×
Ad

ಸೂಫಿ ಪರಂಪರೆಯ ‘ದರ್ವೇಸು’

Update: 2025-12-17 11:40 IST

ಸಾಂದರ್ಭಿಕ ಚಿತ್ರ

ದರ್ವೇಸು ಸಮುದಾಯದ್ದು ಧಾರ್ಮಿಕ ವೃತ್ತಿ ಪರಂಪರೆ ಎಂದು ಪರಿಭಾವಿಸಬಹುದು. ದರ್ವೇಸುಗಳು ದರ್ಗಾ, ಮಸೀದಿ, ಇಲ್ಲವೇ ಇವರದೇ ಆದ ಮಕಾನ್/ಮಠಗಳಲ್ಲಿ ನೆಲೆನಿಂತು ಅಲ್ಲಿಯೇ ಸೇವೆ ಮಾಡುತ್ತಾ ದಾನ ಪಡೆಯುವವರಾಗಿದ್ದಾರೆ. ಇನ್ನೂ ಕೆಲವರು ಊರೂರು ಅಲೆದು ಹಾಡು, ಹಠಯೋಗ ಸಾಧನೆಗಳನ್ನು ಪ್ರದರ್ಶಿಸಿ ದಾನ, ಭಿಕ್ಷೆಗಳನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಿಂದ ಇವರನ್ನು ಅಲೆಮಾರಿಗಳು ಎಂದು ಪರಿಗಣಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ನಮ್ಮ ಆಯೋಗ ಅತಿ ಹೆಚ್ಚು ಕ್ಷೇತ್ರಕಾರ್ಯ ಮಾಡಿದ್ದು ದರ್ವೇಸು ಸಮುದಾಯದ ಕುರಿತಂತೆ. ಬಳ್ಳಾರಿಯ ಬಡಮಕಾನ್, ಕಂಪ್ಲಿ, ಗಂಗಾವತಿ, ಭದ್ರಾವತಿಯ ಧರ್ವೇಸು ಕಾಲನಿ, ಶಿವಮೊಗ್ಗ, ಚಿಕ್ಕಮಗಳೂರಿನ ದಂಟರಮಕ್ಕಿ, ಬಾಬಾಬುಡಾನ್‌ಗಿರಿ ಮುಂತಾದೆಡೆ ದರ್ವೇಸು ಸಮುದಾಯವನ್ನು ಹುಡುಕಾಡುತ್ತಾ ಅಲೆದ ಅನುಭವ ಅನನ್ಯ. ‘ಆಲ್ ಕರ್ನಾಟಕ ದರ್ವೇಶ್ ಆಂಡ್ ಸೂಫಿ ಕ್ಯಾಟಗರಿ-1 ಅಸೋಸಿಯೇಷನ್’ ರಾಜ್ಯಾದ್ಯಕ್ಷ ಸೈಯದ್ ಖಲಾಮುಲ್ಲಾ ಶಾ ದರ್ವೇಸ್‌ರವರು ನಮ್ಮನ್ನು ಕರೆದೊಯ್ದು ನಮಗೆ ದರ್ವೇಸು ಸಮುದಾಯದ ನಿಜ ದರ್ಶನ ಮಾಡಿಸಿದರು.

ದರ್ವೇಸು, ದರ್ವೇಸಿ, ದರ್ವೇಶ್, ಫಕೀರ್ ಎಂದು ಕರೆಯಲಾಗುವ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಹತ್ತಿರದಿಂದ ಕಣ್ಣಾರೆ ಕಂಡೆವು. ಕರ್ನಾಟಕದಲ್ಲಿ ಬೀದರ್, ಬಿಜಾಪುರ, ಗುಲ್ಬರ್ಗಾ, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಹಾಸನ, ಮೈಸೂರು, ಕೋಲಾರ, ಚಾಮರಾಜನಗರ ಮತ್ತು ಬೆಂಗಳೂರಿನಲ್ಲೂ ಇರುವ ದರ್ವೇಸು ಅಥವಾ ಫಕೀರ್ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಮತ್ತು ಇಸ್ಲಾಮ್ ಮತವನ್ನು ಅವಲಂಬಿಸಿರುವ ಸಮುದಾಯವಾಗಿದ್ದು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ ಒಂದರಲ್ಲಿ ಇದೆ.

ದರ್ವೇಸು ಸಮುದಾಯ ಸೂಫಿ ತಾತ್ವಿಕ ಪರಂಪರೆಗೆ ಸೇರಿದ್ದು, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವುದು ಹಾಗೂ ದಾನ ಇಲ್ಲವೇ ಭಿಕ್ಷೆಯ ಮೂಲಕ ತಮ್ಮ ಜೀವನವನ್ನು ನಿರ್ವಹಿಸಿಕೊಳ್ಳುವ ಅನನ್ಯತೆಯನ್ನು ತನ್ನದಾಗಿಸಿಕೊಂಡಿದೆ. ದರ್ವೇಸು ಎಂಬ ಪದದ ಮೂಲವು ಪರ್ಷಿಯನ್ ಭಾಷೆಯದಾಗಿದ್ದು, ಇದರ ಅರ್ಥ ಧಾರ್ಮಿಕ ಸೇವಕ ಎಂದಾಗುತ್ತದೆ. ದರ್ವೇಸ್ ಎಂಬ ಪದದ ಅರ್ಥ ‘ದರ್ವಾಸ್’ ಅಂದರೆ ಬಾಗಿಲು. ಪ್ರೀತಿ, ಕರುಣೆ, ಮಾನವೀಯತೆಗೆ ಹೃದಯದ ಬಾಗಿಲು ಸದಾ ತೆರೆದಿದೆ ಎಂದರ್ಥ. ದರ್ವೇಸುಗಳೇ ಆದ ಫಕೀರ್ ಎಂಬ ಪದದ ಮೂಲ ಅರಬಿಕ್ ಭಾಷೆಯದಾಗಿದ್ದು, ಅಧ್ಯಾತ್ಮ ಮತ್ತು ಆತ್ಮಾಭಿಮಾನವನ್ನು ಸೂಚಿಸುತ್ತದೆ. ದರ್ವೇಸು ಮತ್ತು ಫಕೀರ್ ಎಂಬ ಎರಡೂ ಪದಗಳು ಧಾರ್ಮಿಕ ಅಥವಾ ಆಧ್ಯಾತ್ಮಿಕ ಅನನ್ಯತೆಯನ್ನು ಸೂಚಿಸುತ್ತವೆ. ಇದರಿಂದಾಗಿ ದರ್ವೇಸು ಸಮುದಾಯದ್ದು ಧಾರ್ಮಿಕ ವೃತ್ತಿ ಪರಂಪರೆ ಎಂದು ಪರಿಭಾವಿಸಬಹುದು. ದರ್ವೇಸುಗಳು ದರ್ಗಾ, ಮಸೀದಿ, ಇಲ್ಲವೇ ಇವರದೇ ಆದ ಮಕಾನ್/ಮಠಗಳಲ್ಲಿ ನೆಲೆನಿಂತು ಅಲ್ಲಿಯೇ ಸೇವೆ ಮಾಡುತ್ತಾ ದಾನ ಪಡೆಯುವವರಾಗಿದ್ದಾರೆ. ಇನ್ನೂ ಕೆಲವರು ಊರೂರು ಅಲೆದು ಹಾಡು, ಹಠಯೋಗ ಸಾಧನೆಗಳನ್ನು ಪ್ರದರ್ಶಿಸಿ ದಾನ, ಭಿಕ್ಷೆಗಳನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಿಂದ ಇವರನ್ನು ಅಲೆಮಾರಿಗಳು ಎಂದು ಪರಿಗಣಿಸಬಹುದಾಗಿದೆ.

ಇಸ್ಲಾಮ್ ಧರ್ಮ ಸಂಸ್ಥಾಪನೆಯ ಮೂರನೇ ತಲೆಮಾರಿನಿಂದ ಆರಂಭಗೊಂಡ ದರ್ವೇಸು ಪರಂಪರೆ, ಬಗ್ದಾದ್‌ನಿಂದ ಆರಂಭಗೊಂಡರೂ, ಭಾರತದಲ್ಲಿ ಅಜ್ಮೀರ್‌ನ ಖ್ವಾಜಾ ಗರೀಬ್ ನವಾಝ್‌ರಿಂದ ಆರಂಭವಾಗಿ, ಕರ್ನಾಟಕದ ದರ್ವೇಸುಗಳು ಗುಲ್ಬರ್ಗಾ, ಬಿಜಾಪುರ, ಬೀದರ್, ಬಾಬಾಬುಡಾನ್ ಗಿರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿರುವ ಪ್ರತೀ ದರ್ಗಾ ಹಾಗೂ ದರ್ಗಾ ಕೇಂದ್ರಿತ ಭೌಗೋಳಿಕ ವಲಯದಲ್ಲಿ ದರ್ವೇಸು/ಫಕೀರರನ್ನು ಕಾಣಬಹುದು. ದರ್ಗಾವನ್ನು ಕೇಂದ್ರವಾಗಿಟ್ಟುಕೊಂಡು ಅವರದೇ ಆದ ಚೌಕ ಅಥವಾ ಮಂಡಲಗಳನ್ನು ಕಲ್ಪಿಸಿಕೊಂಡಿರುತ್ತಾರೆ. ಪ್ರತೀ ದರ್ವೇಸು ಕುಟುಂಬವು ಇಂತಹ ಚೌಕಗಳ ಕಲ್ಪಿತ ವ್ಯಾಪ್ತಿಯಲ್ಲಿರುತ್ತವೆ. ದರ್ವೇಸುಗಳು ಎಲ್ಲೆಡೆ ಸಂಚಾರಕ್ಕೆ ಮುಕ್ತರಾಗಿದ್ದರೂ ಭಿನ್ನ ಚೌಕಗಳ ಅಸ್ತಿತ್ವ ಸಮುದಾಯ ಮಾನ್ಯವಾಗಿರುತ್ತದೆ.

ದರ್ವೇಸು ಸಮುದಾಯವು ಗುರುದೀಕ್ಷಾ ವಿಧಾನವನ್ನು ಹೊಂದಿದ್ದು, ಕುಲವೃತ್ತಿಯನ್ನು ಮುಂದುವರಿಸ ಬಯಸುವ ಪ್ರತೀ ದರ್ವೇಸಿಯೂ ಗುರುವಿನಿಂದ ದೀಕ್ಷೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ದೀಕ್ಷಾ ಕ್ರಮದಲ್ಲಿ ಮೂರು ಹಂತಗಳಿದ್ದು, ಮೊದಲನೆಯದನ್ನು ಮುರೀದ್ ಎಂದು, ಎರಡನೆಯದನ್ನು ತರೀಖ್ ಎಂದು ಮೂರನೆಯದನ್ನು ಖಿಲಾಫತ್ ಎಂದು ಕರೆಯುತ್ತಾರೆ. ದೀಕ್ಷಾ ಬದ್ಧರಾದ ದರ್ವೇಸಿಗಳು ಲಂಗೋಟಿ, ಲುಂಗಿಗಳನ್ನು ಧರಿಸಿ ಭಿಕ್ಷಾಪಾತ್ರೆ ಹಿಡಿಯುವುದು ಕಡ್ಡಾಯವಾಗಿರುತ್ತದೆ. ದಪ್ತ್ ಸುಲ್ತಾನಿ, ಗುರ್ಜ್ ಇವರ ಸಾಮಾನ್ಯ ವಸ್ತುಗಳಾಗಿರುತ್ತವೆ. ರಫಾಯಿ, ಜಲಾಲಿಗಳು ತಲವಾರನ್ನು ಧರಿಸಿರುತ್ತಾರೆ. ಇವರಲ್ಲಿ ಮುಖ್ಯಸ್ಥರನ್ನು ಸರ್ ಗುರು ಸರ್ ಖಲೀಫಾ ಎಂದು ಕರೆಯುತ್ತಾರೆ. ದರ್ವೇಸುಗಳಲ್ಲಿ 1. ಬಾನುವಾ, 2. ರಫಾಯಿ, 3. ಜಲಾಲ್(ಖಾದ್ರಿಯಾ, ಖಲಂದರಿಯಾ) 4. ಅಹಲೇತಪ್ಕಾತ್ ಎಂದು ನಾಲ್ಕು ಒಳ ಪಂಗಡಗಳಿರುವುದು ತಿಳಿದುಬರುತ್ತದೆ. ಅಲೆಮಾರಿ ಭಿಕ್ಷಾಟನೆಯನ್ನು ತೊರೆದು ನೆಲೆನಿಂತವರನ್ನು ಮಕಾಂದಾರರೆಂದು ಕರೆಯುತ್ತಾರೆ. ಈ ಎಲ್ಲಾ ವಿವರಗಳನ್ನು ನಮ್ಮ ಆಯೋಗದಲ್ಲಿ ನಾವೇ ಸಂಗ್ರಹಿಸಿದ ದಾಖಲೆಗಳ ಆಧಾರದ ಮೇಲೆ ಇಲ್ಲಿ ವಿವರಗಳನ್ನು ನೀಡುತ್ತಿದ್ದೇನೆ. ಸೂಫಿ ಸಮುದಾಯದ ಕುರಿತು ಹೆಚ್ಚಿನ ಮಾಹಿತಿ ಪ್ರೊ. ರಹಮತ್ ತರೀಕೆರೆಯವರು ಬರೆದ ‘ಕರ್ನಾಟಕದ ಸೂಫಿಗಳು’ ಪುಸ್ತಕದಲ್ಲಿ ಲಭ್ಯವಿದೆ.

ದರ್ವೇಸು ಮತ್ತು ಸೂಫಿ ಪರಂಪರೆ ಭಾರತೀಯ ಅನುಭಾವಿಗಳ ಮೇಲೆ ಅಪಾರ ಪ್ರಭಾವ ಬೀರಿದಂತಿದೆ. ಮಲೆ ಮಾದೇಶ್ವರ, ಮಾಂಟೇಸ್ವಾಮಿಗಳಿಂದ ಹಿಡಿದು ಸಿದ್ದಪ್ಪಾಜಿ, ಎತ್ತಪ್ಪ, ಜುಂಜಪ್ಪ, ಕೈವಾರ ತಾತಯ್ಯ, ಗಟ್ಟಹಳ್ಳಿ ಆಂಜನಪ್ಪ, ಬೇರಿಕಿ ಪುಟ್ಟಪ್ಪ, ದಾದಿನಾಯಕನದೊಡ್ಡಿ ವೆಂಕಟಗಿರಿಯಪ್ಪ, ಶಿಶುನಾಳ ಷರೀಫಜ್ಜ ಮುಂತಾಗಿ ಅನೇಕ ಮಂದಿ ಅನುಭಾವಿಗಳು, ಶರಣರು, ತತ್ವಪದಕಾರರು ಸೂಫಿಗಳಿಂದ ಪ್ರಭಾವಿತರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಹನ್ನೆರಡನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಕರ್ನಾಟಕದಲ್ಲಿ ಕುಳಿತು ಅನುಭಾವಿ ವಚನಗಳನ್ನು ಬರೆಯುತ್ತಿದ್ದಾಗ, ಅದೇ ಸಂದರ್ಭದಲ್ಲಿ ಜಲಾಲುದ್ದೀನ್ ರೂಮಿ ಕೂಡ ಪರ್ಷಿಯಾದಲ್ಲಿ ಕುಳಿತು ಅನುಭಾವಿ ಪದಗಳನ್ನು ಬರೆಯುತ್ತಿದ್ದದನ್ನು ಕಂಡಾಗ ನಮಗೆ ಎಲ್ಲೋ ಸೂಫಿ ಮತ್ತು ಶರಣ ಪರಂಪರೆಗಳು ಒಂದೇ ಧಾರೆಯಲ್ಲಿ ಯೋಚಿಸಿದ ದಾಟಿ ಆಶ್ಚರ್ಯವನ್ನುಂಟು ಮಾಡುತ್ತದೆ.

ದರ್ವೇಸು ಸಮುದಾಯದ ಅಧ್ಯಾತ್ಮದ ಎತ್ತರವನ್ನು ಅರಿಯದವರು ದರ್ವೇಸು ಸಮುದಾಯವನ್ನು ಕೇವಲ ಬೈಗುಳವಾಗಿ ಬಳಸುತ್ತಿರುವುದು ದುರಂತ.

ಅತ್ಯಂತ ಬಡವರು ಮತ್ತು ನಿರ್ಗತಿಕರಾದ ದರ್ವೇಸುಗಳು ಸರಕಾರದ ಎಲ್ಲಾ ಸವಲತ್ತುಗಳಿಂದಲೂ ವಂಚಿತರಾಗಿದ್ದಾರೆ. ಸರಕಾರಕ್ಕೂ ಹೃದಯವೆನ್ನುವುದು ಇದ್ದರೆ ದರ್ವೇಸುಗಳನ್ನೂ ತನ್ನ ಹೃದಯದ ಬಾಗಿಲು ತೆರೆದು ಒಮ್ಮೆ ನೋಡಲಿ...

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸಿ.ಎಸ್. ದ್ವಾರಕಾನಾಥ್

contributor

Similar News