ಹೈಕೋರ್ಟ್ ನ್ಯಾಯಾಧೀಶರಾಗಿ ಇಬ್ಬರು ವಕೀಲರ ನೇಮಕ: ಕೊಲಿಜಿಯಂ ಶಿಫಾರಸನ್ನು ಎರಡನೇ ಬಾರಿ ಮರಳಿಸಿದ ಸರಕಾರ

Update: 2018-06-24 16:25 GMT

  ಹೊಸದಿಲ್ಲಿ,ಜೂ.24: ಇಬ್ಬರು ವಕೀಲರನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಸರಕಾರವು ಎರಡನೇ ಬಾರಿಗೆ ವಾಪಸ್ ಕಳುಹಿಸಿದೆ. ಈ ವಕೀಲರ ವಿರುದ್ಧ ದೂರುಗಳಿವೆ ಎಂದು ಅದು ಉಲ್ಲೇಖಿಸಿದೆ. ಕೊಲಿಜಿಯಂ ಈ ಇಬ್ಬರು ವಕೀಲರ ಹೆಸರುಗಳನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಕ್ಕೆ ಮಾಡಿದ್ದ ಶಿಫಾರಸನ್ನು ಎರಡೂವರೆ ವರ್ಷಗಳ ಕಾಲ ಮೂಲೆಗುಂಪು ಮಾಡಿದ್ದ ಸರಕಾರವು ಕಳೆದ ತಿಂಗಳು ವಕೀಲರ ವಿರುದ್ಧ ದೂರುಗಳಿವೆ ಎಂಬ ಕಾರಣವನ್ನು ನೀಡಿ ಮರುಪರಿಶೀಲನೆಗಾಗಿ ಕಡತವನ್ನು ಮರಳಿಸಿತ್ತು. ಆದರೆ ಈ ದೂರುಗಳು ಕ್ಷುಲ್ಲಕ ಎಂದು ಬಣ್ಣಿಸಿದ್ದ ಕೊಲಿಜಿಯಂ ವಕೀಲರ ಹೆಸರುಗಳನ್ನು ಮರುಶಿಫಾರಸು ಮಾಡಿತ್ತು.

ಮುಹಮ್ಮದ್ ಮನ್ಸೂರ್ ಮತ್ತು ಬಷಾರತ್ ಅಲಿ ಖಾನ್ ಅವರು ಕೊಲಿಜಿಯಂ ಶಿಫಾರಸು ಮಾಡಿರುವ ವಕೀಲರಾಗಿದ್ದು, ಮನ್ಸೂರ್ ಅವರು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ದಿ.ಸಗೀರ್ ಅಹ್ಮದ್ ಅವರ ಪುತ್ರರಾಗಿದ್ದಾರೆ.

 ಕೊಲಿಜಿಯಂ ಸದಸ್ಯರಾಗಿದ್ದ ನ್ಯಾ.ಜೆ.ಚೆಲಮೇಶ್ವರ ಅವರು ಶುಕ್ರವಾರ ಸೇವೆಯಿಂದ ನಿವೃತ್ತರಾಗಿದ್ದು,ನೂತನ ಸದಸ್ಯರೋರ್ವರ ಸೇರ್ಪಡೆಯೊಂದಿಗೆ ಅದನ್ನು ಪುನರ್‌ರಚಿಸಬೇಕಿದೆ. ನಂತರವೇ ಅದು ಈ ಎರಡು ಹೆಸರುಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬೇಕಿದೆ.ಮನ್ಸೂರ್ ಮತ್ತು ಖಾನ್ ಹಿರಿಯ ಸ್ಥಾಯಿ ವಕೀಲರಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ನಿಯಮಿತವಾಗಿ ಹಾಜರಾಗುತ್ತಿದ್ದಾರೆ.

ತನ್ಮಧ್ಯೆ,ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಗೆ ನಝೀರ್ ಅಹ್ಮದ್ ಬೇಗ್ ಅವರ ಹೆಸರನ್ನು ಸೂಚಿಸಿರುವ ಶಿಫಾರಸನ್ನೂ ಮರಳಿಸಲು ಸರಕಾವು ನಿರ್ಧರಿಸಿದೆ. ಇತರ ಮೂವರಾದ ವಾಸಿಂ ಸಾದಿಕ್ ನರ್ಗಲ್,ಸಿಂಧು ಶರ್ಮಾ ಮತ್ತು ಜಿಲ್ಲಾ ನ್ಯಾಯಾಧೀಶ ರಶೀದ್ ಅಲಿ ದಾರ್ ಅವರ ಹೆಸರುಗಳನ್ನು ಕಾನೂನು ಸಚಿವಾಲಯವು ಪರಿಶೀಲಿಸುತ್ತಿದೆ.

ಬೇಗ್ ಅವರ ಹೆಸರನ್ನು ಕೊಲಿಜಿಯಮ್‌ಗೆ ವಾಪಸ್ ಮಾಡಿರುವದಕ್ಕೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News