ಗಾಯಕಿಯಾಗಲಿದ್ದಾರೆ ಆಲಿಯಾ

Update: 2018-06-23 12:42 GMT

ಇತ್ತೀಚೆಗೆ ತೆರೆಕಂಡ ರಾಝಿ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್‌ನ ‘ಬಾರ್ಬಿಗರ್ಲ್’ ಆಲಿಯಾಭಟ್ ತಾರಾವರ್ಚಸ್ಸು ಬಹಳಷ್ಟು ಹೆಚ್ಚಿದೆ. ರಾಝಿ ಚಿತ್ರದಲ್ಲಿ ಆಕೆಯ ಅಭಿನಯಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಆಲಿಯಾಗೆ ಕೈತುಂಬಾ ಆಫರ್‌ಗಳಿದ್ದರೂ, ಪಾತ್ರಗಳ ವಿಚಾರದಲ್ಲಿ ಆಕೆ ತುಂಬಾ ಚ್ಯೂಸಿಯಾಗುತ್ತಿದ್ದಾರೆ. ಸತ್ವಯುತವಾದ ಪಾತ್ರಗಳಿಗಿರುವ ಚಿತ್ರಗಳಿಗಷ್ಟೇ ಆಕೆ ಕಾಲ್‌ಶೀಟ್ ನೀಡುತ್ತಿದ್ದಾರೆ. ಇದೀಗ ಆಲಿಯಾ ಗಾಯಕಿಯಾಗುತ್ತಿದ್ದಾರೆ. ಹಾಗೆಂದು ಆಕೆ ಹಿನ್ನೆಲೆ ಗಾಯಕಿಯಾಗಲು ಹೊರಟಿಲ್ಲ. ಅಶ್ವಿನಿ ಅಯ್ಯರ್ ನಿರ್ದೇಶನದ ಚಿತ್ರವೊಂದರಲ್ಲಿ ಆಲಿಯಾ ಗಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೌಟುಂಬಿಕ ಪ್ರೇಕ್ಷಕರನ್ನು ಗುರಿಯಿರಿಸಿಕೊಂಡು ನಿರ್ಮಾಣವಾಗುತ್ತಿರುವ ಈ ಚಿತ್ರ ನಾಯಕಿ ಪ್ರಧಾನ ಕಥಾವಸ್ತುವನ್ನು ಹೊಂದಿದೆಯಂತೆ. ಹಾಸ್ಯಕ್ಕೂ ಈ ಚಿತ್ರದಲ್ಲಿ ಬಹಳಷ್ಟು ಒತ್ತು ನೀಡಲಾಗಿದೆಯಂತೆ. ಅಶ್ವಿನಿ ಅಯ್ಯರ್‌ರ ಪತಿ, ನಿರ್ದೇಶಕ ನಿತೀಶ್ ತಿವಾರಿ ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದಾರೆ. 2012ರಲ್ಲಿ ಕರಣ್‌ಜೋಹರ್ ನಿರ್ಮಾಣದ ‘ಸ್ಟೂಡೆಂಟ್ ಆಫ್ ದಿ ಇಯರ್ ’ ಚಿತ್ರದ ಮೂಲಕ ನಾಯಕನಟಿಯಾಗಿ ಬೆಳ್ಳಿತೆರೆ ಪ್ರವೇಶಿಸಿದ ಆಲಿಯಾಭಟ್ ಹೈವೇ,ಬದರಿನಾಥ್ ಕಿ ದುಲ್ಹನಿಯಾ,2 ಸ್ಟೇಟ್ಸ್, ಕಪೂರ್ ಆ್ಯಂಡ್ ಸನ್ಸ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಾಯಕ ನಟ ಸೇರಿದಂತೆ ಉಳಿದ ತಾರಾಗಣದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದಿದ್ದರೂ, ಚಿತ್ರವು ಈ ವರ್ಷದ ಅಂತ್ಯದ ವೇಳೆಗೆ ಸೆಟ್ಟೇರುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News