ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣ: ಲಷ್ಕರ್ ಭಯೋತ್ಪಾದಕ ಸೇರಿ ಮೂವರು ಹಂತಕರ ಗುರುತು ಪತ್ತೆ
ಶ್ರೀನಗರ, ಜೂ.27: ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯವರ ಮೂವರು ಹಂತಕರನ್ನು ಪೊಲೀಸರು ಗುರುತಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಶ್ರೀ ಮಹಾರಾಜಾ ಹರಿಸಿಂಗ್ ಆಸ್ಪತ್ರೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪರಾರಿಯಾಗಿದ್ದ ಪಾಕಿಸ್ತಾನದ ಪ್ರಜೆ ಹಾಗೂ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕ ನವೀದ್ ಜಟ್ ಇವರ ಪೈಕಿ ಓರ್ವನಾಗಿದ್ದು,ಇತರ ಇಬ್ಬರು ದಕ್ಷಿಣ ಕಾಶ್ಮೀರದವರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿದವು.
ಬುಖಾರಿಯವರ ಹತ್ಯೆಯ ಹಿಂದೆ ಲಷ್ಕರ್ ಕೈವಾಡವಿದೆ ಎಂಬ ಪೊಲೀಸರ ಆರೋಪವನ್ನು ನಿರಾಕರಿಸಿರುವ ಲಷ್ಕರ್, ಭಾರತೀಯ ಏಜೆನ್ಸಿಗಳು ಈ ಹತ್ಯೆಯನ್ನು ನಡೆಸಿವೆ ಎಂದು ಪ್ರತಿಪಾದಿಸಿದೆ. ಲಷ್ಕರ್ ಮುಖ್ಯಸ್ಥ ಮಹಮೂದ ಶಾ ಜೂ.25ರಂದು ತನ್ನ ವಕ್ತಾರ ಡಾ.ಅಬ್ದುಲ್ಲಾ ಘಝ್ನವಿ ಮೂಲಕ ನೀಡಿರುವ ಹೇಳಿಕೆಯಲ್ಲಿ,ಬುಖಾರಿಯವರ ಹತ್ಯೆ ಮಾಡಿದ್ದ ಮೂವರು ದಾಳಿಕೋರರಲ್ಲಿ ಲಷ್ಕರ್ ಕಮಾಂಡರ್ ಮುಹಮ್ಮದ್ ನವೀದ್ ಜಟ್ ಅಲಿಯಾಸ್ ಅಬು ಹಂಝಲಾ ಸೇರಿದ್ದಾನೆ ಎಂದು ಹೇಳಿರುವುದು ಅಪ್ಪಟ ಸುಳ್ಳು ಎಂದು ತಿಳಿಸಿದ್ದಾನೆ.
‘ರೈಸಿಂಗ್ ಕಾಶ್ಮೀರ’ದ ಸಂಪಾದಕರಾಗಿದ್ದ ಬುಖಾರಿಯವರನ್ನು ಜೂ.14ರಂದು ಶ್ರೀನಗರದಲ್ಲಿರುವ ಅವರ ಕಚೇರಿಯ ಹೊರಗೆ ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು. ಈ ದಾಳಿಯಲ್ಲಿ ಬುಖಾರಿಯವರ ಇಬ್ಬರು ಖಾಸಗಿ ಭದ್ರತಾ ಅಧಿಕಾರಿಗಳೂ ಸಾವನ್ನಪ್ಪಿದ್ದರು.
ತನಿಖೆಯ ಆರಂಭದಲ್ಲಿಯೇ ಹತ್ಯೆಯಲ್ಲಿ ಜಟ್ ಪಾತ್ರವಿರುವ ಬಗ್ಗೆ ಕೇಳಿ ಬಂದಿತ್ತಾದರೂ ಪೊಲೀಸರು ಅದನ್ನು ಒಪ್ಪಿಕೊಂಡಿರಲಿಲ್ಲ.
ಇದಕ್ಕೂ ಮುನ್ನ ಬುಖಾರಿಯವರ ಅಂಗರಕ್ಷಕರಲ್ಲೋರ್ವನ ಬಳಿಯಿದ್ದ ಪಿಸ್ತೂಲನ್ನು ಕದ್ದಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದರು. ಆದರೆ ದಾಳಿಯಲ್ಲಿ ಆತನ ಪಾತ್ರವಿರಲಿಲ್ಲ ಎಂದು ನಂತರ ಸ್ಪಷ್ಟಪಡಿಸಿದ್ದರು.