ಕೊಲಂಬಿಯಾ ವಿರುದ್ಧ ಸೋಲು: ಪೋಲಂಡ್ ಟೂರ್ನಿಯಿಂದ ಹೊರಕ್ಕೆ

Update: 2018-06-25 03:44 GMT

ಕಝಾನ್ (ರಶ್ಯ), ಜೂ.25: ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಎಚ್. ಗುಂಪಿನ ಪಂದ್ಯದಲ್ಲಿ 3-0 ಗೋಲುಗಳ ಜಯ ಸಾಧಿಸಿದ ಕೊಲಂಬಿಯಾ ತಂಡದ ವಿಶ್ವಕಪ್ ಕನಸು ಚಿಗುರಿದೆ. ಕಝಾನ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ ರವಿವಾರ ಕೊಲಂಬಿಯಾ ತಂಡವು ಪೋಲಂಡ್ ತಂಡವನ್ನು ಪಂದ್ಯಾವಳಿಯಿಂದ ಹೊರದಬ್ಬಿದ ಸಾಧನೆ ಮಾಡಿತು.

ರಕ್ಷಣಾ ಆಟಗಾರ ಯೆರ್ರಿ ಮಿನಾ 40ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರೆ, ನಾಯಕ ರೆಡಮೆಲ್ ಫಾಲ್ಕೊ ಮತ್ತು ವಿಂಗೆರ್ ನಾನ್ ಕ್ವಾಡ್ರಿಯೊ ಐದು ನಿಮಿಷಗಳಲ್ಲಿ ಮತ್ತೆರಡು ಗೋಲು ಗಳಿಸಿ ಗೆಲುವು ಖಾತ್ರಿಪಡಿಸಿದರು. ಕೊನೆ ಕ್ಷಣದಲ್ಲಿ ಪೋಲಂಡ್ ಅದ್ಭುತ ಪ್ರದರ್ಶನ ನೀಡಿದರೂ, ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.

ಕಳೆದ ವಿಶ್ವಕಪ್‌ನಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿಗೆ ಪಾತ್ರವಾಗಿದ್ದ ಮಿಡ್‌ಫೀಲ್ಡರ್ ಜೇಮ್ಸ್ ರಾಡ್ರಿಗಸ್, ಗಾಯದ ಬಳಿಕ ಮೈದಾನಕ್ಕೆ ಮರಳಿದ್ದು, ಎರಡು ಗೋಲು ಗಳಿಸುವಲ್ಲಿ ಕೊಡುಗೆ ನೀಡಿದರು. ಕೊಲಂಬಿಯಾಕ್ಕೆ ಜಪಾನ್ ವಿರುದ್ಧದ ಸೋಲಿನ ಬಳಿಕ ಮತ್ತೆ ಗೆಲುವಿನ ಲಯ ಸಾಧಿಸಲು ನೆರವಾದರು.

ಕೊಲಂಬಿಯಾ ಈ ಜಯದೊಂದಿಗೆ ಮೂರು ಅಂಕಗಳೊಂದಿಗೆ ಮೂರನೇ ಸ್ಥಾನ ತಲುಪಿದ್ದು, ಜಪಾನ್ ಹಾಗೂ ಸೆನೆಗಲ್ ತಲಾ ನಾಲ್ಕು ಅಂಕಗಳನ್ನು ಗಳಿಸಿ ಮೊದಲ ಎರಡು ಸ್ಥಾನಗಳಲ್ಲಿವೆ. ರವಿವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಡ್ರಾ ಸಾಧಿಸಿದ್ದವು. ಗುರುವಾರ ನಡೆಯುವ ಎಚ್. ಗುಂಪಿನ ಕೊನೆಯ ಪಂದ್ಯದಲ್ಲಿ ಆಫ್ರಿಕನ್ನರ ವಿರುದ್ಧ ಜಯ ಸಾಧಿಸಿದರೆ, 16ರ ಘಟ್ಟಕ್ಕೆ ಕೊಲಂಬಿಯಾ ಮುನ್ನಡೆಯಲಿದೆ. ಸತತ ಎರಡು ಸೋಲಿನೊಂದಿಗೆ ಪೋಲಂಡ್‌ನ 16ರ ಘಟ್ಟದ ಕನಸು ಭಗ್ನಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News