ಗೋರಕ್ಷಣೆಗಾಗಿ ಮದ್ಯದ ಮೊರೆಹೋದ ರಾಜಸ್ಥಾನ ಸರಕಾರ !

Update: 2018-06-25 15:33 GMT

 ಜೈಪುರ,ಜೂ.25: ಗೋಸಂರಕ್ಷಣೆಗಾಗಿ ಆರ್ಥಿಕ ನಿಧಿ ಸ್ಥಾಪಿಸಲು ರಾಜಸ್ಥಾನದ ಬಿಜೆಪಿ ಸರಕಾರವು ಮದ್ಯದ ಮೇಲೆ ಶೇ.20ರಷ್ಟು ಸರ್ಚಾರ್ಜ್ ವಿಧಿಸಿದೆ. ಗೋವುಗಳ ರಕ್ಷಣೆಗಾಗಿ ವಸುಂಧರರಾಜೆ ನೇತೃತ್ವದ ಸರಕಾರವು ಕಳೆದ ವರ್ಷದ ಎಪ್ರಿಲ್‌ನಲ್ಲಿ ನ್ಯಾಯಾಂಗೇತರ ವ್ಯವಹಾರಗಳಿಗಾಗಿ ಸ್ಟಾಂಪ್‌ಪೇಪರ್‌ಗಳ ಮೇಲೆ ಶೇ.20ರಷ್ಟು ಸರ್ಚಾರ್ಜ್(ಮೇಲ್ತೆರಿಗೆ) ವಿಧಿಸಿತ್ತು. ಇದರಿಂದ ದೊರೆಯುವ ಆದಾಯವನ್ನು ರಾಜ್ಯದಲ್ಲಿ ಗೋವುಗಳ ರಕ್ಷಣೆಗಾಗಿ ಬಳಸಲಾಗುವುದೆಂದು ರಾಜಸ್ಥಾನದ ಸರಕಾರದ ಉನ್ನತ ಅಧಿಕಾರಿಯೊಬ್ಬರು ಇಂದು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   ‘‘2003ರ ರಾಜಸ್ಥಾನ ಮೌಲ್ಯವರ್ಧಿತ ತೆರಿಗೆಯ ನಿಯಮಗಳ ಅಡಿಯಲ್ಲಿ ನೋಂದಣಿಗೊಂಡ ಡೀಲರ್‌ಗಳು ಮಾರಾಟ ಮಾಡುವ ವಿದೇಶಿ ಮದ್ಯ, ಭಾರತದಲ್ಲಿ ಉತ್ಪಾದನೆಯಾದ ವಿದೇಶಿ ಮದ್ಯ, ಶರಾಬು ಹಾಗೂ ಬಿಯರ್ ಮಾರಾಟದ ಮೇಲೆ ವಿಧಿಸಲಾಗುವ ತೆರಿಗೆಯ ಮೊತ್ತದ ಮೇಲೆ ಶೇ.20ರಷ್ಟು ದರದಲ್ಲಿ ಸರ್ಜಾರ್ಜ್ ವಿಧಿಸಲಾಗುವುದು’’ ಎಂದು ರಾಜಸ್ಥಾನ ಸರಕಾರವು ಇಂದು ಬಿಡುಗಡೆಗೊಳಿಸಿದ ಅಧಿಕೃತ ಆದೇಶವೊಂದರಲ್ಲಿ ತಿಳಿಸಿದೆ.

ಮದ್ಯದ ಮೇಲೆ ಹೇರಲಾಗಿರುವ ಸರ್ಚಾರ್ಜ್‌ನಿಂದ ಸಂಗ್ರಹವಾಗುವ ಹಣವನ್ನು ಗೋರಕ್ಷಣೆಯ ನಿಧಿಯಾಗಿ ಬಳಸಲಾಗುವುದೆಂದು ರಾಜಸ್ಥಾನ ಸರಕಾರದ ವಿತ್ತ ಹಾಗೂ ತೆರಿಗೆ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಕಳೆದ ವರ್ಷ ರಾಜಸ್ಥಾನ ಸರಕಾರವು ನ್ಯಾಯಾಂಗೇತರ ವ್ಯವಹಾರಗಳಿಗಾಗಿ ಸ್ಟಾಂಪ್‌ಪೇಪರ್‌ಗಳ ಮೇಲೆ ಶೇ.10ರಷ್ಟು ಸರ್ಚಾರ್ಜ್ ವಿಧಿಸಿದ್ದರಿಂದ ರಾಜ್ಯದಲ್ಲಿ ಬಾಡಿಗೆ ಒಪ್ಪಂದಗಳು, ಅಡಮಾನ ದಾಖಲೆ ಪತ್ರಗಳು ಹಾಗೂ ಲೀಸ್ ಒಪ್ಪಂದಗಳು ದುಬಾರಿಯಾಗಿದ್ದವು.

ಈ ಮಧ್ಯೆ ನ್ಯಾಯಾಂಗೇತರ ವ್ಯವಹಾರಗಳಿಗಾಗಿ ಬಳಸುವ ಸ್ಟಾಂಪ್‌ಪೇಪರ್‌ಗಳ ಮೇಲಿನ ಸರ್ಚಾರ್ಜ್‌ನ್ನು ಈಗ ಇರುವ ಶೇ.10ರಿಂದ ಶೇ.20ಕ್ಕೆ ಏರಿಸುವ ಬಗ್ಗೆಯೂ ರಾಜಸ್ಥಾನ ಸರಕಾರ ಚಿಂತಿಸುತ್ತಿದೆಯಂದು ಅಧಿಕೃತ ಮೂಲಗಳು ತಿಳಿಸಿವೆ.

 ರಾಜಸ್ಥಾನದ ಬರಪೀಡಿತ ಪ್ರದೇಶಗಳಲ್ಲಿ 1682 ಗೋಶಾಲೆಗಳಿದ್ದು, 5.62 ಲಕ್ಷ ದನಗಳು ಆಶ್ರಯ ಪಡೆದಿವೆ. ಸುಮಾರು 8.58 ಲಕ್ಷ ಗೋವುಗಳಿರುವ ರಾಜಸ್ಥಾನದಲ್ಲಿ 2562 ಗೋಶಾಲೆಗಳಿವೆ.

2017-18ರಲ್ಲಿ ರಾಜಸ್ಥಾನ ಸರಕಾರವು 1603 ಗೋಶಾಲೆಗಳಿಗಾಗಿ 123.07 ಕೋಟಿ ರೂ. ವ್ಯಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News