ಜೂ.28: ಯುಎಇ-ಒಮಾನಿನಲ್ಲಿ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರ ಬಿಡುಗಡೆ

Update: 2018-06-26 05:32 GMT

ದುಬೈ, ಜೂ.26: ಕರ್ನಾಟಕದಲ್ಲಿ ಕನ್ನಡ ಸಿನಿ ರಸಿಕರ ಮನಗೆದ್ದ ಹಿರಿಯ ನಟ ಅನಂತ್‌ನಾಗ್‌ ಮತ್ತು ರಾಧಿಕಾ ಚೇತನ್‌ ಅಭಿನಯದ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರ ಜೂನ್ 28 ರಂದು ಯುಎಇ ಮತ್ತು ಒಮಾನ್ ನಲ್ಲಿ ಬಿಡುಗಡೆಯಾಗಲಿದೆ.

ಅಂದು ದುಬೈ-ಶಾರ್ಜಾ ನೋವಾ ಸಿನೆಮಾ, ವಾಕ್ಸ್ ಸಿನೆಮಾ, ಅಬುಧಾಬಿಯ ಸ್ಟಾರ್ ಸಿನೆಮಾ, ಆಸ್ಕರ್ ಸಿನೆಮಾ ಹಾಗೂ ಒಮಾನಿನ ಸ್ಟಾರ್ ಸಿನೆಮಾ ಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಸಿನೆಮಾದ ಪ್ರದರ್ಶನದ ಸಮಯ ಜೂ.27ರಂದು ಬಿಡುಗಡೆಯಾಗಲಿದೆ.

ಎರಡು ತಲೆಮಾರಿನ ಮನಸ್ಸುಗಳ ತಳಮಳ, ಲಿವ್ ಇನ್‌ ರಿಲೇಷನ್‌ಶಿಪ್‌ ಸಾಧಕ-ಬಾಧಕಗಳ ಮೇಲೆ ಬೆಳಕು ಚೆಲ್ಲುವ ಈ ಸಿನೆಮಾದ ಕಥೆ ಕನ್ನಡ ಚಿತ್ರರಂಗಕ್ಕೆ ಅಪರೂಪ. ಅನಂತನಾಗ್‌ ಅವರನ್ನು ಮನಸ್ಸಿನಲ್ಲಿಟ್ಟುಕೊಂಡೇ ನಿರ್ದೇಶಕ ನರೇಂದ್ರ ಬಾಬು ಚಿತ್ರಕತೆ ಹೆಣೆದಂತಿದೆ. ಇದು ಅನಂತನಾಗ್‌ ಅವರ ಸಿನಿಮಾ ಬದುಕಿನ ಅಪರೂಪದ ಪಾತ್ರವೂ ಆಗಿದೆ. 

ಈ ಸಿನೆಮಾವನ್ನು ಕಲರ್ಸ್‌ ಆಫ್ ಆನೇಕಲ್‌ ಹೆಸರಿನಲ್ಲಿ ಸುದರ್ಶನ್‌, ರಾಮಮೂರ್ತಿ ಹಾಗೂ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ಗಾಯಕರು ಆಗಿರುವ ಹರೀಶ್  ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ದಂಪತಿಯ ಆಕ್ಮೇ ಮೂವೀಸ್ ಇಂಟರ್ ನ್ಯಾಶನಲ್ ಬ್ಯಾನರಿನಡಿಯಲ್ಲಿ ನಿರ್ಮಿಸಲಾಗಿದೆ.  

ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ, ಪ್ರದರ್ಶನ  ಕಂಡಿರುವ ಈ ಸಿನೆಮಾದ ಬಗ್ಗೆ ಬಹುತೇಕ ಮಾಧ್ಯಮಗಳು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿವೆ.
ನಿವೃತ್ತಿಯ ನಂತರ ಕೆಲಸಕ್ಕೆ ಸೇರಿಕೊಳ್ಳುವ ಶ್ಯಾಮ್ ಪ್ರಸಾದ್‌ (ಅನಂತನಾಗ್), ಆತ್ಮವಿಶ್ವಾಸವೇ ಮೈವೆತ್ತಂತಿರುವ ಕಂಪೆನಿ ಮುಖ್ಯಸ್ಥೆ ಶ್ರಾವ್ಯಾ, ಗೆಳೆಯನೊಂದಿಗಿನ ಆಕೆಯ ಲಿವ್‌ ಇನ್‌ ರಿಲೇಷನ್‌ಶಿಪ್‌, ಬದ್ಧತೆಯಿಲ್ಲದ ಸಂಬಂಧದಿಂದಾಗಿ ನಲುಗುವ ಮನಸ್ಸುಗಳ ಬಗ್ಗೆ ಚಿತ್ರದಲ್ಲಿ ಪ್ರಸ್ತಾಪವಾಗುತ್ತದೆ. ಹಳೆಯ ತಲೆಮಾರಿನ ವ್ಯಕ್ತಿ ಶ್ಯಾಮ್‌ ಪ್ರಸಾದ್ ತಮ್ಮ ಜೀವನಪ್ರೀತಿಯಿಂದ‌ ಕಚೇರಿಯ ಹೊಸ ತಲೆಮಾರಿನ ಹುಡುಗರಿಗೆ ಸ್ಫೂರ್ತಿಯಾಗುತ್ತಾರೆ.
ದುಬೈಯ ಹಲವೆಡೆ ಈ ಸಿನೆಮಾದ ಸನ್ನಿವೇಶ ಹಾಗೂ ಹಾಡನ್ನು ಚಿತ್ರೀಕರಿಸಲಾಗಿದ್ದು, ಉತ್ತಮವಾಗಿ ಮೂಡಿಬಂದಿದೆ.

ಇಡೀ ಸಿನಿಮಾದಲ್ಲಿ ಪ್ರಮುಖವಾಗಿ ಕಾಣಿಸುವುದು ಅನಂತನಾಗ್‌ ಮತ್ತು ರಾಧಿಕಾ ಚೇತನ್ ಪಾತ್ರಗಳು. ಅನಂತನಾಗ್‌ ಅವರಿಗೆ ಅತ್ಯಂತ ಸೂಕ್ತವಾಗಿ ಹೊಂದುವ ಪಾತ್ರವಿದು. ಎಂದಿನಂತೆ ಅವರು ಪಾತ್ರವನ್ನು ಜೀವಿಸಿದ್ದಾರೆ. ನಟಿ ರಾಧಿಕಾ ಚೇತನ್‌ ಅಚ್ಚುಕಟ್ಟಾದ ಪಾತ್ರ ನಿರ್ವಹಣೆಯಿಂದಾಗಿ ಗಮನ ಸೆಳೆಯುತ್ತಾರೆ. ಕಲಾವಿದರ ಭಾವಗಳನ್ನು ಛಾಯಾಗ್ರಾಹಕ ಪಿ.ಕೆ.ಎಚ್.ದಾಸ್‌ ಸೊಗಸಾಗಿ ಸೆರೆಹಿಡಿದಿದ್ದಾರೆ. ರಾಮಚಂದ್ರ ಹಡಪದ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಮತ್ತೆ ಮತ್ತೆ ಕೇಳುವಂತೆ ಮಾಡಿಬಂದಿದೆ.

ನೋವಾ ಸಿನೆಮಾ, ವಾಕ್ಸ್ ಸಿನೆಮಾ, ಅಬುಧಾಬಿಯ ಸ್ಟಾರ್ ಸಿನೆಮಾ, ಆಸ್ಕರ್ ಸಿನೆಮಾ ಹಾಗು ಒಮಾನಿನ ಸ್ಟಾರ್ ಸಿನೆಮಾ ಮಂದಿರಗಳಲ್ಲಿ ಈಗಾಗಲೇ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News