ಬೆಳ್ಳಿತೆರೆಯಲ್ಲಿ ಪಾಣಿಪತ್ ಕದನ

Update: 2018-06-23 12:50 GMT

ಬಾಲಿವುಡ್‌ನಲ್ಲಿ ಈಗ ಏನಿದ್ದರೂ ಬಿಗ್ ಬಜೆಟ್ ಚಿತ್ರಗಳ ಯುಗ. ಐತಿಹಾಸಿಕ ಕಥನಗಳನ್ನು ಆಧರಿಸಿದ ಚಿತ್ರಗಳತ್ತ ಬಿಟೌನ್ ನಿರ್ಮಾಪಕರು ಹೆಚ್ಚುಹೆಚ್ಚಾಗಿ ಆಸಕ್ತಿ ವಹಿಸುತ್ತಿದ್ದಾರೆ. 1761ರಲ್ಲಿ ನಡೆದ ಭೀಕರ ಪಾಣಿಪತ್ ಕದನದ ರೋಚಕ ಕಥೆಯನ್ನು ನಿರ್ದೇಶಕ ಅಶುತೋಷ್ ಗೋವಾರಿಕರ್ ಬೆಳ್ಳಿತೆರೆಯಲ್ಲಿ ತೋರಿಸಹೊರಟಿದ್ದಾರೆ.

ಇಷ್ಟಕ್ಕೂ ಅಶುತೋಷ್, ಐತಿಹಾಸಿಕ ಕಥಾವಸ್ತುವಿನ ಚಿತ್ರ ನಿರ್ದೇಶಿಸುತ್ತಿರುವುದು ಇದು ಹೊಸತೇನಲ್ಲ. ಈ ಮೊದಲು ಅವರು ಹೃತಿಕ್ ರೋಶನ್- ಐಶ್ವರ್ಯಾ ರೈ ಅಭಿನಯದ ಜೋಧಾ ಅಕ್ಬರ್ ಚಿತ್ರವನ್ನೂ ನಿರ್ದೇಶಿಸಿದ್ದರು. ಜೋಧಾ ಅಕ್ಬರ್ ಬಾಕ್ಸ್ ಅಫೀಸ್‌ನಲ್ಲಿ ಗೆಲ್ಲುವ ಜೊತೆಗೆ ಪ್ರೇಕ್ಷಕರಿಂದಲೂ ಮುಕ್ತಕಂಠದ ಪ್ರಶಂಸೆ ಪಡೆದಿತ್ತು.

ಪಾಣಿಪತ್ ಚಿತ್ರವು ಮರಾಠ ಸೇನೆ ಹಾಗೂ ಮುಹಮ್ಮದ್ ಶಾ ಅಬ್ದಾಲಿ ನೇತೃತ್ವದ ಸೈನ್ಯಗಳ ನಡುವೆ ನಡೆದ ಭೀಕರ ಕದನದ ರೋಚಕ ಕಥಾವಸ್ತುವನ್ನು ಹೊಂದಿದೆ. ಭಾರೀ ವೆಚ್ಚದಲ್ಲಿ ತಯಾರಾಗಲಿರುವ ಪಾಣಿಪತ್‌ನ ಮುಖ್ಯಪಾತ್ರಗಳಿಗೆ ಅರ್ಜುನ್‌ಕಪೂರ್. ಸಂಜಯ್‌ದತ್ ಹಾಗೂ ಕೃತಿ ಸನೂನ್ ನಟಿಸಲಿದ್ದಾರೆ. ಅಂದಹಾಗೆ ಅಶುತೋಷ್ ಅವರು ಮೂವತ್ತು ವರ್ಷಗಳ ಹಿಂದೆ ತೆರೆಕಂಡ ನಾಮ್ ಚಿತ್ರದಲ್ಲಿ ಸಂಜಯ್‌ದತ್ ಜೊತೆ ನಟಿಸಿದ್ದರು. ಅದೊಂದು ಅವಿಸ್ಮರಣೀಯ ಅನುಭವವಾಗಿತ್ತು ಎಂದು ಸ್ಮರಿಸುವ ಗೋವಾರಿಕರ್, ಸಂಜಯ್‌ದತ್‌ರಂತಹ ಅಗಾಧ ಪ್ರತಿಭೆಯ ನಟನಿಗೆ ನಿರ್ದೇಶಿಸುವ ಅವಕಾಶ ದೊರೆತಿರುವುದು, ತನ್ನ ಅದೃಷ್ಟವೆಂದು ಹೇಳಿಕೊಂಡಿದ್ದಾರೆ. ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿರುವ ಪಾಣಿಪತ್‌ನ್ನು, ಅಶುತೋಷ್ ಅವ ರ ಪತ್ನಿ ಸುನೀತಾ ಗೋವಾರಿಕರ್ ತಮ್ಮ ಹೋಂ ಬ್ಯಾನರ್ ಎಜಿಪಿಪಿಎಲ್‌ನಲ್ಲಿ ವಿಶನ್‌ವರ್ಲ್ಡ್ ಜೊತೆಗೂಡಿ ನಿರ್ಮಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಚಿತ್ರವು 2019ರ ಡಿಸೆಂಬರ್ 6ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News