ಅಸಂಪ್ಶನ್ ದ್ವೀಪ ಯೋಜನೆಯ ಕುರಿತು ಶ್ರಮಿಸಲು ಭಾರತ-ಸೇಷೆಲ್ಸ್ ನಿರ್ಧಾರ
ಹೊಸದಿಲ್ಲಿ,ಜೂ.25: ಸೋಮವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸೇಷೆಲ್ಸ್ ಅಧ್ಯಕ್ಷ ಡ್ಯಾನಿ ಫೌರೆ ಅವರ ನಡುವಿನ ಮಾತುಕತೆಗಳ ಬಳಿಕ ಉಭಯ ರಾಷ್ಟ್ರಗಳು ಪರಸ್ಪರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅಸಂಪ್ಶನ್ ದ್ವೀಪದಲ್ಲಿ ನೌಕಾನೆಲೆಯೊಂದನ್ನು ಸ್ಥಾಪಿಸುವ ಯೋಜನೆಯ ಕುರಿತು ಜಂಟಿಯಾಗಿ ಕಾರ್ಯ ನಿರ್ವಹಿಸಲು ಒಪ್ಪಿಕೊಂಡಿವೆ.
ಸೇಷೆಲ್ಸ್‌ನ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಅದಕ್ಕೆ 100 ಮಿ.ಅಮೆರಿಕನ್ ಡಾ.ಗಳ ಸಾಲವನ್ನೂ ಭಾರತವು ಪ್ರಕಟಿಸಿತು.
ಈ ಸಾಲದ ನೆರವಿನೊಂದಿಗೆ ತನ್ನ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ರಕ್ಷಣಾ ಉಪಕರಣಗಳನ್ನು ಖರೀದಿಲು ಸೇಷೆಲ್ಸ್‌ಗೆ ಸಾಧ್ಯವಾಗಲಿದೆ ಎಂದು ಮೋದಿ ಫೌರೆ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತಕ್ಕೆ ವ್ಯೆಹಾತ್ಮಕ ಲಾಭವನ್ನು ನೀಡಲಿರುವ ನೌಕಾನೆಲೆ ಸ್ಥಾಪನೆ ಯೋಜನೆ ಕುರಿತಂತೆ ಮೋದಿ ಅವರು, ಪರಸ್ಪರ ಹಕ್ಕುಗಳ ಆಧಾರದಲ್ಲಿ ಯೋಜನೆಯ ಕುರಿತು ಜಂಟಿಯಾಗಿ ಕಾರ್ಯ ನಿರ್ವಹಿಸಲು ನಾವು ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು. ಅಸಂಪ್ಶನ್ ದ್ವೀಪ ಯೋಜನೆಯ ಕುರಿತು ಚರ್ಚಿಸಲಾಗಿದ್ದು,ಪರಸ್ಪರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಉಭಯ ರಾಷ್ಟ್ರಗಳು ಸಮಾನವಾಗಿ ತೊಡಗಿಕೊಳ್ಳಲಿವೆ ಎಂದು ಫೌರೆ ಹೇಳಿದರು.