ಮಾವಿನ ಹಣ್ಣು ತಿಂದು ಮಕ್ಕಳ ಪಡೆದ ದಂಪತಿಯ ಹೆಸರು ಬಹಿರಂಗಪಡಿಸಿ

Update: 2018-06-27 14:45 GMT

ನಾಸಿಕ್, ಜೂ.27: ಮಾವಿನ ಹಣ್ಣು ತಿಂದು ಮಕ್ಕಳನ್ನು ಪಡೆದಿರುವ ದಂಪತಿಯ ಹೆಸರನ್ನು ಬಹಿರಂಗಪಡಿಸಿ ಎಂದು ನಾಸಿಕ್‌ನ ಪೌರಾಡಳಿತವು ಭೀಮಾ-ಕೋರೆಗಾಂವ್ ಹಿಂಸಾಚಾರದ ಆರೋಪಿ ಸಂಭಾಜಿ ಭಿಡೆಗೆ ನೋಟಿಸ್ ಜಾರಿ ಮಾಡಿದೆ.

ತನ್ನ ತೋಟದಿಂದ ಮಾವಿನ ಹಣ್ಣನ್ನು ತಿಂದ ನಂತರ ದಂಪತಿ ಮಗುವನ್ನು ಪಡೆದಿದ್ದಾರೆ ಎಂದು ಭಿಡೆ ಹೇಳಿಕೊಂಡಿದ್ದರು. ದಂಪತಿಯು ತಿಂದ ಮಾವಿನ ಹಣ್ಣು ತನ್ನದೇ ತೋಟದ್ದು ಎಂಬುದನ್ನು ಸಾಬೀತುಪಡಿಸುವಂತೆ ಪೌರಾಡಳಿತ ಭಿಡೆಗೆ ನೋಟಿಸ್ ಜಾರಿ ಮಾಡಿದೆ.

ಮರಾಠ ಚಕ್ರವರ್ತಿ ಛತ್ರಪತಿ ಶಿವಾಜಿಯ ಬಂಗಾರದ ಆಸನವನ್ನು ರಾಯಗಡದಲ್ಲಿ ಮರುಸ್ಥಾಪಿಸುವ ತನ್ನ ಅಭಿಯಾನದ ಭಾಗವಾಗಿದ್ದ ರ್ಯಾಲಿಯಲ್ಲಿ ಭಿಡೆ ಈ ಮಾತನ್ನು ತಿಳಿಸಿದ್ದಾರೆ.

“ಈ ರಹಸ್ಯವನ್ನು ನಾನು ನನ್ನ ಅಮ್ಮನ ಹೊರತಾಗಿ ಇತರ ಯಾರೊಂದಿಗೂ ಹಂಚಿಕೊಂಡಿಲ್ಲ. ಈ ಮಾವಿನ ಮರಗಳನ್ನು ನಾನು ನನ್ನ ತೋಟದಲ್ಲಿ ನೆಟ್ಟಿದ್ದೇನೆ. ಈವರೆಗೆ ನನ್ನಿಂದ 180 ದಂಪತಿ ಈ ಮಾವಿನ ಹಣ್ಣನ್ನು ಪಡೆದಿದ್ದಾರೆ ಈ ಪೈಕಿ 150 ದಂಪತಿ ಮಗುವನ್ನು ಪಡೆದಿದ್ದಾರೆ” ಎಂದು ಭಿಡೆ ಹೇಳಿದ್ದರು. “ದಂಪತಿಗೆ ಗಂಡು ಮಗು ಬೇಕಿದ್ದರೆ ಈ ಮಾವನ್ನು ತಿನ್ನಬೇಕು. ಈ ಮಾವು ಫಲವತ್ತತೆಯ ಕೊರತೆಯನ್ನು ನೀಗಿಸುತ್ತದೆ” ಎಂದು ಬಿಡೆ ವಾದಿಸಿದ್ದಾರೆ. ಬಿಡೆಯ ವಾದವನ್ನು ಪ್ರಶ್ನಿಸಿ ಕೆಲವು ಸಾಮಾಜಿಕ ಕಾರ್ಯಕರ್ತರು ಆರೋಗ್ಯ ಇಲಾಖೆಯಲ್ಲಿ ದೂರು ದಾಖಲಿಸಿದ ನಂತರ ನಾಸಿಕ್ ಪೌರಾಡಳಿತ ಇವರಿಗೆ ನೋಟಿಸ್ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News