ವಿಧವೆಯರ ಸಬಲೀಕರಣಕ್ಕಾಗಿ ಮಾನಸಿಕತೆ ಬದಲಾವಣೆಗೆ ಉಪರಾಷ್ಟ್ರಪತಿ ನಾಯ್ಡು ಕರೆ

Update: 2018-06-23 15:31 GMT

ಪುಣೆ,ಜೂ.23: ಶನಿವಾರ ವಿಶ್ವ ವಿಧವೆಯರ ದಿನಾಚರಣೆ ಸಂದರ್ಭಲ್ಲಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸಮಾಜದಲ್ಲಿ ಪ್ರತ್ಯೇಕತೆಯನ್ನು ಎದುರಿಸುತ್ತಿರುವ ವಿಧವೆಯರ ಉದ್ಧಾರಕ್ಕಾಗಿ ಮಾನಸಿಕತೆಯಲ್ಲಿ ಬದಲಾವಣೆಗೆ ಕರೆ ನೀಡಿದ್ದಾರೆ.

 ವಿಧವೆಯರಿಗೆ ಜೀವನೋಪಾಯ ಕೌಶಲ್ಯಗಳನ್ನು ಮತ್ತು ಅವರ ಮಕ್ಕಳ ಸಬಲೀಕರಣಕ್ಕಾಗಿ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ಹಾಗೂ ಇಂತಹ ಲಕ್ಷಾಂತರ ಮಹಿಳೆಯರು ಎದುರಿಸುತ್ತಿರುವ ಶೂನ್ಯತೆ ಮತ್ತು ನಿರರ್ಥಕತೆಯನ್ನು ಅಂತ್ಯಗೊಳಿಸಲು ಗಮನವನ್ನು ಕೇಂದ್ರೀಕರಿಸುವಂತೆ ಅವರು ಸರಕಾರಕ್ಕೆ ಸೂಚಿಸಿದರು.

ಲೂಂಬಾ ಪ್ರತಿಷ್ಠಾನವು ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನಾಯ್ಡು,ನವ ಭಾರತದ ಪರಿಕಲ್ಪನೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದನ್ನು ಒಳಗೊಂಡಿದೆ. ಅದು ಸಾಕಾರಗೊಂಡರೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ವಿಧವೆಯರ ಕಡೆಗಣನೆಯಂತಹ ಸಾಮಾಜಿಕ ಅನಿಷ್ಟಗಳು ಗತಕಾಲದ ಸಂಗತಿಗಳಾಗುತ್ತವೆ ಎಂದರು.

ವಿಧವೆಯರ ಮಕ್ಕಳಿಗೆ ಶಿಕ್ಷಣದಲ್ಲಿ ಆದ್ಯತೆ ನೀಡಲು ಕೈಜೋಡಿಸುವಂತೆ ಸರಕಾರ,ನಾಗರಿಕ ಸಮಾಜ ಮತ್ತು ಖಾಸಗಿ ಕ್ಷೇತ್ರವನ್ನು ಕೋರಿದ ಅವರು,ಒಂದು ಸಮಾಜವಾಗಿ ನಾವು ವಿಧವೆಯರತ್ತ ಸಾಮಾಜಿಕ ಧೋರಣೆಗಳ ಬಗ್ಗೆ ಮತ್ತು ಅವರಿಗೆ ಅಂಟಿಕೊಂಡಿರುವ ಕಳಂಕ,ಅವಮಾನ ಮತ್ತು ಪ್ರತ್ಯೇಕತೆಯನ್ನು ಹೇಗೆ ನಿವಾರಿಸಬೇಕು ಎನ್ನುವುದರ ಕುರಿತು ಚಿಂತನೆ ನಡೆಸಬೇಕಿದೆ ಎಂದರು.

 ಇದೇ ವೇಳೆ,ವಿಧವೆಯರ ಉದ್ಧಾರಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಪ್ರಕರಣವೊಂದನ್ನು ಪ್ರಸ್ತಾಪಿಸಿದ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್ ಅವರು,ವಿಧವೆಯರಿಗೆ ಅವರ ಹಕ್ಕುಗಳನ್ನು ದೊರಕಿಸಲು ತನ್ನ ಸಚಿವಾಲಯವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News