ದಿಲ್ಲಿ ದರ್ಬಾರ್

Update: 2018-06-23 18:43 GMT

ಜೇಟ್ಲಿಗೆ ಕಾಡುತ್ತಿರುವ ಅಭದ್ರತೆ

ಭಾರತದ ವಿತ್ತ ಸಚಿವರು ಯಾರೆಂದು ಅಧಿಕಾರದ ಪಡಸಾಲೆಯಲ್ಲಿ ಪಿಸುಮಾತಿನಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಯನ್ನು ಈಗ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಬಹಿರಂಗವಾಗಿ ಕೇಳಿದ್ದಾರೆ. ಅಷ್ಟೇ ಅಲ್ಲ, ಸರಕಾರದಲ್ಲಿ ಮೂಡಿರುವ ಗೊಂದಲವನ್ನು ಕೂಡಾ ಅವರು ಎತ್ತಿತೋರಿಸಿದ್ದಾರೆ. ‘‘ಪ್ರಧಾನಿಯವರ ಕಾರ್ಯಾಲಯದ ವೆಬ್‌ಸೈಟ್, ಪಿಯೂಶ್ ಗೋಯಲ್ ಹಣಕಾಸು ಸಚಿವರೆಂಬುದಾಗಿಯೂ ಮತ್ತು ಜೇಟ್ಲಿ ಖಾತೆರಹಿತ ಸಚಿವರೆಂದು ಹೇಳಿದೆ. ಆದಾಗ್ಯೂ ವಿತ್ತ ಸಚಿವಾಲಯದ ವೆಬ್‌ಸೈಟ್, ಜೇಟ್ಲಿ ಹಣಕಾಸು ಸಚಿವರೆಂದು ತೋರಿಸುತ್ತಿದೆ’’ ಎಂದು ಸ್ವಾಮಿ ತಿಳಿಸಿದ್ದರು. ಅರುಣ್‌ ಜೇಟ್ಲಿಯವರು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್‌ರ ರಾಜೀನಾಮೆಯನ್ನು ಫೇಸ್‌ಬುಕ್‌ನಲ್ಲಿ ಘೋಷಿಸಿರುವುದು, ಹಣಕಾಸು ಸಚಿವಾಲಯದ ಅಧಿಕಾರಿಗಳ ಜೊತೆ ವೀಡಿಯೊ ಕಾನ್ಫರೆನ್ಸ್‌ಗಳನ್ನು ನಡೆಸುತ್ತಿರುವುದು ಮತ್ತು ರಾಜಕೀಯ ಹಾಗೂ ಆರ್ಥಿಕತೆಯ ಬಗ್ಗೆ ಬ್ಲಾಗ್‌ಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಹೀಗೆ ಹೇಳಿದ್ದಾರೆ.

ಮೂತ್ರಕೋಶದ ಕಸಿ ಶಸ್ತ್ರಕ್ರಿಯ ಬಳಿಕ ಚೇತರಿಸಿಕೊಳ್ಳುತ್ತಿರುವ ಜೇಟ್ಲಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಚಿವಾಲಯದ ವ್ಯವಹಾರಗಳಲ್ಲಿ ಈಗಲೂ ತನ್ನನ್ನು ತೊಡಗಿಸಿಕೊಂಡಿದ್ದೇನೆ ಎಂಬುದನ್ನು ತೋರಿಸಿಕೊಡಲು ಜೇಟ್ಲಿ ಭಾರೀ ಶ್ರಮಿಸುತ್ತಿರುವುದನ್ನು ಕಂಡಾಗ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ 65 ವರ್ಷ ವಯಸ್ಸಿನ ಈ ನಾಯಕನಿಗೆ ಆತಂಕದ ಭಾವನೆ ಮೂಡಿದೆಯೇ ಎಂದು ಹಲವರು ಅಚ್ಚರಿಗೊಂಡಿದ್ದಾರೆ. ನಿರ್ಮಲಾ ಸೀತಾರಾಮನ್ ಹಾಗೂ ಗೋಯಲ್‌ರಂತಹವರು ಸಂಪುಟದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿರುವ ಇತ್ತೀಚಿನ ದಿನಗಳಲ್ಲಿ ಜೇಟ್ಲಿ ಈಗ ಪ್ರಧಾನಿಯವರ ‘ಮುದ್ದಿನ ಕಣ್ಮಣಿ’ಯಾಗಿ ಉಳಿದಿಲ್ಲ. ಹೀಗಾಗಿ ಜೇಟ್ಲಿಯವರು ಮನೆಯಲ್ಲಿದ್ದುಕೊಂಡೇ, ರಾಹುಲ್ ಗಾಂಧಿ ಅಥವಾ ಇತರ ವಿಷಯಗಳ ಬಗ್ಗೆ ಕಮೆಂಟ್ಸ್‌ಗಳನ್ನು ಪೋಸ್ಟ್ ಮಾಡುತ್ತಿರುವಂತೆ ಕಾಣುತ್ತದೆ. ರಾಜಕೀಯದಲ್ಲಿ ಪ್ರಸ್ತುತರಾಗಿ ಉಳಿಯಬೇಕಾದರೆ ಇಷ್ಟಾದರೂ ಮಾಡಲೇಬೇಕು ತಾನೇ?.


 ಕಾಂಗ್ರೆಸ್‌ನ ಸಮಸ್ಯೆಗಳು

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ದಿಲ್ಲಿಯಲ್ಲಿ ತರಾತುರಿಯಲ್ಲಿ ಏರ್ಪಡಿಸಿದ್ದ ಇಫ್ತಾರ್‌ಕೂಟವು ಅಂದುಕೊಂಡಂತೆ ನಡೆದಿರುವ ಹಾಗೆ ಕಾಣುತ್ತಿಲ್ಲ. ಈ ಕಾರ್ಯಕ್ರಮದ ಬಗ್ಗೆ ಭಾರೀ ಪ್ರಚಾರವಿತ್ತಾದರೂ, ಅದರಲ್ಲಿ ಅಂತಃಸತ್ವ ಕಡಿಮೆಯಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳು ಏಕತೆಯನ್ನು ಪ್ರದರ್ಶಿಸಲಿವೆಯೆಂದು ಹೇಳಿಕೊಳ್ಳಲಾಗಿತ್ತಾದರೂ, ಅನೇಕ ನಾಯಕರು ಗೈರಾಗಿದ್ದುದರಿಂದ, ಅಂತಹದ್ದೇನೂ ಕಂಡುಬರಲಿಲ್ಲ. ಇದೇ ಇಫ್ತಾರ್ ಕೂಟದಲ್ಲಿ ತಮಗೆ ಪ್ರಾಮುಖ್ಯತೆ ನೀಡದಿದ್ದುದಕ್ಕಾಗಿ ಹಲವು ಹಿರಿಯ ಕಾಂಗ್ರೆಸ್ ನಾಯಕರು ಕಸಿವಿಸಿಗೊಂಡಿದ್ದರು.

ಅಹ್ಮದ್ ಪಟೇಲ್, ಗುಲಾಂ ನಬಿ ಆಝಾದ್, ಶೀಲಾ ದೀಕ್ಷಿತ್, ಅಶೋಕ್ ಗೆಹ್ಲೋಟ್, ಆನಂದ್ ಶರ್ಮಾ, ಮುಕುಲ್ ವಾಸ್ನಿಕ್ ಹಾಗೂ ಕೈಬೆರಳೆಣಿಕೆಯಷ್ಟು ಯುವ ನಾಯಕರು ಮಾತ್ರವೇ ಮುಂಚೂಣಿಯಲ್ಲಿದ್ದರು. ಕೆಲವು ನಾಯಕರು ತಾವಾಗಿಯೇ ಮೂಲೆಯಲ್ಲಿ ಕುಳಿತುಕೊಂಡಿದ್ದರೆ, ಇನ್ನು ಕೆಲವರು ಹಿಂದಿನ ಸಾಲಿನಲ್ಲಿದ್ದರು. ಅವರು ಅತಿಥಿಗಳ ಜೊತೆ ಬೆರೆಯಲೂ ಇಲ್ಲ. ಇಫ್ತಾರ್‌ಕೂಟದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಹಲವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ವಿರುದ್ಧ ಮಾತನಾಡಿದರು. ರಾಹುಲ್ ಗಾಂಧಿ, ಒಂದು ರೀತಿಯಲ್ಲಿ ಪ್ರತಿಪಕ್ಷಗಳ ನಾಯಕರನ್ನು ಒಗ್ಗೂಡಿಸಲು ವಿಫಲರಾಗಿದ್ದರೆ, ಇನ್ನೊಂದೆಡೆ ತನ್ನ ಪಕ್ಷದ ನಾಯಕರನ್ನು ಕೂಡಾ ದೂರವಿಟ್ಟಿದ್ದರು.


ಕನ್ಹಯ್ಯ ಹಾಗೂ ಶೆಹ್ಲಾ ರಶೀದ್

ಕನ್ಹಯ್ಯಕುಮಾರ್ ಜೊತೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಮುಷ್ಕರ ನಡೆಸುವ ಮೂಲಕ ಭಾರೀ ಪ್ರಸಿದ್ಧಿಗೆ ಬಂದ, ಯುವ ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಶೀದ್, ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಕನ್ಹಯ್ಯಾ ಕುಮಾರ್ ಕೂಡಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನ್ನ ತವರು ಕ್ಷೇತ್ರವಾದ ಬಿಹಾರದ ಬೆಗುಸರಾಯ್‌ನಿಂದ ಸ್ಪರ್ಧಿಸಲಿದ್ದಾರೆಂದು ಹೇಳಲಾಗುತ್ತಿದೆ. ಶೆಹ್ಲಾ ರಶೀದ್ ಅವರು ಉತ್ತರಪ್ರದೇಶದಲ್ಲಿರುವ ಮುಸ್ಲಿಂ ಬಾಹುಳ್ಯದ ಕ್ಷೇತ್ರವೊಂದರ ಮೇಲೆ ಕಣ್ಣಿರಿಸಿದ್ದಾರೆನ್ನಲಾಗಿದೆ. ಇವರಿಬ್ಬರೂ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಗಳಾಗುವ ಸಾಧ್ಯತೆಯಿದೆ. ಆದರೆ ಈ ವಿಷಯದ ಬಗ್ಗೆ ಈ ಇಬ್ಬರೂ ಯುವ ಹೋರಾಟಗಾರರು ಸದ್ಯದ ಮಟ್ಟಿಗೆ ವೌನ ವಹಿಸಿದ್ದಾರೆ.


ಮಹಾವಿಭಜನೆ
 ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕನ್ ಅವರ ನಡುವಿನ ಒಡಕಿಗೆ ತೇಪೆಹಚ್ಚಿರುವುದು, ಹಲವು ಹಿರಿಯ ಕಾಂಗ್ರೆಸ್ ನಾಯಕರನ್ನು ಗೊಂದಲದಲ್ಲಿ ಸಿಲುಕಿಸಿದೆ ಹಾಗೂ ಮುಂದಿನ ಕಾರ್ಯತಂತ್ರದ ಬಗ್ಗೆ ಅವರನ್ನು ಅನಿಶ್ಚಿತತೆಯೆಡೆಗೆ ದೂಡಿದೆ. ಶೀಲಾ ದೀಕ್ಷಿತ್ ಯುಗ ಕೊನೆಗೊಂಡಿದೆಯೆಂದು ನಂಬಿದ್ದ ಬಹುತೇಕ ನಾಯಕರು, ಮಾಕನ್ ಜೊತೆ ಮೈತ್ರಿ ಬಯಸಿ, ಆಕೆಯನ್ನು ತೊರೆದಿದ್ದರು. ಆದರೆ ಈಗ ರಾಹುಲ್‌ರ ಒತ್ತಾಯದಿಂದಾಗಿ ಮಾಕನ್ ಅವರು ಶೀಲಾ ಜೊತೆ ಕೆಲಸ ಮಾಡುವಂತಾಗಿದೆ. ಇದು ಇತರ ನಾಯಕರನ್ನು ಸಂದಿಗ್ಧತೆಗೆ ಸಿಲುಕಿಸಿದೆ.

ಕಾಂಗ್ರೆಸ್‌ನ ಹಲವಾರು ಯುವ ನಾಯಕರು ಸಹ ದೀಕ್ಷಿತ್ ಪುತ್ರ ಸಂದೀಪ್ ಜೊತೆ ನಂಟು ಕಡಿದುಕೊಂಡಿದ್ದರು. ಆದಾಗ್ಯೂ, ಈಗ ಸಂದೀಪ್ ದಿಲ್ಲಿ ರಾಜಕೀಯದಲ್ಲಿ ಮತ್ತೆ ಹೊರಹೊಮ್ಮಿದ್ದಾರೆ. ಶೀಲಾ ದೀಕ್ಷಿತ್ ಹಾಗೂ ಮಾಕನ್ ನಡುವೆ ತಮ್ಮ ನಿಷ್ಠೆಯನ್ನು ವಿಭಜಿಸಿಕೊಳ್ಳಲು ಬಹುತೇಕ ಕಾಂಗ್ರೆಸ್ ನಾಯಕರು ಪರದಾಡುತ್ತಿದ್ದಾರೆ. ಇನ್ನು ಕೆಲವು ಹಿರಿಯ ನಾಯಕರು ಶೀಲಾ ದೀಕ್ಷಿತ್ ಅವರಿಂದ ದೂರಸರಿದುದಕ್ಕಾಗಿ ತಾವು ‘ಶಿಕ್ಷೆ ಅನುಭವಿಸುವ’ ಸಾಧ್ಯತೆಯ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಪಕ್ಷಕ್ಕಾಗಿ ದೀರ್ಘಸಮಯದಿಂದ ಕಷ್ಟಪಟ್ಟು ಶ್ರಮಿಸುತ್ತಿದ್ದವರಿಗೆ, ಈಗಿನ ಪರಿಸ್ಥಿತಿಯಿಂದ ಸಂತಸವಾಗಿಲ್ಲ. ಆದರೆ ಕನಿಷ್ಠ ಪಕ್ಷ ಈ ತನಕವಾದರೂ, ಅವರಿಗೆ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ. ಒಟ್ಟಿನಲ್ಲಿ ದಿಲ್ಲಿಯ ರಾಜಕೀಯ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.


ಸ್ಪಷ್ಟ ಚಿತ್ರಣ
 ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳಬೇಕೆಂಬ ವ್ಯಾಮೋಹವಿರುವುದು ಎಲ್ಲರಿಗೂ ತಿಳಿದಿದೆ. ಅವರ ಆಪ್ತರಾದ ಬಿಜೆಪಿ ವರಿಷ್ಠ ಅಮಿತ್ ಶಾ ಕೂಡಾ ಈ ವಿಷಯದಲ್ಲಿ ವಿಭಿನ್ನರಾಗಿಲ್ಲ. ಛಾಯಾಚಿತ್ರಗಳಲ್ಲಿ ತನ್ನ ಸ್ವರೂಪದ ಬಗ್ಗೆ ಅಮಿತ್ ಶಾ ಎಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತಾರೆಂದರೆ, ಅವರು ಚುನಾವಣಾ ಪ್ರಚಾರಕ್ಕೆ ಹೋದಾಗಲೆಲ್ಲಾ ಓರ್ವ ನಿಷ್ಠಾವಂತ ಛಾಯಾಗ್ರಾಹಕ ಕೂಡಾ ಅವರನ್ನು ಹಿಂಬಾಲಿಸುತ್ತಿರುತ್ತಾನೆ.

ಕೆಲವೇ ಕೆಲವು ಛಾಯಾಗ್ರಾಹಕರು ಮಾತ್ರ ತನ್ನ ಸರಿಯಾದ ಫೋಟೋಗಳನ್ನು ತೆಗೆಯಬಲ್ಲರು ಎಂದು ಶಾ ಭಾವಿಸಿದ್ದಾರೆಂದು, ಅವರಿಗೆ ನಿಕಟರಾಗಿರುವ ನಾಯಕರು ಹೇಳುತ್ತಾರೆ. ಈ ಕಾರಣಕ್ಕಾಗಿಯೇ, ಹಿಂದೆಯೂ ಕೂಡಾ, ಎಲ್ಲಾ ಮಾಧ್ಯಮ ಸಂಸ್ಥೆಗಳು ಹಾಗೂ ಪ್ರಕಾಶನ ಸಂಸ್ಥೆಗಳಿಗೆ, ಶಾ ಅವರ ಹಲವು ಚಿತ್ರಗಳನ್ನೊಗೊಂಡ ಪೆನ್‌ಡ್ರೈವ್‌ಗಳನ್ನು ನೀಡಲಾಗಿತ್ತು. ಅಗತ್ಯವಿದ್ದಾಗಲೆಲ್ಲಾ ಆ ಸಂಗ್ರಹದಲ್ಲಿರುವ ಛಾಯಾಚಿತ್ರಗಳನ್ನು ಬಳಸಿಕೊಳ್ಳುವಂತೆ ಅವುಗಳಿಗೆ ಸೂಚಿಸಲಾಗಿತ್ತು. ಆದರೆ ಅನೇಕರು ಅದನ್ನು ಅನುಸರಿಸಲಿಲ್ಲ. ಪತ್ರಿಕೆಗಳಲ್ಲಿ ತಾನು ಹೇಗೆ ಕಾಣಿಸಿಕೊಳ್ಳುವನೆಂಬುದನ್ನು ಶಾ ಗಂಭೀರವಾಗಿ ಪರಿಗಣಿಸಿದ್ದಾರೆಂಬುದನ್ನು ತಿಳಿದ ಬಳಿಕ ಅವು ಹೇಗೆ ವರ್ತಿಸುತ್ತವೆ ಎಂಬುದನ್ನು ನಾವೀಗ ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News