ರಮೇಶ್ ಶಾ ತರಕಾರಿ ಮಾರಾಟಗಾರನಾಗಿದ್ದ: ಕುಟುಂಬ

Update: 2018-06-23 16:42 GMT

ಗೋರಖ್‌ಪುರ್, ಜೂ. 23: ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ ಉತ್ತರಪ್ರದೇಶದ ಪೊಲೀಸರಿಂದ ಪುಣೆಯಿಂದ ಬುಧವಾರ ಬಂಧಿತನಾಗಿರುವ ರಮೇಶ್ ಶಾ ಒಂದೊಮ್ಮೆ ಜೀವನ ನಡೆಸಲು ತರಕಾರಿ ಮಾರಾಟ ಮಾಡುತ್ತಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

 ಮಹಾರಾಷ್ಟ್ರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಉತ್ತರಪ್ರದೇಶದ ಎಟಿಎಸ್‌ನಿಂದ ಬಂಧಿತನಾಗಿರುವ ರಮೇಶ್ ಶಾ ಆರಂಭದಲ್ಲಿ ಆಸ್ತಿ ವ್ಯವಹಾರ ಆರಂಭಿಸಿದ್ದ. ಅನಂತರ ಸತ್ಯಂ ಎಂಬ ಹೆಸರಿನ ದೊಡ್ಡ ದಿನಸು ಅಂಗಡಿ ಆರಂಭಿಸಿದ್ದ ಎಂದು ಆತನ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆತನನ್ನು ವರ್ಗಾವಣೆ ಕಸ್ಟಡಿಗೆ ನೀಡಲು ಲಕ್ನೋಗೆ ಕರೆತರಲಾಯಿತು ಹಾಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆತನನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ರಮೇಶ್ ಶಾ ತಂದೆ ಹರಿಶಂಕರ್ ಹಾಗೂ ಅವರ ಪತ್ನಿ ಸುಶೀಲಾ 30 ವರ್ಷಗಳ ಹಿಂದೆ ಬಿಹಾರದ ಗೋಪಾಲ್‌ಗಂಜ್‌ನಿಂದ ಗೋರಖ್‌ಪುರಕ್ಕೆ ಆಗಮಿಸಿದ್ದರು. ಮೊಹದಾದಿಪುರ್ ಪ್ರದೇಶದ ಛರ್ಫಾತಕ್ ಓವರ್‌ಬ್ರಿಡ್ಜ್‌ನಲ್ಲಿ ಅವರು ತರಕಾರಿ ಮಾರುತ್ತಿದ್ದರು. ರಮೇಶ್ ಶಾ ದೊಡ್ಡವನಾದಂತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ವರ್ಷಗಳ ಹಿಂದೆ ಶಾ ಮೆಡಿಕಲ್ ರಸ್ತೆಯಲ್ಲಿ ಸತ್ಯಂ ಸಂಸ್ಥೆಯನ್ನು ಆರಂಭಿಸಿದ್ದ.

ಶಾ ಆಸ್ತಿ ವ್ಯವಹಾರ ನಡೆಸುತ್ತಿದ್ದಾನೆ ಎಂದು ಕುಟುಂಬದವರು ನಂಬಿದ್ದರು. ಆದರೆ, ಪಾಕಿಸ್ತಾನದ ನಿರ್ವಹಣೆದಾರರು ನೀಡಿದ ಲಕ್ಷಾಂತರ ರೂಪಾಯಿಯನ್ನು ಭಯೋತ್ಪಾದಕರಿಗೆ ವರ್ಗಾಯಿಸುವಲ್ಲಿ ಶಾ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News