ಗೌರವ ರಕ್ಷೆ ಸಂದರ್ಭ ಕುಸಿದು ಬಿದ್ದ ಯೋಧ: ಪ್ರಧಾನಿ ಮೋದಿ ಮಾಡಿದ್ದೇನು?
Update: 2018-06-25 20:49 IST
ಹೊಸದಿಲ್ಲಿ,ಜೂ.25: ಭಾರತಕ್ಕೆ ಭೇಟಿ ನೀಡಿರುವ ಸೇಷೆಲ್ಸ್ ಅಧ್ಯಕ್ಷ ಡ್ಯಾನಿ ಫೌರೆ ಅವರಿಗಾಗಿ ಸೋಮವಾರ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿದ್ದ ಗೌರವ ರಕ್ಷೆಯ ಸಂದರ್ಭದಲ್ಲಿ ಬಿಸಿಲಿನ ತಾಪದಿಂದಾಗಿ ಭಾರತೀಯ ವಾಯುಪಡೆ (ಐಎಎಫ್)ಯ ಯೋಧನೋರ್ವ ಬವಳಿ ಬಂದು ಬಿದ್ದ ಘಟನೆಯು ನಡೆಯಿತು.
ಭಾರತಕ್ಕೆ ತನ್ನ ಮೊದಲ ದ್ವಿಪಕ್ಷೆಯ ಭೇಟಿಯನ್ನು ನೀಡಿರುವ ಫೌರೆ ಅವರಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು.
ಸಮಾರಂಭವು ಅಂತ್ಯಗೊಂಡು ಗಣ್ಯರು ತೆರಳಿದ ಬಳಿಕ ಐಎಎಫ್ ಯೋಧನ ಬಳಿಗೆ ಸಾಗಿದ ಮೋದಿ ಆತನ ಆರೋಗ್ಯವನ್ನು ವಿಚಾರಿಸಿದರಲ್ಲದೆ,ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದರು. ಯೋಧನೊಂದಿಗೆ ಕೆಲವು ನಿಮಿಷಗಳನ್ನು ಕಳೆದ ಬಳಿಕ ಮೋದಿ ತನ್ನ ಅಧಿಕೃತ ನಿವಾಸಕ್ಕೆ ತೆರಳಿದರು ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿದವು.