ವೈರತ್ವ ಬಿಡಬೇಕು. ಎಲ್ಲ ಕಲ್ಮಶಗಳಿಂದ ದೂರವಿರಬೇಕು. ಇದರಿಂದ ಮುಸ್ಲಿಮನ ಹಜ್ ಪೂರ್ತಿಯಾಗುತ್ತದೆ ಎಂದು ಇಸ್ಲಾಂ ಹೇಳುತ್ತದೆ. ಇದರಿಂದಾಗಿಯೇ ಸರಕಾರದ ಎಲ್ಲಾ ಅವ್ಯವಸ್ಥೆ, ಹೆಚ್ಚಿನ ಹಣ ದೋಚುವ ಪ್ರವೃತ್ತಿಯನ್ನು ಸಹಿಸಿಕೊಂಡು ಯಾತ್ರಾರ್ಥಿ ತನ್ನ ಹಜ್ ನ್ನು ಪೂರ್ತಿಗೊಳಿಸುತ್ತಾನೆ.

ನವಜಾತ ಶಿಶುವಿನಂತೆ ಶುದ್ಧ ಮನಸ್ಕನಾಗಿ ಹಿಂತಿರುಗುತ್ತಾನೆ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಹಜ್ ಸಬ್ಸಿಡಿ ಹಾಗೂ ಇನ್ನಿತರ ಹಜ್ ಕಾಯ್ದೆಗಳಿಗೆ ತಿದ್ದುಪಡಿ ತಂದಂತೆ ಯಾತ್ರಿಕರಿಂದ ದೋಚುವ ಹೆಚ್ಚುವರಿ ಮೊತ್ತಕ್ಕೆ ಕಡಿವಾಣ ಹಾಗೂ ಪಡೆದ ಮೊತ್ತಕ್ಕೆ ಗುಣಮಟ್ಟದ ಸೇವೆಯನ್ನು ನೀಡುವ ಜವಾಬ್ದಾರಿ ಕೇಂದ್ರ ಸರಕಾರಕ್ಕೆ ಬೇಕು. ಇವಿಲ್ಲದಿದ್ದರೆ ಒಂದು ಸಮುದಾಯವನ್ನು ಶೋಷಣೆಗೆ ಒಳಪಡಿಸಿದ ಶಾಪ ತಟ್ಟದಿರದು.

- ರಶೀದ್ ವಿಟ್ಲ, ದ.ಕ. ಜಿಲ್ಲಾ ವಕ್ಫ್ ಸದಸ್ಯರು.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News