ನ್ಯಾ. ಲೋಯಾರ ಶಂಕಾಸ್ಪದ ಸಾವಿನ ಬಗ್ಗೆ ಮೊದಲ ವರದಿ ಮಾಡಿದ ನಿರಂಜನ್ ಟಾಕ್ಲೆ

Update: 2018-06-24 17:21 GMT

ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಎಚ್. ಲೋಯಾ ಪ್ರಕರಣವನ್ನು ತೆರೆದಿಟ್ಟ ದಿಟ್ಟ ಪತ್ರಕರ್ತ ನಿರಂಜನ್ ಟಾಕ್ಲೆ, ನಾಲ್ಕನೇ ತರಗತಿಯಲ್ಲಿದ್ದಾಗ ವಕೀಲರಾಗ ಬಯಸಿದ್ದರು. 1971ರಲ್ಲಿ ರಾಜ್ಯ ಸರ್ಕಾರ, ಮಿತವೆಚ್ಚದ ಗೃಹನಿರ್ಮಾಣ ಯೋಜನೆಗಾಗಿ ಅವರ ಕುಟುಂಬದ ಹದಿನಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕಡಿಮೆ ಮೊತ್ತದ ಪರಿಹಾರ ನೀಡಿದ್ದೇ ಇದಕ್ಕೆ ಕಾರಣವಾಗಿತ್ತು. ಕುಟುಂಬ ಬಾಕಿ ಪರಿಹಾರಕ್ಕಾಗಿ ಕಾಯಬೇಕಾದ ಸ್ಥಿತಿ ಬಂದಿದ್ದರಿಂದ ಬೈಸಿಕಲ್ ಖರೀದಿಸುವ ನಿರಂಜನ್ ಕನಸು ಕೂಡಾ ಮುಂದೂಡಬೇಕಾಯಿತು.

ಆಗ ಮಹಾರಾಷ್ಟ್ರದ ನಾಸಿಕ್‍ನಲ್ಲಿ ಅವರು ಮುನ್ಸಿಪಲ್ ಶಾಲೆಯ ವಿದ್ಯಾರ್ಥಿ. ಪ್ರತಿ ದಿನ ಬೆಳಿಗ್ಗೆ ಪತ್ರಿಕೆ ಹಂಚುತ್ತಿದ್ದರು. "ನನ್ನ ತಂದೆಗೆ ಸಣ್ಣ ಪತ್ರಿಕೆ ಮತ್ತು ನಿಯತಕಾಲಿಕದ ಮಳಿಗೆ ಇತ್ತು. ನನಗೆ ಆಳವಾದ ಜ್ಞಾನ ಇಲ್ಲದ ಕಾರಣ ಅಥವಾ ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳ ಅರಿವು ಇಲ್ಲದಿದ್ದುದರಿಂದ ನನ್ನನ್ನು ಪತ್ರಿಕೆ ಮತ್ತು ನಿಯತಕಾಲಿಕಕ್ಕೆ ನಿಯೋಜಿಸಲಾಗಿತ್ತು. ನಮ್ಮ ಗ್ರಾಹಕರಿಗೆ ನಾನು ಪತ್ರಿಕೆ ಹಂಚುತ್ತಿದ್ದೆ. ಬಸ್ ನಿಲ್ದಾಣದಲ್ಲಿ ಪತ್ರಿಕೆ ಮಾರಲು ಪತ್ರಿಕೆಯ ಪ್ರಮುಖ ಸುದ್ದಿಯನ್ನು ದೊಡ್ಡದಾಗಿ ಕೂಗಿ ಹೇಳುತ್ತಿದ್ದೆ" ಎಂದು ಟಾಕ್ಲೆ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಟಾಕ್ಲೆ ತಾನು ತನಿಖಾ ವರದಿಗಾರನಾಗುತ್ತೇನೆ ಎಂಬ ಯೋಚನೆಯನ್ನೂ ಅಂಥ ಚಿಕ್ಕವಯಸ್ಸಿನಲ್ಲಿ ಮಾಡಿರಲಿಲ್ಲ. 2017ರ ನವೆಂಬರ್ 20ರಂದು 51 ವರ್ಷ ವಯಸ್ಸಿನ ನಿರಂಜನ್ ಟಾಕ್ಲೆ "ಎ ಫ್ಯಾಮಿಲಿ ಬ್ರೇಕ್ಸ್ ಇಟ್ಸ್ ಸೈಲೆನ್ಸ್: ಶಾಕಿಂಗ್ ಡೀಟೈಲ್ಸ್ ಎಮರ್ಜ್ ಇನ್ ಡೆತ್ ಆಫ್ ಜಡ್ಜ್ ಪ್ರಿಸೈಡಿಂಗ್ ಓವರ್ ಸೊಹ್ರಾಬುದ್ದೀನ್ ಟ್ರಯಲ್" ಎಂಬ ಲೇಖನವನ್ನು ಕಾರವಾನ್ ಮ್ಯಾಗಝಿನ್ ಗಾಗಿ ಬರೆದರು. ಆ ವರದಿ 2005ರಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್‍ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ಸಿಬಿಐ ನ್ಯಾಯಾಧೀಶ ಬ್ರಿಜ್‍ಗೋಪಾಲ್ ಹರ್‍ಕಿಶನ್ ಲೋಯಾ ಅವರ ಸಾವಿಗೆ ಸಂಬಂಧಿಸಿದ್ದು. ಲೋಯಾ ಅವರ ಸಾವಿನ ಘಟನೆ ಕುರಿತಂತೆ ಹಲವು ಪ್ರಶ್ನೆಗಳನ್ನು ಟಾಕ್ಲೆಯವರ ವರದಿ ಬೆಳಕಿಗೆ ತಂದಿತ್ತು. ಈ ಪ್ರಕರಣದಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಪ್ರಮುಖ ಆರೋಪಿಯಾಗಿದ್ದರು.

ಮರುದಿನ ಟಾಕ್ಲೆ ಕಾರವಾನ್‍ಗಾಗಿ "ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ, ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಅನುಕೂಲಕರ ತೀರ್ಪು ನೀಡಲು ನನ್ನ ಸಹೋದರನಿಗೆ 100 ಕೋಟಿಯ ಆಫರ್ ನೀಡಿದ್ದರು: ಮೃತ ಲೋಯಾ ಅವರ ಸಹೋದರಿ" ಎಂಬ ಶೀರ್ಷಿಕೆಯಡಿ ಮತ್ತೊಂದು ವಿಶೇಷ ವರದಿ ಬರೆದರು. ಮೊದಲ ದಿನದ ವರದಿಯಲ್ಲಿ ಲೋಯಾ ಸಾವಿಗೆ ಕಾರಣವಾದ ಘಟನಾವಳಿಗಳ ವಿವರಣೆ ಇದ್ದರೆ, ಎರಡನೇ ವರದಿಯಲ್ಲಿ ಕುಟುಂಬ ಸದಸ್ಯರ ಸಾಕ್ಷಿಗಳನ್ನು ವಿವರವಾಗಿ ಹೇಳಲಾಗಿತ್ತು. ಜತೆಗೆ ಸೊಹ್ರಾಬುದ್ದೀನ್ ಪ್ರಕರಣದಲ್ಲಿ ವಿಚರಣೆ ನಡೆಸುತ್ತಿದ್ದ ಲೋಯಾ ಎದುರಿಸುತ್ತಿದ್ದ ಒತ್ತಡಗಳ ಬಗ್ಗೆಯೂ ವಿವರಣೆ ಇತ್ತು. 2012ರ ಸುಪ್ರೀಂಕೋರ್ಟ್ ಆದೇಶವನ್ನು ಹೇಗೆ ಉಲ್ಲಂಘಿಸಲಾಗಿದೆ ಹಾಗೂ ತೀರ್ಪಿನ ವರದಿ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರವಾಗದಂತೆ ಹೇಗೆ ವೃತ್ತಪತ್ರಿಕೆಗಳು ಸಮನ್ವಯ ಸಾಧಿಸಿವೆ ಎಂಬ ಬಗ್ಗೆಯೂ ಬೆಳಕು ಚೆಲ್ಲಿತ್ತು. ಈ ತೀರ್ಪಿನಲ್ಲಿ 2005ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರನ್ನು ಆರೋಪಮುಕ್ತಗೊಳಿಸಲಾಗಿತ್ತು.

ಆರಂಭ ಹೀಗೆ..

1985ರಲ್ಲಿ ಟಾಕ್ಲೆ ಪುಣೆ ವಿಶ್ವವಿದ್ಯಾನಿಲಯದಲ್ಲಿ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆದರು. "ಅಂದಿನ ಕಾಲ ಭಿನ್ನವಾಗಿತ್ತು. ರಾಜೀವ್‍ಗಾಂಧಿ ಪ್ರಧಾನಿಯಾಗಿದ್ದರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದ್ದರು. ಸ್ಯಾಮ್ ಪಿತ್ರೋಡಾ, ಸೆಂಟರ್ ಫಾರ್ ಡೆವಲಪ್‍ಮೆಂಟ್ ಆಫ್ ಟೆಲೆಮ್ಯಾಟಿಕ್ಸ್ (ಸಿ-ಡಾಟ್) ವಿಭಾಗದ ಮುಖ್ಯಸ್ಥರಾಗಿದ್ದರು. ಇದು ಟೆಲಿಕಾಂ ಕ್ರಾಂತಿಗೆ ಕಾರಣವಾಗಿತ್ತು. ಆದ್ದರಿಂದ ಪ್ರತಿಯೊಬ್ಬರೂ ಎಂಜಿನಿಯರ್ ಆಗಲು ಬಯಸಿದ್ದರು. ನಾನು ಕೂಡಾ ಅದನ್ನೇ ಇಷ್ಟಪಟ್ಟೆ. 1980ರ ಕೊನೆಗೆ ಜಿಡಿಪಿ ಶೇಕಡ 8ಕ್ಕಿಂತ ಹೆಚ್ಚು ಪ್ರಗತಿ ಕಂಡಿತ್ತು. ಇಷ್ಟಾಗಿಯೂ ಸರ್ಕಾರ ಬೊಫೋರ್ಸ್ ಕಾರಣದಿಂದ ಸೋತಿತು" ಎಂದು ಟಾಕ್ಲೆ ಹೇಳುತ್ತಾರೆ.

"ನಾನು ಹಾಗೂ ಟಾಕ್ಲೆ ಸಂವಿಧಾನ ಕ್ಲಬ್‍ನಿಂದ ಹೊರಗೆ ದೆಹಲಿಯ ಬಿಸಿಗೆ ಬೆವರುತ್ತಿದ್ದೆವು. ಅವರು ದಿಲ್ಲಿಯಲ್ಲಿ ಇನ್‍ಕ್ಲೂಸಿವ್ ಇಂಡಿಯಾ ಸಿಟಿಝನ್ಸ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದರು. 'ಸೈಲೆನ್ಸಿಂಗ್ ದ ಮೀಡಿಯಾ' ಎಂಬ ಚರ್ಚಾಕೂಟದಲ್ಲೂ ಪಾಲ್ಗೊಂಡರು. ಕಾರವಾನ್ ನ ರಾಜಕೀಯ ಸಂಪಾದಕ ಹರ್ತೋಶ್ ಸಿಂಗ್ ಬಾಲ್ ಇದರ ಅಧ್ಯಕ್ಷತೆ ವಹಿಸಿದ್ದರು.

ಕುಳಿತುಕೊಳ್ಳಲೂ ಜಾಗವಿಲ್ಲದಿದ್ದಾಗ, ಕ್ಲಬ್‍ನ ಮೆಟ್ಟಲಲ್ಲಿ ಕುಳಿತೆವು. ಅಲ್ಲಿಂದ ಭದ್ರತಾ ಸಿಬ್ಬಂದಿ ಓಡಿಸಿದರು. ಆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಹಲವು ಮಂದಿ ಹೋರಾಟಗಾರರು, ಪತ್ರಕರ್ತರು ಅವರೊಂದಿಗೆ ಮಾತನಾಡಲು ಬಯಸಿದ್ದರು. ಎಲ್ಲರ ಜತೆಗೂ ತಾಳ್ಮೆಯಿಂದ ಅವರು ಮಾತನಾಡಿದರು. ನಮ್ಮ ಸಂವಾದ ಮುಂದುವರಿಸಲು ಕೊನೆಗೆ ನಾವು ಹವಾನಿಯಂತ್ರಿತ ಸಭಾಗೃಹದ ಪಾರಾಪೆಟ್‍ನಲ್ಲಿ ಕುಳಿತೆವು.

ತನ್ನನ್ನು ಪತ್ರಿಕೋದ್ಯಮಕ್ಕೆ ಕರೆತಂದ ಘಟನಾವಳಿಗಳನ್ನು ಟಾಕ್ಲೆ ಹೀಗೆ ವಿವರಿಸುತ್ತಾರೆ, "ದೊಡ್ಡ ರ್ಯಾಲಿಗಳಲ್ಲಿ, ಎಲ್ಲ ಮುಖಂಡರು ಕೂಡಾ ಸ್ವಿಸ್‍ಬ್ಯಾಂಕ್ ಖಾತೆ ಇದೆ. ಹದಿನೈದು ದಿನದಲ್ಲಿ ಕೆಲ ಬಂಧನಗಳಾಗುತ್ತವೆ ಎಂದು ಹೇಳುತ್ತಿದ್ದರು. ಇದು ವ್ಯವಸ್ಥಿತ ಅಪಪ್ರಚಾರ ಎಂಬ ಗುಮಾನಿ ನನ್ನಲ್ಲಿ ಹುಟ್ಟಿತು" 1994ರಲ್ಲಿ ತಾಕ್ಲೆ ತಮ್ಮ ಸ್ವಂತ ಕಂಪನಿಯನ್ನು ನಾಸಿಕ್‍ನಲ್ಲಿ ಆರಂಭಿಸಿದರು.

ಆರ್ಥಿಕ ಅಭಿವೃದ್ಧಿಯ ಹೊರತಾಗಿಯೂ ಅಂದು ಸರ್ಕಾರ ಸೋತಿತು. "ಬಾಬರಿ ಮಸೀದಿ ಮತ್ತು ಹರ್ಷದ್ ಮೆಹ್ತಾ ಪ್ರಕರಣ ಇದಕ್ಕೆ ಕಾರಣ. ಸುದ್ದಿವಾಹಿನಿಗಳಲ್ಲಿ ಅಪಪ್ರಚಾರ ಮತ್ತೆ ಆರಂಭವಾಗಿತ್ತು. ಸಮಾಜವನ್ನು ಧಾರ್ಮಿಕತೆ ಹಿನ್ನೆಲೆಯಲ್ಲಿ ವಿಭಜಿಸುವ ಪಿತೂರಿ ಅದು. ಇಂಥ ಪ್ರಚಾರಾಂದೋಲನವನ್ನು ಮಾಧ್ಯಮಗಳು ನಡೆಸಿದರೆ, ಏಕೆ ಅದರ ಭಾಗವಾಗಬೇಕು, ಅದು ಸರಿಯೇ?" ಎಂದು ಯೋಚಿಸಿದೆ.

ಬ್ಯೂರೊ ಚೀಫ್ ಹುದ್ದೆಯಿಂದ ನಿರುದ್ಯೋಗಿ

"ನಾನು 2000ನೇ ಇಸ್ವಿಯಲ್ಲಿ ಕೇಬಲ್ ಸುದ್ದಿ ವಾಹಿನಿ 'ವೇದ್' ಆರಂಭಿಸಿದೆ. 2005ರಲ್ಲಿ ಸಿಎನ್‍ಎನ್-ಐಬಿನ್ ಸೇರಿದೆ. ನನ್ನ ಮೊದಲ ದಿನ ನನ್ನ ಸುದ್ದಿ ನೆನಪಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ  ನಡೆಯುವ ಕಳ್ಳಸಾಗಾಣಿಕೆ ಕುರಿತ ಸುದ್ದಿ ಅದು. ಆರಂಭದಲ್ಲಿ ಕೆಲ ತಿಂಗಳು ಸ್ಟ್ರಿಂಜರ್ ಆಗಿದ್ದೆ. ಬಳಿಕ ಬಾತ್ಮೀದಾರನಾದೆ" ಎಂದು ಟಾಕ್ಲೆ ನೆನಪಿಸಿಕೊಳ್ಳುತ್ತಾರೆ.

2008ರಲ್ಲಿ ಅವರು 'ನೆಟ್‍ವರ್ಕ್ 18'ರ ಉತ್ತರ ಮಹಾರಾಷ್ಟ್ರ ಬ್ಯೂರೊ ಮುಖ್ಯಸ್ಥರಾದರು. "ಆದರೆ ನಾಸಿಕ್‍ನ ಸುದ್ದಿಗಳು ದ್ರಾಕ್ಷಿ, ಈರುಳ್ಳಿ, ಕುಂಭ ಮೇಳ ಮತ್ತು ರೈತರ ಆತ್ಮಹತ್ಯೆಗೆ ಸಂಬಂಧಿಸಿದ್ದಾಗಿದ್ದರಿಂದ, ಆ ಸುದ್ದಿಗಳಿಗೇ ನಾನು ಸೀಮಿತವಾದೆ ಎನಿಸುತ್ತಿತ್ತು. ಆದ್ದರಿಂದ 'ದ ವೀಕ್' ನಿಯತಕಾಲಿಕದಲ್ಲಿ ಕೆಲಸ ಮಾಡಲು ಮುಂಬೈಗೆ ತೆರಳಿದೆ. ಏಳು ವರ್ಷಗಳ ಕಾಲ (2011ರಿಂದ 2017) ನಾನು ಅಲ್ಲಿದ್ದೆ. ಸಂಸ್ಕೃತಿಯಿಂದ ಹಿಡಿದು ಕೃಷಿಯ ವರೆಗೆ ಅಲ್ಲಿ ಸಾಕಷ್ಟು ವರದಿಗಳನ್ನು ಮಾಡಿದೆ. ಆದಾಗ್ಯೂ ಒಂದು ವರದಿಯನ್ನು ಪ್ರಕಟಿಸಲು ದ ವೀಕ್ ನಿರಾಕರಿಸಿತು. ಆ ವರದಿ ನನ್ನನ್ನು ಕನಿಷ್ಠ ಎಂಟು ತಿಂಗಳ ಅವಧಿಗೆ ನಿರುದ್ಯೋಗಿಯನ್ನಾಗಿ ಮಾಡಿತು" ಎಂದು ಟಾಕ್ಲೆ ನೆನಪಿಸಿಕೊಳ್ಳುತ್ತಾರೆ.

'ದ ವೀಕ್‍'ಗೆ ರಾಜೀನಾಮೆ ನೀಡಿದ ಬಗ್ಗೆ ಮಾತನಾಡಿದ ಅವರು, "ಲೋಯಾ ಸುದ್ದಿಯನ್ನು ಪ್ರಕಟಿಸಲು ನಿರಾಕರಿಸಿದ್ದರಿಂದ ನಾನು ಬಿಟ್ಟೆ. ಆ ಸುದ್ದಿಯನ್ನು ಬಳಿಕ 'ಕಾರವಾನ್' ಪ್ರಕಟಿಸಿತು. ನನ್ನ ಸುದ್ದಿ ಪ್ರಕಟಿಸದಿರಲು ಯಾವ ಕಾರಣವನ್ನೂ 'ದ ವೀಕ್' ನೀಡಲಿಲ್ಲ. ವರದಿಗೆ ಬೆಂಬಲವಾಗಿ ಎಲ್ಲ ಅಗತ್ಯ ದಾಖಲೆಗಳಿದ್ದರೂ ವರದಿ ಪ್ರಕಟವಾಗಲಿಲ್ಲ. ನನ್ನಲ್ಲಿ ಮರಣೋತ್ತರ ಪರೀಕ್ಷೆ ವರದಿ, ವಿಧಿವಿಜ್ಞಾನ ವಿಶ್ಲೇಷಣೆ, ಹಿಸ್ಟೋಪೆಥಾಲಜಿ ವರದಿ, ಅಂತಃಸ್ರಾವದ ವಿಶ್ಲೇಷಣೆ ವರದಿ, ಅನೂಜ್ ಲೋಯಾ ಬರೆದ ಪತ್ರ, ಅನುರಾಧಾ ಬಿಯಾನಿಯವರ ದಿನಚರಿಯ ಪುಟಗಳು ಎಲ್ಲವೂ ಇತ್ತು. ಈ ಎಲ್ಲ ದಾಖಲೆಗಳನ್ನು ಬಳಿಕ ಪ್ರಕಟಿಸಲಾಯಿತು" ಎಂದು ಟಾಕ್ಲೆ ವಿವರಿಸುತ್ತಾರೆ.

"ಅವರು ನಿರಾಕರಿಸುವ ವರೆಗೆ ಅದು ಅವರ ಬೌದ್ಧಿಕ ಆಸ್ತಿ. ಆದರೆ ನಿರಾಕರಿಸಿದ ಬಳಿಕ ಅದು ಅವರ ಬೌದ್ಧಿಕ ಆಸ್ತಿಯಲ್ಲ. ಈಗ ಅದು ನನ್ನದು. ಆದ್ದರಿಂದ ನಾನು ರಾಜೀನಾಮೆ ನೀಡಿದೆ" ಎಂದವರು ಹೇಳುತ್ತಾರೆ.

ಮಾಧ್ಯಮದ ಮೇಲೆ ವಿಶ್ವಾಸ ಇರಲಿಲ್ಲ

ಆದರೆ ಟಾಕ್ಲೆ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಲೋಯಾರ ಪುತ್ರ ಅನೂಜ್ ಜತೆಗಿನ ಅವರ ಸಂವಾದ ತನ್ನ ವರದಿಯನ್ನು ಪ್ರಕಟಿಸುವ ಸುದ್ದಿಸಂಸ್ಥೆಯ ನಿರಂತರ ಹುಡುಕಾಟಕ್ಕೆ ಅವರನ್ನು ಪ್ರೇರೇಪಿಸಿತು. ಇದನ್ನು ಬಹಿರಂಗಪಡಿಸುವುದು ದೊಡ್ಡ ಸುದ್ದಿಯಾಗುತ್ತದೆ ಎನ್ನುವುದು ಅವರಿಗೆ ಗೊತ್ತಿತ್ತು. ಅವರ ಸುದ್ದಿಯನ್ನು ಪ್ರಕಟಿಸುವುದರ ಗಂಭೀರತೆ ಎಷ್ಟಿರುತ್ತದೆ ಎಂದು ಅರ್ಥ ಮಾಡಿಕೊಂಡಿದ್ದರು. ಲೋಯಾ ಕುಟುಂಬದ ಯಾರಾದರೂ ಮಾತನಾಡಲೇಬೇಕಾಗುತ್ತದೆ ಎಂಬ ಅರಿವೂ ಅವರಿಗೆ ಇತ್ತು. ಈ ಪ್ರಯತ್ನದಲ್ಲಿ ಅವರು ಅನೂಜ್ ಲೋಯಾ ಬಳಿಗೆ ತೆರಳಿದರು. ಆಗ ಪುಣೆಯಲ್ಲಿ ಅಜ್ಜನ ಜತೆ ಅವರು ವಾಸವಿದ್ದರು.

"ನೀವೀಗ ಏನು ಮಾಡುತ್ತಿದ್ದೀರಿ ಎಂದು ಕೇಳುವ ಮೂಲಕ ಸಂವಾದ ಆರಂಭಿಸಿದೆ. 'ಆತ ಓದುತ್ತಿದ್ದಾನೆ' ಎಂಬ ಉತ್ತರ ಅಜ್ಜನಿಂದ ಬಂತು. 'ಏನು ಓದುತ್ತಿದ್ದಿ' ಎಂಬ ಪ್ರಶ್ನೆ ಕೇಳಿದಾಗ ಮತ್ತೆ ಅಜ್ಜ, 'ಆತ ಕಾನೂನು ವ್ಯಾಸಂಗ ಮಾಡುತ್ತಿದ್ದಾನೆ' ಎಂದು ಹೇಳಿದರು. ಏನೋ ನಡೆಯುತ್ತಿದೆ ಎಂಬ ಅನುಮಾನ ಆಗ ಕಾಡಿತು" ಎಂದು ಟಾಕ್ಲೆ ವಿವರಿಸುತ್ತಾರೆ.

ಮುಂದಿನ ಪ್ರಶ್ನೆಗಳಿಗೆ ಕೂಡಾ ಅನೂಜ್ ಬದಲು ಅಜ್ಜನೇ ಉತ್ತರಿಸಿದರು. "ಆತ ಏಕೆ ಉತ್ತರಿಸುತ್ತಿಲ್ಲ ಎಂದು ಅಜ್ಜನನ್ನು ಕೇಳಿದೆ. ಆತನಿಗೆ ಈ ವಿಶ್ವದಲ್ಲಿ ನ್ಯಾಯಾಂಗ ವ್ಯವಸ್ಥೆ, ರಾಜಕೀಯ ವ್ಯವಸ್ಥೆ ಅಥವಾ ಮಾಧ್ಯಮವೂ ಸೇರಿದಂತೆ ಯಾರ ಬಗ್ಗೆಯಾಗಲೀ, ಯಾವ ಸಂಸ್ಥೆಯ ಬಗ್ಗೆಯಾಗಲೀ ನಂಬಿಕೆ ಇಲ್ಲ ಎಂದು ಅಜ್ಜ ಉತ್ತರಿಸಿದರು" ಎಂದು ಟಾಕ್ಲೆ ಹೇಳುತ್ತಾರೆ.

'ಮಾಧ್ಯಮದ ಬಗ್ಗೆ ವಿಶ್ವಾಸ ಕೆಡಲು ಏನು ಕಾರಣ' ಎಂದು ಟಾಕ್ಲೆ ಅನೂಜ್ ಅಜ್ಜನಲ್ಲಿ ಪ್ರಶ್ನಿಸಿದರು. "ಬ್ರಿಜ್ ಸಾವಿನ ಬಳಿಕ ಆತ ನಂಬಿಕೆ ಕಳೆದುಕೊಂಡಿದ್ದಾನೆ" ಎಂಬ ಉತ್ತರ ಬಂತು. "ಈ ಯುವಕ ಎಲ್ಲ ನಂಬಿಕೆಯನ್ನೂ ಕಳೆದುಕೊಂಡಿದ್ದಾನೆ ಎನ್ನುವುದು ಕೇಳಿ ಆಘಾತವಾಯಿತು. ಅನೂಜ್‍ನ ವಯಸ್ಸಿನವಳೇ ಆದ ನನ್ನ ಮಗಳಿಗೆ ಫೋನ್ ಮಾಡಿದೆ. ಆತನ ನಂಬಿಕೆಯನ್ನು ಪುನಃಸ್ಥಾಪಿಸಬಹುದೇ ಎಂದು ಕೇಳಿದೆ. ಆದರೆ ಮಾಧ್ಯಮದ ಮೇಲೆ ನಂಬಿಕೆ ಬರುವಂತೆ ಮಾಡಬಲ್ಲೆ. ಇತರ ವಿಷಯಗಳ ಬಗ್ಗೆ ಗೊತ್ತಿಲ್ಲ ಎಂದು ಆಕೆ ಉತ್ತರಿಸಿದಳ. ಇದು ನನ್ನನ್ನು ಮುಂದುವರಿಯುವಂತೆ ಮಾಡಿತು. ಪ್ರಾಮಾಣಿಕವಾಗಿ ಹೇಳುವುದಾದರೆ, ನನ್ನ ಸುದ್ದಿ ಪ್ರಕಟಿಸಲು ನಿರಾಕರಿಸಿದ್ದಕ್ಕಾಗಿ ಈ ಕಾರಣದಿಂದ ನಾನು ರಾಜೀನಾಮೆ ನೀಡಿದೆ" ಎಂದು ಟಾಕ್ಲೆ ವಿವರಿಸುತ್ತಾರೆ.

2017ರ ನವೆಂಬರ್ 27ರಂದು ಕಾರವಾನ್ ಲೋಯಾ ಸಾವಿನ ಬಗ್ಗೆ ಮೊದಲ ಸುದ್ದಿ ಪ್ರಕಟಿಸಿದ ಒಂದು ವಾರದ ಬಳಿಕ 'ಇಂಡಿಯನ್ ಎಕ್ಸ್‍ಪ್ರೆಸ್' ಎರಡು ವರದಿಗಳನ್ನು ಪ್ರಕಟಿಸಿತು. "2014ರಲ್ಲಿ ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಸಾವು: ಯಾವ ಶಂಕೆಯೂ ಇಲ್ಲ ಎಂದು ಆಸ್ಪತ್ರೆಯಲ್ಲಿ ಅವರ ಜತೆಗಿದ್ದ ಮುಂಬೈ ಹೈಕೋರ್ಟ್‍ನ ಇಬ್ಬರು ನ್ಯಾಯಾಧೀಶರು ಹೇಳಿದ್ದಾರೆ" ಎನ್ನುವುದು ಒಂದು ಸುದ್ದಿ ಹಾಗೂ "2014ರಲ್ಲಿ ಸಿಬಿಐ ನ್ಯಾಯಾಧೀಶ ಲೋಯಾ ಸಾವು: ಸಂತಾಪದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬ ಹೇಳುತ್ತಿದೆ" ಎನ್ನುವುದು ಇನ್ನೊಂದು ಸುದ್ದಿ. ಈ ಸುದ್ದಿಗಳಲ್ಲಿ 'ಇಂಡಿಯನ್ ಎಕ್ಸ್‍ಪ್ರೆಸ್' ಕಾರವಾನ್ ಸುದ್ದಿಯನ್ನು ಅಲ್ಲಗಳೆದಿತ್ತು. "ಕಾರವಾನ್ ಸುದ್ದಿಯಲ್ಲಿ ಮೂಲ ಪುರಾವೆಗಳು ಹಾಗೂ ಅಧಿಕೃತ ದಾಖಲೆಗಳಿಲ್ಲ" ಎಂದು ಇದಕ್ಕೆ ಕಾರಣ ನೀಡಿತ್ತು.

ತನ್ನ ಸುದ್ದಿಗಳಿಗೆ ತಾನು ಬದ್ಧ ಎಂದು ಕಾರವಾನ್ ಪ್ರತಿಪಾದಿಸಿತು. ಲೋಯಾ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಕಾರವಾನ್‍ನ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಜೋಸ್ "ಕಾರವಾನ್ ತಾನು ಪ್ರಕಟಿಸಿದ 22 ಸುದ್ದಿಗಳಿಗೂ ಬದ್ಧವಾಗಿರುತ್ತದೆ" ಎಂದು ಟ್ವೀಟ್ ಮಾಡಿದರು.

2018ರ ಜನವರಿ 26ರಂದು 'ಕಾರವಾನ್' ಕೂಡಾ ಒಂದು ಸುದ್ದಿ ಪ್ರಕಟಿಸಿ, 'ಇಂಡಿಯನ್ ಎಕ್ಸ್‍ಪ್ರೆಸ್' ವರದಿಯ ಬಗ್ಗೆ ಪ್ರಶ್ನೆ ಎತ್ತಿತು. 2017ರ ನವೆಂಬರ್ 27ರ ಒಂದು ವರದಿಯಲ್ಲಿ, 'ಇಸಿಜಿ ಯಂತ್ರ ಕೆಲಸ ಮಾಡುತ್ತಿರಲಿಲ್ಲ' ಎಂಬ ಕಾರವಾನ್ ವಾದಕ್ಕೆ 'ಇಂಡಿಯನ್ ಎಕ್ಸ್‍ಪ್ರೆಸ್' ತಗಾದೆ ತೆಗೆದಿತ್ತು. ಜತೆಗೆ ನವೆಂಬರ್ 30ರ ದಿನಾಂಕದ ಒಂದು ಇಸಿಜಿ ವರದಿಯ ಪ್ರತಿಯನ್ನೂ ಪ್ರಕಟಿಸಿತ್ತು.

ಕಾರವಾನ್ ಜನವರಿ 26ರ ವರದಿಯಲ್ಲಿ, "ಕುಟುಂಬದ ಕಳಕಳಿಯನ್ನು ಅವಮಾನಿಸುವ ಪ್ರಯತ್ನವಾಗಿ ಇಂಡಿಯನ್ ಎಕ್ಸ್‍ಪ್ರೆಸ್, ದಂಡೆ ಆಸ್ಪತ್ರೆಯಲ್ಲಿ ಲೋಯಾ ಅವರ ಇಸಿಜಿ ತಪಾಸಣೆ ಮಾಡಿದ ವರದಿ ಎನ್ನಲಾದ ಪ್ರತಿಯನ್ನು ಪ್ರಕಟಿಸಿದೆ. ಈ ಇಸಿಜಿ ವರದಿಯ ದಿನಾಂಕ ಮತ್ತು ಸಮಯವನ್ನು ಪರಿಶೀಲಿಸಿದರೆ, 2014ರ ನವೆಂಬರ್ 30ರಂದು ಬೆಳಿಗ್ಗೆ ನಡೆಸಿದ್ದು ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ವಾಸ್ತವಾಗಿ ಲೋಯಾ ಮೃತಪಟ್ಟದ್ದು ನವೆಂಬರ್ 30ರ ಮಧ್ಯರಾತ್ರಿ ಬಳಿಕ" ಎಂದು ಹೇಳಿತ್ತು.

ಆದರೆ 'ಇಂಡಿಯನ್ ಎಕ್ಸ್‍ಪ್ರೆಸ್' ತನ್ನನ್ನು ಸಮರ್ಥಿಸಿಕೊಂಡು, ಇಸಿಜಿಯನ್ನು ತಾಂತ್ರಿಕ ದೋಷ ಎಂದು ಅಪ್ ಡೇಟ್ ಪ್ರಕಟಿಸಿತು.

(ಅಪ್‍ಡೇಟ್: ನವೆಂಬರ್ 30 ಎಂದು ಇಸಿಜಿ ವರದಿಯಲ್ಲಿ ಏಕೆ ನಮೂದಿಸಲಾಗಿದೆ ಎಂದು ಕೇಳಿದಾಗ, ದಂಡೆ, "ಬ್ರಿಜ್‍ಮೋಹನ್ ಲೋಯಾ ಅವರನ್ನು ಡಿಸೆಂಬರ್ 1ರಂದು ಮುಂಜಾನೆ 4.45ರಿಂದ 5 ಗಂಟೆಯ ಒಳಗೆ ನಮ್ಮಲ್ಲಿಗೆ ಕರೆತರಲಾಗಿತ್ತು. ಸನಿವಾಸ ವೈದ್ಯರು ಇಸಿಜಿ ಪರೀಕ್ಷೆ ನಡೆಸಿದ ಬಳಿಕ, ಉನ್ನತ ಆಸ್ಪತ್ರೆಗೆ ಕರೆದೊಯ್ಯುವಂತೆ ಅವರು ಸಲಹೆ ಮಾಡಿದರು. ತಾಂತ್ರಿಕ ಲೋಪದಿಂದ ದಿನಾಂಕ ನವೆಂಬರ್ 30 ಎಂದು ಬಂದಿದೆ. ಬಳಿಕದನ್ನು ಸರಿಪಡಿಸಿದ್ದೇವೆ. ಡಿಸೆಂಬರ್ 1ರಂದು ಆಸ್ಪತ್ರೆ ನೀಡಿದ ವರದಿ ಎಂದು ಸ್ಪಷ್ಟಪಡಿಸುತ್ತೇವೆ" ಎಂಬ ಉತ್ತರ ಬಂದಿತ್ತು)

ಆದರೆ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ದಾಖಲೆಗಳಲ್ಲಿ 'ದಂಡೆ ಆಸ್ಪತ್ರೆಯಲ್ಲಿ ಇಸಿಜಿ ಯಂತ್ರ ಕೆಲಸ ಮಾಡುತ್ತಿರಲಿಲ್ಲ' ಎಂದು ಉಲ್ಲೇಖಿಸಿರುವುದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಂಥ ಸುದ್ದಿಗಳನ್ನು ಮಾಡಿದ ಪರಿಣಾಮದ ಬಗ್ಗೆ ಮಾತನಾಡಿದ ಟಾಕ್ಲೆ, "ನಾನು ರಾಜಕೀಯವಾಗಿ ಬಿಸಿ ಆಲೂ. ಇದೀಗ ನನ್ನನ್ನು ಮುಟ್ಟಲು ಯಾರೂ ಬಯಸುವುದಿಲ್ಲ" ಎಂದು ಹೇಳುತ್ತಾರೆ. 2018ರ ಅತಿದೊಡ್ಡ ವರದಿಯನ್ನು ಬಹಿರಂಗಪಡಿಸಿ ಎಂಟು ತಿಂಗಳ ಬಳಿಕ 2018ರಲ್ಲಿ ಕೂಡಾ ಟಾಕ್ಲೆ ನಿರುದ್ಯೋಗಿಯಾಗಿದ್ದಾರೆ. ಹಲವು ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಸ್ವತಂತ್ರ ಬರಹಗಾರರಾಗಿ ಕೆಲಸ ಮಾಡುವಂತೆ ಹಲವು ಸಂಸ್ಥೆಗಳು ಕೇಳಿದ್ದರೂ, ಪೂರ್ಣಾವಧಿ ಉದ್ಯೋಗ ನೀಡಲು ಯಾರೂ ಸಿದ್ಧರಿಲ್ಲ.

ಒಂದೇ ಪ್ರಕರಣಕ್ಕೆ ಅಂಟಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಸ್ನೇಹಿತರು ಟಾಕ್ಲೆಯವರಿಗೆ ಸಲಹೆ ಮಾಡಿದ್ದಾರೆ. ಒಂದೇ ವೇಳೆಗೆ ಮನೆಯಿಂದ ಹೋಗದಂತೆ ಅಥವಾ ನಿರ್ದಿಷ್ಟ ಹೋಟೆಲ್‍ಗೆ ಪ್ರತಿದಿನ ಹೋಗದಂತೆಯೂ ಸಲಹೆ ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ಹಲವು ನಿಂದನೆಗಳೂ ಬಂದಿವೆ. ಟಾಕ್ಲೆ ಯಾರ ಮೇಲೂ ತಮ್ಮ ಸುದ್ದಿಯಲ್ಲಿ ಆರೋಪ ಮಾಡಿಲ್ಲ. ಆದರೆ ಹಲವು ಬಲಪಂಥೀಯ ಸಂಘಟನೆಗಳು ಇವರ ಮೇಲೆ ಗೂಬೆ ಕೂರಿಸುತ್ತಿವೆ.

ಕಾರವಾನ್ ಸಂಬಂಧ

ಟಾಕ್ಲೆಯವರ ಎರಡು ಆರಂಭಿಕ ವರದಿಗಳ ಬಳಿಕ, ಲೋಯಾ ಸಾವಿಗೆ ಸಂಬಂಧಿಸಿದಂತೆ ಕಾರವಾನ್ 20 ವರದಿಗಳನ್ನು ಪ್ರಕಟಿಸಿದೆ. ಕೆಲವು ಕಾರವಾನ್ ಬೈಲೈನ್‍ನಲ್ಲಿ, ಇತರ ಕೆಲವು ಅತುಲ್ ದೇವ್, ಅನೋಶ್ ಮಾಳೇಕರ್ ಮತ್ತು ನಿಕಿತಾ ಸಕ್ಸೇನಾ ಅವರ ಹೆಸರಿನಲ್ಲಿ ಪ್ರಕಟವಾಗಿವೆ. ಇತರ ಹಲವು ಮಂದಿ ಪ್ರಕಟಿಸದ ಸುದ್ದಿಗಳನ್ನು ಏಕೆ ಇಲ್ಲಿ ಪ್ರಕಟಿಸಲಾಗುತ್ತಿದೆ ಎಂಬ ಬಗ್ಗೆ ಬಾಲ ಅವರನ್ನು 'ನ್ಯೂಸ್‍ಲಾಂಡ್ರಿ' ಕೇಳಿದೆ.

"ಈ ವರದಿ ಯಾರಿಗೆ ನೋವು ತರುತ್ತದೆ ಅಥವಾ ಯಾರಿಗೆ ಲಾಭವಾಗುತ್ತದೆ ಎಂಬ ಪ್ರಶ್ನೆಯೇ ಇಲ್ಲ. ಅವು ನಮಗೆ ಅಪ್ರಸ್ತುತ ಪ್ರಶ್ನೆ. ನಮಗೆ ಸಿಕ್ಕಿದ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ. ಇದು ಒಳ್ಳೆಯ ಸುದ್ದಿಯೇ ಎನ್ನುವುದನ್ನು ನೋಡುತ್ತೇವೆ. ನಾವು ಮಾಡಬೇಕಾದ ಕೆಲಸ ಮಾಡುತ್ತೇವೆ. ಅದು ಒಳ್ಳೆಯದಿದ್ದರೆ ಪ್ರಕಟಿಸುತ್ತೇವೆ" ಎಂದು ಕಾರವಾನ್ ನ ಬಾಲ ಹೇಳುತ್ತಾರೆ.

"ಜನ ಇಂತಹ ವರದಿಗಳನ್ನು ಪ್ರಕಟಿಸದಿರಲು ಕಾರಣ ಅವರಿಗೆ ಅದರ ಪರಿಣಾಮಗಳ ಬಗ್ಗೆ ಭಯ ಇರುತ್ತದೆ. ಯಾರು ರಾಜಕೀಯ ಅಧಿಕಾರದಲ್ಲಿದ್ದಾರೆ,  ಯಾರು ಇಲ್ಲ ಎಂಬ ಬಗ್ಗೆ ಅವರಿಗೆ ಭಯ ಇದೆ. ಆದರೆ ನಾವು ಅದನ್ನು ಪರಿಗಣಿಸುವುದೇ ಇಲ್ಲ" ಎನ್ನುತ್ತಾರೆ ಬಾಲ.

ಜೊತೆಯಾಗಿ ಕೆಲಸ ಮಾಡಿರುವುದರಿಂದ ನಿರಂಜನ್ ಟಾಕ್ಲೆ ಅವರ ಗುಣ ಚೆನ್ನಾಗಿ ಗೊತ್ತು ಎಂದು ಬಾಲ ಹೇಳುತ್ತಾರೆ. "ಒಂದು ತನಿಖಾ ವರದಿಯ ಪ್ರಯತ್ನ ಮಾಡಬೇಕಾದರೂ ಸಾಕಷ್ಟು ಧೈರ್ಯ ಬೇಕು. ಆದರೆ ಸಾಂಸ್ಥಿಕ ಬೆಂಬಲ ಇಲ್ಲದಿದ್ದರೆ, ಕೆಲ ಕಾಲ ಮಾತ್ರ ಅಲ್ಲಿ ಉಳಿಯಲು ಸಾಧ್ಯ. ಭಾರತದ ಪತ್ರಿಕೋದ್ಯಮದಲ್ಲಿ ಇಂಥ ಸಾಹಸ ಅಪರೂಪ. ಅದನ್ನು ಬೆಳೆಸಲು ನಿಮಗೆ ಅವಕಾಶವೂ ಇಲ್ಲ. ಅದು ಇನ್ನೂ ಅಪರೂಪ" ಎನ್ನುತ್ತಾರೆ.

ಟಾಕ್ಲೆಯರವ ತನಿಖಾ ಪತ್ರಿಕೋದ್ಯಮದ ತುಡಿತವನ್ನು ಬಾಲ ಹೊಗಳುತ್ತಾರೆ. "ಅವರು ತಮ್ಮ ವರದಿಯನ್ನು ಸಮರ್ಥಿಸಿಕೊಂಡಿದ್ದಾರೆ. ನಿರಂತರವಾಗಿ ಅದರ ಫಾಲೊ ಅಪ್ ಮತ್ತು ಪರಿಣಾಮಗಳ ಹಿಂದೆ ಹೋಗಿದ್ದಾರೆ. ನಮ್ಮ ಯುವ ವರದಿಗಾರರಂತೆ ಸಹಕರಿಸಿದ್ದಾರೆ" ಎಂದು ಬಾಲ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಇಷ್ಟಾಗಿಯೂ ಟಾಕ್ಲೆಯರವನ್ನು ನೇಮಿಸಿಕೊಳ್ಳುವವರಿಲ್ಲ. "ಅವರಿಗೆ ಕೆಲಸ ಇಲ್ಲ ಎನ್ನುವುದು ವಾಸ್ತವ. ಅವರು ಕಷ್ಟ ಎದುರಿಸುತ್ತಿದ್ದಾರೆ. ಈ ಕಾರಣದಿಂದಲೇ ಪತ್ರಕರ್ತರು ಅಂಥ ವರದಿಗಳ ಸಾಹಸ ಮಾಡುವುದಿಲ್ಲ. ಹೊರಗಿನಿಂದ ಅಂಥ ಸಾಹಸವನ್ನು ಪ್ರತಿಯೊಬ್ಬರೂ ಹೊಗಳುತ್ತಾರೆ. ಆದರೆ ಅದನ್ನು ಪ್ರಕಟಿಸುವ ಮೂಲಕ ಅಪಾಯ ಎಳೆದುಕೊಳ್ಳಲು ಯಾರೂ ಸಿದ್ಧರಿಲ್ಲ. ಇದು ಕೇವಲ ಈ ವರ್ಷದ ದೊಡ್ಡ ಸುದ್ದಿ ಮಾತ್ರವಲ್ಲ; ಮೋದಿ ಅಧಿಕಾರಾವಧಿಯ ದೊಡ್ಡ ಸುದ್ದಿ" ಎಂದು ಬಾಲ ಹೇಳುತ್ತಾರೆ.

'ಕಾರವಾನ್' ಟಾಕ್ಲೆಯವರಿಗೆ ಕೆಲಸ ಕೊಡುತ್ತದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸುವ ಬಾಲ, "ನಾವು ನಿರಂಜನ್ ಅವರನ್ನು ಮಾತ್ರವಲ್ಲ, ಅವರಂಥ ಹಿರಿಯರನ್ನು ನೇಮಿಸಿಕೊಳ್ಳಲು ಬಯಸುತ್ತೇವೆ. ನಾವು ಬಯಸುವ ಹಲವು ವಿಷಯಗಳ ಬಗ್ಗೆ ವರದಿ ಮಾಡುವ ಹಲವು ಮಂದಿ ಪತ್ರಕರ್ತರಿದ್ದಾರೆ. ಆದರೆ ನಮ್ಮ ಬಳಿ ಸಂಪನ್ಮೂಲ ಇಲ್ಲ. ಜನ ಮಧ್ಯಪ್ರವೇಶಿಸಿದರೆ, ಜನ ಪತ್ರಿಕೋದ್ಯಮಕ್ಕೆ ಬೆಂಬಲ ಸೂಚಿಸಬೇಕು ಎನ್ನುವುದು ನಮ್ಮ ಬಯಕೆ. ಪತ್ರಿಕೆಗೆ ಹೆಚ್ಚಿನ ಪ್ರಸಾರ ಇದ್ದರೆ, ನಾವು ಅವರನ್ನು ನಿಯೋಜಿಸಿಕೊಳ್ಳುವ ಕೆಲಸ ಮೊದಲು ಮಾಡುತ್ತಿದ್ದೆವು" ಎನ್ನುತ್ತಾರೆ.

ಇಂಥ ದೊಡ್ಡ ಸ�

Writer - ಚೆರ್ರಿ ಅಗರ್ವಾಲ್, newslaundry.com

contributor

Editor - ಚೆರ್ರಿ ಅಗರ್ವಾಲ್, newslaundry.com

contributor

Similar News