×
Ad

ಶಂಕಿತ 8 ಸಿಮಿ ಕಾರ್ಯಕರ್ತರ ಎನ್‌ಕೌಂಟರ್ ಪ್ರಕರಣ: ಪೊಲೀಸರಿಗೆ ನ್ಯಾಯಾಂಗ ಸಮಿತಿಯ ಕ್ಲೀನ್ ಚಿಟ್

Update: 2018-06-25 20:45 IST

ಭೋಪಾಲ್,ಜೂ.25: ಇಲ್ಲಿನ ಕೇಂದ್ರೀಯ ಕಾರಾಗೃಹದಲ್ಲಿ 2016ರಲ್ಲಿ ನಡೆದ ಎಂಟು ಮಂದಿ ಶಂಕಿತ ಸಿಮಿ ಕಾರ್ಯಕರ್ತರ ಪೊಲೀಸ್ ಎನ್‌ಕೌಂಟರ್ ಪ್ರಕರಣದ ತನಿಖೆಗಾಗಿ, ಮಧ್ಯಪ್ರದೇಶದ ಬಿಜೆಪಿ ಸರಕಾರವು ನೇಮಿಸಿದ್ದ ನ್ಯಾಯಾಂಗ ಸಮಿತಿಯು, ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ.

 ‘‘2016ರ ಅಕ್ಟೋಬರ್ 31ರಂದು ಪೊಲೀಸರು ನಡೆಸಿದ ಎನ್‌ಕೌಂಟರ್ ಆಗಿನ ಸನ್ನಿವೇಶದಲ್ಲಿ ಸಮಂಜಸವಾದುದಾಗಿತ್ತು. ಪೊಲೀಸರ ಈ ಕೃತ್ಯವು ಭಾರತೀಯ ಕ್ರಿಮಿನಲ್ ದಂಡಸಂಹಿತೆಯ ಸೆಕ್ಷನ್ 41 ಹಾಗೂ 46(2)(3)ರ ನಿಯಮಾವಳಿಗೆ ಅನುಗುಣವಾಗಿದೆ’’ ಎಂದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಎಸ್.ಕೆ. ಪಾಂಡೆ ನೇತೃತ್ವದ ಆಯೋಗವು ವರದಿಯಲ್ಲಿ ತಿಳಿಸಿದೆ.

ಸೋಮವಾರ ಬೆಳಗ್ಗೆ ಮಧ್ಯಪ್ರದೇಶ ವಿಧಾನಸಭಾ ಕಲಾಪದ ಶೂನ್ಯವೇಳೆಯಲ್ಲಿ ಈ ಏಕ ಸದಸ್ಯ ಆಯೋಗದ ವರದಿಯನ್ನು ಸಾಮಾನ್ಯ ಆಡಳಿತ ಖಾತೆಯ ಸಹಾಯಕ ಸಚಿವ ಲಾಲ್ ಸಿಂಗ್ ಆರ್ಯ ಮಂಡಿಸಿದರು.

ಜೈಲಿನಿಂದ ಪರಾರಿಯಾಗುತ್ತಿದ್ದ ಕೈದಿಗಳ ಮೇಲೆ ಅನಿವಾರ್ಯವಾಗಿ ಬಲಪ್ರಯೋಗಿಸಬೇಕಾಗಿ ಬಂದಿದ್ದರಿಂದ ಅವರು ಸಾವನ್ನಪ್ಪಬೇಕಾಯಿತು ಹಾಗೂ ಅದು ಆಗಿನ ಪರಿಸ್ಥಿತಿಯಲ್ಲಿ ಸಮಂಜಸವೇ ಆಗಿತ್ತು ಎಂದು ವರದಿಯು ಅಭಿಪ್ರಾಯಿಸಿದೆ.

 ಜೈಲಿನಿಂದ ಕೈದಿಗಳು ಪರಾರಿಯಾಗುವ ಅಥವಾ ತಲೆಮರೆಸಿಕೊಳ್ಳುವ ಘಟನೆಗಳು ಪುನರಾವರ್ತಿಸುವುದನ್ನು ತಡೆಯುವ ನಿಟ್ಟಿನಲ್ಲಿ ಸಮಿತಿಯೊಂದನ್ನು ನೇಮಿಸಬೇಕೆಂದು ತನಿಖಾ ಆಯೋಗವು ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ.

ಪಂಜಾಬ್ ರಾಜ್ಯದ ಮಾದರಿಯಲ್ಲಿ ಮಧ್ಯಪ್ರದೇಶ ಸರಕಾರ ಕೂಡಾ ಜೈಲು ಇಲಾಖೆಯ ಸಿಬ್ಬಂದಿಗಾಗಿ ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂದು ಆಯೋಗವು ಶಿಫಾರಸು ಮಾಡಿದೆ. ಜೈಲು ಇಲಾಖೆಗೆ ಅಧಿಕಾರಿಗಳ ಹಾಗೂ ಸಿಬ್ಬಂದಿಯ ನೇಮಕದ ನೀತಿಯನ್ನು ಕೂಡಾ ಕಟ್ಟುನಿಟ್ಟಾಗಿ ಅನುಸರಿಸುವಂತೆಯೂ ಅದು ಸೂಚಿಸಿದೆ.

 ಜೈಲಿನ ಗೋಡೆಗಳು ಹೆಚ್ಚು ಎತ್ತರವಿಲ್ಲದೆ ಇದ್ದುದರಿಂದ ವಿಚಾರಣಾಧೀನ ಕೈದಿಗಳಿಗೆ ಸುಲಭದಲ್ಲಿ ಪರಾರಿಯಾಗಲು ಸಾಧ್ಯವಾಯಿತೆಂದು ಅಭಿಪ್ರಾಯಿಸಿರುವ ಆಯೋಗವು, ಜೈಲಿನ ಗೋಡೆಯ ಎತ್ತರವನ್ನು ಹೆಚ್ಚಿಸುವಂತೆ ಶಿಫಾರಸು ಮಾಡಿದೆ.

ಮೌನ ವಹಿಸಿದ ಕಾಂಗ್ರೆಸ್

ಈ ಹಿಂದೆ ಶಂಕಿತ ಸಿಮಿ ಕಾರ್ಯಕರ್ತರ ಎನ್‌ಕೌಂಟರ್ ಪ್ರಕರಣವನ್ನು ಪ್ರಮುಖ ರಾಜಕೀಯ ವಿಷಯವನ್ನಾಗಿ ಪರಿಗಣಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಆಯೋಗದ ವರದಿಯ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ನಿರಾಕರಿಸಿದೆ.

ಪರಾರಿಯಾದ ಕೆಲವೇ ತಾಸುಗಳಲ್ಲಿ ನಡೆದಿತ್ತು ಎನ್‌ಕೌಂಟರ್

2016ರ ಅಕ್ಟೋಬರ್ 30-31ರ ಮಧ್ಯರಾತ್ರಿಯ ವೇಳೆ ಬಿಗಿಭದ್ರತೆಯ ಭೋಪಾಲ್ ಸೆಂಟ್ರಲ್ ಜೈಲಿನಿಂದ ಶಂಕಿತ ಸಿಮಿ ಕಾರ್ಯಕರ್ತರೆನ್ನಲಾದ ಎಂಟು ಮಂದಿ ವಿಚಾರಣಾಧೀನ ಕೈದಿಗಳು, ಕೀಲಿಕೈ ಬಳಸಿ ತಾವಿದ್ದ ಸೆಲ್‌ನಿಂದ ಹೊರಬಂದಿದ್ದರು ಎನ್ನಲಾಗಿದೆ. ಜೈಲುಕಾವಲುಗಾರ ರಾಮ್‌ಶಂಕರ್ ಯಾದವ್‌ರನ್ನು ಹತ್ಯೆಗೈದ ಅವರು ಬೆಡ್‌ಶೀಟ್‌ಗಳು ಹಾಗೂ ಮರದತುಂಡುಗಳನ್ನು ಏಣಿಯಾಗಿ ಬಳಸಿಕೊಂಡು, ಜೈಲು ಗೋಡೆಯೇರಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ಕೆಲವೇ ತಾಸುಗಳ ಬಳಿಕ ಪೊಲೀಸರು ಭೋಪಾಲ್ ನಗರದ ಹೊರವಲಯಲ್ಲಿರುವ ಮಾಣಿಖೇಡಿ ಕೋಟ್ ಪಥರ್ ಗ್ರಾಮದಲ್ಲಿ ಎನ್‌ಕೌಂಟರ್ ನಡೆಸಿ, ಈ ಎಂಟು ಮಂದಿಯನ್ನು ಹತ್ಯೆಗೈದಿದ್ದರು. ಜೈಲ್‌ಬ್ರೇಕ್ ಹಾಗೂ ಆನಂತರ ನಡೆದ ಶಂಕಿತ ಸಿಮಿ ಕಾರ್ಯಕರ್ತರ ಹತ್ಯೆ ಪ್ರಕರಣದ ಬಗ್ಗೆ ತನಿಖೆಗಾಗಿ 2016ರ ನವೆಂಬರ್ 7ರಂರು ಶಿವರಾಜ್‌ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರವು ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿತ್ತು.

‘ಎನ್‌ಕೌಂಟರ್ ಅನಿವಾರ್ಯವಾಗಿತ್ತು’

 ಹತ್ಯೆಯಾದವರನ್ನು ಶರಣಾಗತರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ಅದಕ್ಕೆ ಒಪ್ಪುವ ಬದಲು ಪೊಲೀಸರು ಹಾಗೂ ಸಾರ್ವಜನಿಕರ ಮೇಲೆ ಗುಂಡುಹಾರಿಸತೊಡಗಿದ್ದರು. ಹೀಗಾಗಿ ಕಾನೂನುಬದ್ಧವಾದ ಕಸ್ಟಡಿಯಿಂದ ಪರಾರಿಯಾಗಿದ್ದ ವ್ಯಕ್ತಿಗಳ ಮೇಲೆ ಗುಂಡೆಸೆಯುವುದು ಅತ್ಯವಶ್ಯವಾಗಿತ್ತು. ಪೊಲೀಸರು ಗುಂಡುಹಾರಿಸತೊಡಗಿದ ಬಳಿಕವೂ ಅವರು ಶರಣಾಗುವ ಇಚ್ಛೆಯನ್ನು ಪ್ರದರ್ಶಿಸಲಿಲ್ಲ. ಇದರ ಪರಿಣಾಮವಾಗಿ ಅವರು ಗುಂಡೇಟಿನಿಂದ ಗಾಯಗೊಂಡು, ಸ್ಥಳದಲ್ಲೇ ಸಾವನ್ನಪ್ಪಿದರು’’ ಎಂದು ಆಯೋಗವು ಅಫಿದಾವಿತ್‌ನಲ್ಲಿ ನೀಡದ ವಿವರಣೆಗಳನ್ನು ಉಲ್ಲೇಖಿಸಿ ತಿಳಿಸಿದೆ.

ಈ ಎಂಟು ಮಂದಿಯೂ ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆ ವಿಧಿಸಬಹುದಾದಂತಹ ಅಪರಾಧಗಳು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ವಿಚಾರಣೆಯನ್ನೆದುರಿಸುತ್ತಿದ್ದರೆಂದು ಆಯೋಗವು ವರದಿಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News