ಮಹಾರಾಷ್ಟ್ರದಲ್ಲಿ 3 ಲಕ್ಷ ಜನರಿಗೆ ಉದ್ಯೋಗ ನಷ್ಟ, 15 ಕೋಟಿ ರೂ. ನಷ್ಟ!

Update: 2018-06-24 16:21 GMT

ಮುಂಬೈ,ಜೂ.24: ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧದಿಂದಾಗಿ 15,000 ಕೋ.ರೂ.ನಷ್ಟ ಉಂಟಾಗಲಿದೆ ಮತ್ತು ಸುಮಾರು ಮೂರು ಲಕ್ಷ ಜನರು ತಮ್ಮ ಜೀವನೋಪಾಯ ಕಳೆದುಕೊಳ್ಳಲಿದ್ದಾರೆ ಎಂದು ಭಾರತೀಯ ಪ್ಲಾಸ್ಟಿಕ್ ಬ್ಯಾಗ್‌ಗಳ ತಯಾರಕರ ಸಂಘವು ಆತಂಕ ವ್ಯಕ್ತಪಡಿಸಿದೆ.

ರಾಜ್ಯ ಸರಕಾರವು ಶನಿವಾರದಿಂದ ಜಾರಿಗೊಳಿಸಿರುವ ನಿಷೇಧವು ಉದ್ಯಮಕ್ಕೆ ಮರ್ಮಾಘಾತವನ್ನುಂಟು ಮಾಡಿದೆ. ರಾತ್ರಿ ಬೆಳಗಾಗುವುದರಲ್ಲಿ 15,000 ಕೋ.ರೂ.ಗಳ ನಷ್ಟದ ಜೊತೆಗೆ ಸುಮಾರು ಮೂರು ಲಕ್ಷ ಜನರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನೀಮಿತ್ ಪುನಮಿಯಾ ಅವರು ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ನಿಷೇಧದ ಬಳಿಕ ಸಂಘದ ಸುಮಾರು 2,500 ಸದಸ್ಯರಿಗೆ ತಮ್ಮ ಉದ್ಯಮಗಳನ್ನು ಮುಚ್ಚುವುದು ಬಿಟ್ಟರೆ ಬೇರೆ ದಾರಿಯುಳಿದಿಲ್ಲ ಎಂದ ಅವರು,ನಿಷೇಧವು ತಾರತಮ್ಯದಿಂದ ಕೂಡಿದೆ ಎಂದು ದೂರಿದರು.

 ಕ್ಯಾರಿಬ್ಯಾಗ್,ಬಳಸಿ ಎಸೆಯುವ ಚಮಚ ಮತ್ತು ಪ್ಲೇಟ್‌ಗಳು, ಪೆಟ್ ಬಾಟಲ್‌ಗಳು ಮತ್ತು ಥರ್ಮೊಕೋಲ್‌ನಂತಹ ಪ್ಲಾಸ್ಟಿಕ್ ಸಾಮಗ್ರಿಗಳ ತಯಾರಿಕೆ, ಬಳಕೆ, ಮಾರಾಟ,ವಿತರಣೆ ಮತ್ತು ದಾಸ್ತಾನನ್ನು ನಿಷೇಧಿಸುವುದಾಗಿ ಮಾ.23ರಂದು ಪ್ರಕಟಿಸಿದ್ದ ಸರಕಾರವು,ಇದ್ದ ದಾಸ್ತಾನನ್ನು ವಿಲೇವಾರಿ ಮಾಡಲು ಮೂರು ತಿಂಗಳ ಗಡುವು ನೀಡಿತ್ತು. ಈ ಗಡುವು ಶನಿವಾರ ಅಂತ್ಯಗೊಂಡಿದೆ.

ನಿಷೇಧದಿಂದಾಗಿ ಉದ್ಯೋಗ ನಷ್ಟವು ರಾಜ್ಯದ ಜಿಡಿಪಿಯ ಮೇಲೆ ಪರಿಣಾಮವನ್ನು ಬೀರಲಿದೆ ಮತ್ತು ಪ್ಲಾಸ್ಟಿಕ್ ಕ್ಷೇತ್ರದಿಂದ ಬ್ಯಾಂಕುಗಳ ಕೆಟ್ಟ ಸಾಲಗಳನ್ನು ಹೆಚ್ಚಿಸಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿದವು.

ನಿಷೇಧ ಉಲ್ಲಂಘನೆಗೆ ಭಾರೀ ದಂಡದ ಭೀತಿಯಿಂದಾಗಿ ಮುಂಬೈ ಮಹಾನಗರದಲ್ಲಿಯ ಚಿಲ್ಲರೆ ಮಾರಾಟಗಾರರು ಹಲವಾರು ಗ್ರಾಹಕರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಅನಾನುಕೂಲದ ವಿರುದ್ಧ ಬಳಕೆದಾರರು ದೂರಿದ್ದು,ಈ ನಿಷೇಧಕ್ಕೆ ಅರ್ಥವಿದೆಯೇ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News