ದಲಿತ ನಾಯಕರ ಬಂಧನದ ವಿರುದ್ಧ ಆ್ಯಮ್ನೆಸ್ಟಿ ಆಕ್ರೋಶ

Update: 2018-06-25 17:13 GMT

ಹೊಸದಿಲ್ಲಿ, ಜೂ.25: ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ಬಳಿಕ ನಡೆದ ಬಂಧನ ಕಾರ್ಯಾಚರಣೆಗಳಿಂದಾಗಿ ಜನತೆಯಲ್ಲಿ ಭಯದ ವಾತಾವರಣವುಂಟಾಗಿದೆಯೆಂದು ಅಂತಾರಾಷ್ಟ್ರೀಯ ಮಾನವಹಕ್ಕು ಸಂಘಟನೆಗಳಾದ ಆಮ್ನೆಸ್ಟಿ ಇಂಟರ್ ನ್ಯಾಶನಲ್ ಹಾಗೂ ಹ್ಯೂಮನ್ ರೈಟ್ಸ್ ವಾಚ್ ಕಳವಳ ವ್ಯಕ್ತಪಡಿಸಿವೆ ಮತ್ತು ದಲಿತ ಹಕ್ಕುಗಳ ಹೋರಾಟಗಾರರನ್ನು ಬಂಧಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿವೆ.

ಜನವರಿ 1ರಂದು ಭುಗಿಲೆದ್ದ ಭೀಮಾಕೋರೆಗಾಂವ್ ಹಿಂಸಾಚಾರದ ತನಿಖೆಯ ಸಂದರ್ಭದಲ್ಲಿ ಮಾವೊವಾದಿಗಳ ಜೊತೆ ನಂಟು ಹೊಂದಿದ್ದಾರೆಂಬ ಆರೋಪದಲ್ಲಿ ಪ್ರಮುಖ ದಲಿತ ಹೋರಾಟಗಾರ ಸುಧೀರ್ ಧಾವಳೆ ಸೇರಿದಂತೆ ಮುಂಬೈ, ನಾಗಪುರ ಹಾಗೂ ದಿಲ್ಲಿಗಳಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ದಲಿತರ ನಾಯಕರ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯಡಿ ದೋಷಾರೋಪ ಹೊರಿಸಲಾಗಿತ್ತು. ರಾಜಕೀಯ ಕೈದಿಗಳ ಬಿಡುಗಡೆಗಾಗಿನ ಸಮಿತಿಯ ಜೊತೆ ನಂಟು ಹೊಂದಿದ್ದ ರೊನಾ ವಿಲ್ಸನ್ ಎಂಬ ಸಾಮಾಜಿಕ ಕಾರ್ಯಕರ್ತ ಕೂಡಾ ಬಂಧಿತರಲ್ಲಿ ಸೇರಿದ್ದರು. ‘‘ಕ್ಷುಲ್ಲಕವಾದ ಪುರಾವೆಗಳ ಆಧಾರದಲ್ಲಿ ದಲಿತ ಹಾಗೂ ಆದಿವಾಸಿ ಹಕ್ಕುಗಳಿಗಾಗಿ ದುಡಿಯುತ್ತಿರುವ ಹೋರಾಟಗಾರರನ್ನು ಬಂಧಿಸುತ್ತಿರುವುದು ಇದು ಮೊದಲೇನಲ್ಲ. ಭಾರತ ಸರಕಾರವು ಭಯದ ವಾತಾವರಣವನ್ನು ಸೃಷ್ಟಿಸುವ ಬದಲು ಅಭಿವ್ಯಕ್ತಿ ಸ್ವಾತಂತ್ರ, ಸಂಘಟನೆ ಹಾಗೂ ಶಾಂತಿಯುತವಾಗಿ ಸಭೆ ಸೇರುವ ಜನತೆಯ ಹಕ್ಕುಗಳನ್ನು ಸರಕಾರವು ರಕ್ಷಿಸಬೇಕಾಗಿದೆ’’ ಎಂದು ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಆಕಾರ್ ಪಟೇಲ್ ಹೇಳಿದ್ದಾರೆ.

ಸರಕಾರವನ್ನು ಟೀಕಿಸುವವರನ್ನು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಅದರಲ್ಲೂ ವಿಶೇಷವಾಗಿ ನಿರ್ಲಕ್ಷಿತ ಸಮುದಾಯಗಳ ಪರವಾಗಿ ಕಾರ್ಯಾಚರಿಸುತ್ತಿರುವವರನ್ನು ಗುರಿಯಿಡಲು, ಭಾರತದ ಪೊಲೀಸರು ಆಗಾಗ್ಗೆ ಭಯೋತ್ಪಾದನೆ ನಿಗ್ರಹ ಕಾನೂನಿನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಚಳವಳಿಗೆ ಸೈದ್ಧಾಂತಿಕ ಬೆಂಬಲವನ್ನು ನೀಡುವವರನ್ನು ಶಿಕ್ಷಿಸಬಾರದೆಂಬ ಸುಪ್ರೀಂಕೋರ್ಟ್‌ನ ನಿರ್ದೇಶನವನ್ನು ಅಧಿಕಾರಿಗಳು ಪಾಲಿಸಬೇಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಿಸಬೇಕು’’ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ದಕ್ಷಿಣ ಏಶ್ಯ ವಲಯದ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ತಿಳಿಸಿದ್ದಾರೆ.

 ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹಾಗೂ ಆಡಳಿತದ ದೌರ್ಜನ್ಯಗಳ ವಿರುದ್ಧ ಹೋರಾಡುವವರನ್ನು ಗುರಿಯಿಡುವ ಬದಲು ಸರಕಾರವು ಸಂತ್ರಸ್ತ ಸಮುದಾಯಗಳ ಅಹವಾಲುಗಳಿಗೆ ಸ್ಪಂದಿಸಬೇಕಾಗಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News