ದಿಲೀಪ್ ಮರುಸೇರ್ಪಡೆ ಬಗ್ಗೆ ಆಕ್ರೋಶ: 'ಅಮ್ಮಾ' ಸಂಘಟನೆಗೆ ನಾಲ್ವರು ನಟಿಯರ ರಾಜೀನಾಮೆ

Update: 2018-06-27 15:29 GMT
ರಮ್ಯಾ ನಂಬೀಸನ್,             ರಿಮಾ ಕಲ್ಲಿಂಗಲ್,           ಗೀತು ಮೋಹನ್‍ದಾಸ್

ಕೊಚ್ಚಿ, ಜೂ.27: ದುಷ್ಕರ್ಮಿಗಳ ಕಿರುಕುಳಕ್ಕೊಳಗಾಗಿದ್ದ ನಟಿ ಸಹಿತ ನಾಲ್ವರು ನಟಿಯರು ಕೇರಳದ ಸಿನೆಮಾ ಕಲಾವಿದರ ಸಂಘಟನೆ 'ಅಮ್ಮಾ'ಕ್ಕೆ ರಾಜೀನಾಮೆ ನೀಡಿದ್ದಾರೆ.

ರಮ್ಯಾ ನಂಬೀಸನ್, ರಿಮಾ ಕಲ್ಲಿಂಗಲ್, ಗೀತು ಮೋಹನ್‍ದಾಸ್ ರಾಜೀನಾಮೆ ನೀಡಿದ ನಟಿಯರಾಗಿದ್ದಾರೆ. ನಟಿಗೆ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದಿಲೀಪ್‍ರನ್ನು 'ಅಮ್ಮಾ'ಗೆ ಮರಳಿ ಸೇರಿಸುವ ನಿರ್ಧಾರವನ್ನು ವಿರೋಧಿಸಿ ಇವರು ರಾಜೀನಾಮೆ ನೀಡಿದ್ದಾರೆ. ಮಹಿಳಾ ಸಂಘಟನೆ ಡಬ್ಲ್ಯೂಸಿಸಿಯ ಫೇಸ್‍ಬುಕ್‍ನಲ್ಲಿ ತಮ್ಮ ರಾಜೀನಾಮೆಯ ವಿವರವನ್ನು ಈ ನಟಿಯರು ಬಹಿರಂಗಪಡಿಸಿದ್ದು, ಡಬ್ಲ್ಯೂಸಿಸಿ ಸಂಘಟನೆ ಸದಸ್ಯೆಯರು ಮತ್ತು ಕಿರುಕುಳಕ್ಕೊಳಗಾದ ನಟಿಯನ್ನು ಬೆಂಬಲಿಸುತ್ತಿರುವ ನಟಿ ಮಂಜು ವಾರಿಯರ್ ಹಾಗು ಪಾರ್ವತಿ 'ಅಮ್ಮಾ' ಸಂಘಟನೆಗೆ ಈವರೆಗೂ ರಾಜೀನಾಮೆ ನೀಡಿಲ್ಲ.

ತಾನಿರುವ ಸಂಘಟನೆ ಆರೋಪಿ ವ್ಯಕ್ತಿಯ ರಕ್ಷಣೆಗೆ ಯತ್ನಿಸುತ್ತಿದೆ ಎಂದು ಕಿರುಕುಳಕ್ಕೊಳಗಾದ ನಟಿ ಫೇಸ್‍ಬುಕ್ ಪೋಸ್ಟ್ ನಲ್ಲಿ  ಆರೋಪಿಸಿದ್ದಾರೆ. "ಆರೋಪಿ ನನಗೆ ನಟನೆಯ ಅವಕಾಶವಿಲ್ಲದಂತೆ ಮಾಡಿದ್ದಾನೆ. ಅಂದು ಈ ಕುರಿತು ದೂರು ನೀಡಿದಾಗ ಸಂಘಟನೆ ಆತನ ವಿರುದ್ಧ ಸರಿಯಾದ ಕ್ರಮ ಜರಗಿಸಲು ವಿಫಲವಾಗಿತ್ತು. ಇಷ್ಟು ಕೆಟ್ಟ ಅನುಭವ ನನ್ನ ಜೀವನದಲ್ಲಿ ನಡೆದಿರುವಾಗ, ತಾನೂ ಇರುವ ಸಂಘಟನೆ ಆರೋಪಿ ವ್ಯಕ್ತಿಯನ್ನು ಸಂರಕ್ಷಿಸಲು ಬಹಳಷ್ಟು ಶ್ರಮಿಸಿದೆ. ಇನ್ನು ಕೂಡಾ ಈ ಸಂಘಟನೆಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎಂದು ಮನಗಂಡು ರಾಜೀನಾಮೆ ನೀಡುತ್ತಿರುವುದಾಗಿ" ನಟಿ ತಿಳಿಸಿದ್ದಾರೆ.

ಕಿರುಕುಳಕ್ಕೊಳಗಾಗಿರುವ ನಟಿಗೆ ಬೆಂಬಲ ಸೂಚಿಸಿ ನಟಿಯರಾದ ರಮ್ಯಾ ನಂಬೀಸನ್, ರಿಮಾ ಕಲ್ಲಿಂಗಲ್, ಗೀತು ಮೋಹನ್‍ದಾಸ್ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News