ಫಿಫಾ ವಿಶ್ವಕಪ್: ಬೆಲ್ಜಿಯಂಗೆ ಭರ್ಜರಿ ಜಯ

Update: 2018-06-23 14:57 GMT

ಮಾಸ್ಕೊ, ಜೂ.23: ಟ್ಯುನಿಶಿಯ ವಿರುದ್ಧ ವಿಶ್ವಕಪ್‌ನ ‘ಜಿ’ ಗುಂಪಿನ ಪಂದ್ಯದಲ್ಲಿ ಆದಿಯಿಂದ ಅಂತ್ಯದ ತನಕ ಸಂಪೂರ್ಣ ಹಿಡಿತ ಸಾಧಿಸಿದ ವಿಶ್ವದ ನಂ.3ನೇ ತಂಡ ಬೆಲ್ಜಿಯಂ 5-2 ಗೋಲುಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.

ವಿಶ್ವಕಪ್ ಪಂದ್ಯವೊಂದರಲ್ಲಿ ಇದೇ ಮೊದಲ ಬಾರಿ ಬೆಲ್ಜಿಯಂ 5 ಗೋಲುಗಳನ್ನು ದಾಖಲಿಸಿ ಮಿಂಚಿದೆ.

‘ರೆಡ್ ಡೆವಿಲ್ಸ್’ ಖ್ಯಾತಿಯ ಬೆಲ್ಜಿಯಂ ಪರ ಏಡೆನ್ ಹಝಾರ್ಡ್(6ನೇ,51ನೇ ನಿಮಿಷ), ರೊಮೆಲು ಲುಕಾಕು(16ನೇ, 45+3ನೇ ನಿಮಿಷ), ಮಿಕಿ ಬ್ಯಾಟ್ಸ್‌ಶುಯಿ(90ನೇ ನಿಮಿಷ) ಗೋಲು ಬಾರಿಸಿದರು. ಟ್ಯುನಿಶಿಯ ಪರ ಬ್ರೊನ್(18ನೇ ನಿಮಿಷ) ಹಾಗೂ ಕಝ್ರಿ(90+3ನೆ ನಿಮಿಷ)ತಲಾ ಒಂದು ಗೋಲು ಬಾರಿಸಿದರು. ಆದರೆ, ಇವರಿಬ್ಬರ ಗೋಲು ಟ್ಯುನಿಶಿಯವನ್ನು ಟೂರ್ನಿಯಿಂದ ಹೊರ ನಡೆಯದಂತೆ ತಡೆಯಲು ಸಾಧ್ಯವಾಗಲಿಲ್ಲ.

 ವಿಶ್ವಕಪ್‌ನ ‘ಜಿ’ ಗುಂಪಿನಲ್ಲಿ ಸತತ ಎರಡನೇ ಜಯ ದಾಖಲಿಸಿರುವ ಬೆಲ್ಜಿಯಂ ಒಟ್ಟು ಆರು ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ಧ ಜೂ.28 ರಂದು ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯಕ್ಕೆ ಮೊದಲೇ ಅಂತಿಮ-16ರ ರೌಂಡ್‌ಗೆ ಸ್ಥಾನ ಖಚಿತಪಡಿಸಿಕೊಂಡಿದೆ.

ಹೈಲೈಟ್ಸ್

► ಬೆಲ್ಜಿಯಂ ಇದೇ ಮೊದಲ ಬಾರಿ ವಿಶ್ವಕಪ್ ಪಂದ್ಯವೊಂದರಲ್ಲಿ ಐದು ಗೋಲು ಬಾರಿಸಿದ ಸಾಧನೆ ಮಾಡಿತು.

►ಬೆಲ್ಜಿಯಂ ವಿಶ್ವಕಪ್ ಗ್ರೂಪ್ ಹಂತದಲ್ಲಿ ಸತತ 11ನೇ ಪಂದ್ಯವನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದೆ.

►ಟ್ಯುನಿಶಿಯ ವಿಶ್ವಕಪ್‌ನಲ್ಲಿ ಆಡಿರುವ ತನ್ನ 13ನೇ ಪಂದ್ಯದಲ್ಲೂ ಸೋಲನುಭವಿಸಿದೆ.

►ಟ್ಯುನಿಶಿಯ ವಿರುದ್ಧ ಅವಳಿ ಗೋಲು ಬಾರಿಸಿದ ರೊಮೆಲು ಲುಕಾಕು ಪ್ರಸ್ತುತ ಟೂರ್ನಿಯಲ್ಲಿ ನಾಲ್ಕು ಗೋಲು ಬಾರಿಸಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಗೋಲು ದಾಖಲೆಯನ್ನು ಸರಿಗಟ್ಟಿದರು. ಲುಕಾಕು ಹಾಗೂ ರೊನಾಲ್ಡೊ ‘ಗೋಲ್ಡನ್ ಬೂಟ್’ ಪ್ರಶಸ್ತಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

►ಲುಕಾಕು ಬೆಲ್ಜಿಯಂ ಪರ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲುಗಳನ್ನು ಬಾರಿಸಿರುವ ಮಾರ್ಕ್ ವಿಲ್‌ಮೊಟ್ಸ್(5 ಗೋಲು) ದಾಖಲೆಯನ್ನು ಸರಿಗಟ್ಟಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News