×
Ad

ಲಷ್ಕರ್ ಎ ತೊಯ್ಬಾ ಉಗ್ರರಿಗೆ ರಮೇಶ್ ಶಾ ಹೇಗೆ ಹಣ ಪೂರೈಸುತ್ತಿದ್ದ ಗೊತ್ತಾ?

Update: 2018-06-23 18:43 IST

ಲಕ್ನೋ, ಜೂ.23: ಉಗ್ರರಿಗೆ ಹಣ ಪೂರೈಕೆ ಜಾಲದ ರೂವಾರಿಯೆಂದು ತಿಳಿಯಲಾದ ಗೋರಖ್ ಪುರದ ವ್ಯಕ್ತಿ 30 ವರ್ಷದ ರಮೇಶ್ ಶಾ ಎಂಬಾತನನ್ನು ಉತ್ತರ ಪ್ರದೇಶದ ಎಟಿಎಸ್ ಹಾಗೂ ಮಹಾರಾಷ್ಟ್ರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪುಣೆಯಲ್ಲಿ ಜೂನ್ 9ರಂದು ಬಂಧಿಸಿದಾಗ ವ್ಯವಸ್ಥಿತ ಜಾಲವೊಂದನ್ನೇ ಬೇಧಿಸಿದ ಸಮಾಧಾನ ಪೊಲೀಸರಿಗುಂಟಾಗಿತ್ತು. ಶಾ  ತನ್ನ ಈ  ಜಾಲವನ್ನು ಹೇಗೆ ನಿರ್ವಹಿಸುತ್ತಿದ್ದ ಎನ್ನುವ ಸಂಪೂರ್ಣ ವರದಿಯನ್ನು ibtimes.co.in ವರದಿ ಮಾಡಿದೆ.

ಎಟಿಎಸ್ ಅಧಿಕಾರಿಗಳ ಪ್ರಕಾರ ಶಾ ತನಗೆ ಸಹಾಯ ಮಾಡಲೆಂದು ಬಾಡಿಗೆ ಜನರನ್ನು ಪಡೆಯಲು ಪುಣೆಗೆ ಬಂದಿದ್ದ. ಬಿಹಾರದ ಮುಕೇಶ್ ಪ್ರಸಾದ್ ಹಾಗೂ ಕುಶಿನಗರದ ಮುಶರಫ್ ಅನ್ಸಾರಿ ಸಹಿತ ಆತನ ಗ್ಯಾಂಗಿನ ಹಲವರನ್ನು ಮಾರ್ಚ್ ತಿಂಗಳಲ್ಲಿ ಬಂಧಿಸಲಾಗಿತ್ತು. ಪೊಲೀಸರು ಕೆಲವೊಂದು ಧ್ವನಿಮುದ್ರಿಕೆಗಳು ಹಾಗೂ ಡೈರಿಯನ್ನು ಅನ್ಸಾರಿ ಮತ್ತು ಪ್ರಸಾದ್ ರಿಂದ ವಶಪಡಿಸಿಕೊಂಡಿದ್ದರು. ಇದರಲ್ಲಿ ರಮೇಶ್ ಮತ್ತವನ ಗ್ಯಾಂಗ್ ಹೇಗೆ ಕಾರ್ಯಾಚರಿಸುತ್ತಿತ್ತೆಂಬ ಬಗ್ಗೆ ಮಹತ್ವದ ಸುಳಿವಿತ್ತು. ರಮೇಶ್ ಶಾನನ್ನು ಬಂಧಿಸಿದ ಕೂಡಲೇ ಎಟಿಎಸ್ ಅಧಿಕಾರಿಗಳು ಆತನ ಫೋನ್ ವಶಪಡಿಸಿಕೊಂಡು ಆದರಲ್ಲಿ ಆತನ ಶಾಮೀಲಾತಿಯನ್ನು ದೃಢಪಡಿಸುವ  ಮಹತ್ವದ ವಾಟ್ಸ್ಯಾಪ್ ಚಾಟ್ ಗಳಿರುವುದು ಪತ್ತೆ ಹಚ್ಚಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆತನ ಜಾಲ ಹೇಗೆ ಕಾರ್ಯಾಚರಿಸುತ್ತಿತ್ತು ?

ಶಾ ವಿವಿಧ ನಗರಗಳಲ್ಲಿ ಸುಳ್ಳು ಗುರುತು ಪರಿಚಯ ಹೇಳಿಕೊಂಡು ತನಗಾಗಿ ಕೆಲಸ ಮಾಡಲು ಹಲವರನ್ನು ನೇಮಿಸುತ್ತಿದ್ದ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಎ ತೊಯ್ಬಾ (ಎಲ್‍ಇಟಿ ) ಜತೆ ಆತ ನಿರಂತರ ಸಂಪರ್ಕದಲ್ಲಿದ್ದನಲ್ಲದೆ, ದೇಶಾದ್ಯಂತ ಎಲ್‍ಇಟಿ ಉಗ್ರರಿಗೆ ಹಣದ ಕೊರತೆಯೆದುರಾಗದಂತೆ ಹಣ ಸಂದಾಯ ಮಾಡುತ್ತಿದ್ದ. ಆತನಿಗೆ ಪಾಕಿಸ್ತಾನ, ಮಧ್ಯಪೂರ್ವ ದೇಶಗಳು ಸೇರಿದಂತೆ ದೇಶದ ಹಲವೆಡೆಗಳಿಂದ ಹಣ ಸಂದಾಯವಾಗುತ್ತಿತ್ತು.  ಈ ಹಣ ವಿವಿಧ ಜನರ ಖಾತೆಗಳಿಗೆ ಜಮೆಯಾಗುತ್ತಿತ್ತು. ಅವರು ಆ ಹಣವನ್ನು ಶಾ ಗ್ಯಾಂಗಿಗೆ ನೀಡಿದರೆ ನಂತರ ಅದು ಉಗ್ರರ ಪಾಲಾಗುತ್ತಿತ್ತು ಎಂದು ibtimes.co.in ವರದಿಯಲ್ಲಿ ತಿಳಿಸಿದೆ.

ವಿವಿಧ ಮೂಲಗಳಿಂದ ಬಂದ ಹಣ ಯಾರ ಖಾತೆಗೆ ಜಮೆಯಾಗುತ್ತಿತ್ತೋ ಅವರಿಗೆ ಆತ ಕಮಿಷನ್ ನೀಡುತ್ತಿದ್ದ. ತನಗೆ ಹಣ ಸಂದಾಯ ಮಾಡುತ್ತಿದ್ದವರ ಜತೆ ಆತ ವಾಟ್ಸ್ಯಾಪ್ ಮತ್ತು ಇಂಟರ್ನೆಟ್ ಕರೆಗಳ ಮೂಲಕ ಸಂಪರ್ಕದಲ್ಲಿರುತ್ತಿದ್ದನೆಂದು ಅಧಿಕಾರಿಗಳು ತಿಳಿಸುತ್ತಾರೆ. ಆತ ಕಂಪ್ಯೂಟರ್ ಪ್ರೊಗ್ರಾಮಿಂಗ್ ಮತ್ತು ಹಾರ್ಡ್ ವೇರ್ ಕ್ಷೇತ್ರದ ನಿಪುಣನಾಗಿದ್ದು ಇದು ಆತನಿಗೆ ಅನುಕೂಲಕರವಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.

ರಮೇಶ್ ಕಳೆದೆರಡು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು ಇಲ್ಲಿಯ ತನಕ ಹಲವಾರು ಕೋಟಿ ರೂಪಾಯಿ ಹಣವನ್ನು ಉಗ್ರರಿಗೆ ಸಂದಾಯ ಮಾಡಿರಬಹುದು ಎಂದು ಉತ್ತರ ಪ್ರದೇಶ ಎಟಿಎಸ್ ಮಹಾನಿರ್ದೇಶಕ ಅಸಿಮ್ ಅರುಣ್ ಹೇಳುತ್ತಾರೆ. ತನಿಖಾ ತಂಡ ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News