ಆರ್ಚರಿ ವಿಶ್ವಕಪ್: ದೀಪಿಕಾ ಕುಮಾರಿಗೆ ಚಿನ್ನ

Update: 2018-06-25 07:25 GMT

ಸಾಲ್ಟ್‌ಲೇಕ್ ಸಿಟಿ, ಜೂ.25: ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮೂರನೇ ಹಂತದ ಆರ್ಚರಿ ವಿಶ್ವಕಪ್‌ನಲ್ಲಿ ಮಹಿಳೆಯರ ರಿಕರ್ವ್ ಇವೆಂಟ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಆರು ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಬಂಗಾರಕ್ಕೆ ಗುರಿ ಇಟ್ಟಿರುವ ದೀಪಿಕಾ ಕಳಪೆ ಫಾರ್ಮ್‌ನಿಂದ ಹೊರ ಬಂದಿದ್ದಾರೆ.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಜರ್ಮನಿಯ ಮಿಚೆಲ್ ಕ್ರೊಪ್ಪೆನ್‌ರನ್ನು 7-3 ಅಂತರದಿಂದ ಮಣಿಸಿದ ದೀಪಿಕಾ ಈ ವರ್ಷಾಂತ್ಯದಲ್ಲಿ ಟರ್ಕಿಯಲ್ಲಿ ನಡೆಯಲಿರುವ ಆರ್ಚರಿ ವಿಶ್ವಕಪ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ದೀಪಿಕಾ ಆರು ಬಾರಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದ್ದಾರೆ. 2011, 2012, 2013 ಹಾಗೂ 2015ರ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು. ಈ ಬಾರಿ ಚಿನ್ನದ ಪದಕ ಜಯಿಸಿದ್ದಾರೆ. ದೀಪಿಕಾ ಆರು ವರ್ಷಗಳ ಹಿಂದೆ 2012ರಲ್ಲಿ ಅಂಟಾಲಿಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಚಿನ್ನದ ಪದಕ ಜಯಿಸಿದ್ದರು.

‘‘ಕೊನೆಗೂ ನಾನು ಹೇಳಿದಂತೆ ಈ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದೇನೆ. ಈ ಕ್ಷಣದಲ್ಲಿ ನಾನು ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ನನ್ನ ಪಂದ್ಯವನ್ನು ಆನಂದಿಸುವೆ’’ ಎಂದು ಒಲಿಂಪಿಕ್ಸ್‌ನಂತಹ ಪ್ರಮುಖ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ದೀಪಿಕಾ ಹೇಳಿದ್ದಾರೆ.

ಹಾಲೆಂಡ್‌ನ ಗಾಬ್ರಿಯೆಲಾ ಬಯಾರ್ಡೊರನ್ನು 7-1 ರಿಂದ ಮಣಿಸಿದ ಚೈನೀಸ್ ತೈಪೆಯ ಟಾನ್ ಯಾ-ಟಿಂಗ್ ಮಹಿಳೆಯರ ರಿಕರ್ವ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿರುವ ಭಾರತ ತಂಡ ಪದಕ ಪಟ್ಟಿಯಲ್ಲಿ ಅಮೆರಿಕ, ಕೊಲಂಬಿಯಾ ಹಾಗೂ ಚೈನೀಸ್ ತೈಪೆಯ ಬಳಿಕ ನಾಲ್ಕನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News