×
Ad

ಉ.ಪ್ರದೇಶ: ಗೋಹತ್ಯೆ ಶಂಕೆಯಿಂದ ವ್ಯಾಪಾರಿಯ ಥಳಿಸಿ ಹತ್ಯೆಗೈದ ಪೊಲೀಸರು; ಆರೋಪ

Update: 2018-06-23 20:09 IST

ಲಕ್ನೊ, ಜೂ.23: ಉತ್ತರಪ್ರದೇಶದ ಬರೇಲಿಯಲ್ಲಿ ಗೋ ಹತ್ಯೆ ಮಾಡುತ್ತಿದ್ದರೆಂಬ ಶಂಕೆಯಲ್ಲಿ ಮಾಂಸದ ವ್ಯಾಪಾರಿಯನ್ನು ಪೊಲೀಸರೇ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಮಾಂಸದ ವ್ಯಾಪಾರಿಯಾಗಿದ್ದ ಮುಹಮ್ಮದ್ ಸಲೀಂ ಖುರೇಶಿ ಅಲಿಯಾಸ್ ಮುನ್ನಾ ಎಂಬಾತನನ್ನು ಪೊಲೀಸರು ಥಳಿಸಿದ ಕಾರಣ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ದಿಲ್ಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ 8 ದಿನಗಳ ಬಳಿಕ ಖುರೇಶಿ ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದ್ದು ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಇವರ ವಿರುದ್ಧ ಹಲ್ಲೆ ಮತ್ತು ಹಣ ವಸೂಲಿ ಪ್ರಕರಣ ದಾಖಲಿಸಲಾಗಿದ್ದು ವಲಯಾಧಿಕಾರಿ ನಿಧಿ ದ್ವಿವೇದಿ ಪ್ರಕರಣಗಳ ತನಿಖೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಕಾರ್ಪೊರೇಟರ್‌ನ ಸೂಚನೆಯಂತೆ ಪೊಲೀಸ್ ಸಿಬ್ಬಂದಿಗಳು ತನ್ನ ಪತಿಯ ಮೇಲೆ ಹಲ್ಲೆ ನಡೆಸಿರುವುದಾಗಿ ಖುರೇಶಿಯ ಪತ್ನಿ ಫರ್ಝಾನಾ ಉ.ಪ್ರದೇಶ ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ತನ್ನ ಪತಿಯಿಂದ ಹಣ ವಸೂಲು ಮಾಡಲು ಬಯಸಿದ್ದ ಪೊಲೀಸರು ಥಳಿಸಿದ್ದಾರೆ. ಇದಕ್ಕೆ ಸ್ಥಳೀಯ ಕಾರ್ಪೊರೇಟರ್ ಅಂಜುಮ್ ಖಾನ್ ಅಲಿಯಾಸ್ ಫಿರ್ದೌಸ್‌ನ ಕುಮ್ಮಕ್ಕು ಕಾರಣ ಎಂದು ಫರ್ಝಾನಾ ಆರೋಪಿಸಿದ್ದಾರೆ.

ಬರೇಲಿಯ ಬರಾದರಿ ಪ್ರದೇಶದಲ್ಲಿ ಖುರೇಶಿಗೆ ಸಣ್ಣ ಮಾಂಸದ ಅಂಗಡಿಯೊಂದಿದೆ. ಈ ಅಂಗಡಿಯಲ್ಲಿ ಖುರೇಶಿ ಗೋ ಹತ್ಯೆ ಮಾಡುತ್ತಿದ್ದಾದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆತರಲು ಕಂಕರ್‌ತೊಲಾ ಠಾಣಾಧಿಕಾರಿ ಅಲಿ ಮಿಯಾ ಝೈದಿ ಕಾನ್‌ಸ್ಟೇಬಲ್‌ಗಳಾದ ಶ್ರೀಪಾಲ್ ಮತ್ತು ಹರೀಶ್‌ಚಂದ್ರರನ್ನು ಜೂನ್ 14ರಂದು ಖುರೇಶಿಯ ಮನೆಗೆ ಕಳುಹಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ವಿಚಾರಣೆ ಸಂದರ್ಭ ತನ್ನ ಮೇಲಿನ ಆರೋಪವನ್ನು ಖುರೇಶಿ ನಿರಾಕರಿಸಿದಾಗ ಆತನನ್ನು ಹಿಗ್ಗಾಮುಗ್ಗಾ ಥಳಿಸಲಾಗಿದ್ದು ಖುರೇಶಿಗೆ ಪ್ರಜ್ಞೆ ತಪ್ಪಿದೆ ಎಂದು ಕುಟುಂಬದ ಸದಸ್ಯರು ಆರೋಪಿಸುತ್ತಿದ್ದಾರೆ.

ತಕ್ಷಣ ಖುರೇಶಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಲಿಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಜೂನ್ 21ರಂದು ಮೃತಪಟ್ಟಿದ್ದಾರೆ ಎಂದು ಬರೇಲಿಯ ಹಿರಿಯ ಪೊಲೀಸ್ ಅಧೀಕ್ಷಕ ಕಲಾನಿಧಿ ನೈಥಾನಿ ತಿಳಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯ ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ದೈಹಿಕ ಹಲ್ಲೆ ನಡೆಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನುತಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ವರದಿ ಸಲ್ಲಿಕೆಯಾದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.

ಆದರೆ ತಾವು ಪ್ರತಿಭಟನೆ ನಡೆಸಿದ ಬಳಿಕವಷ್ಟೇ ಆರೋಪಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಖುರೇಶಿಯ ಸಾವಿಗೆ ಕಾರಣವಾದ ಥಳಿತ ಪ್ರಕರಣದಲ್ಲಿ ಶಾಮೀಲಾಗಿರುವ ಪೊಲೀಸ್ ಅಧಿಕಾರಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಖುರೇಶಿಯ ಕುಟುಂಬದ ಸದಸ್ಯರು ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್‌ರಿಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News