ಯುಜಿಸಿಯ ಬದಲು ಹೊಸ ಉನ್ನತ ಶಿಕ್ಷಣ ಆಯೋಗದ ರಚನೆಗೆ ಕರಡು ಕಾಯ್ದೆ ಸಿದ್ಧ
ಹೊಸದಿಲ್ಲಿ,ಜೂ.27: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಬದಲು ಹೊಸ ಉನ್ನತ ಶಿಕ್ಷಣ ಆಯೋಗವನ್ನು ರಚಿಸಲು ಕರಡು ಕಾಯ್ದೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರೂಪಿಸಿದೆ.
ಕರಡು ಕಾಯ್ದೆಯಂತೆ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಭಾರತೀಯ ಉನ್ನತ ಶಿಕ್ಷಣ ಆಯೋಗವು ಶೈಕ್ಷಣಿಕ ವಿಷಯಗಳ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸಲಿದೆ. ಹಣಕಾಸು ವಿಷಯಗಳು ಸಚಿವಾಲಯದ ವ್ಯಾಪ್ತಿಯಲ್ಲಿರುತ್ತವೆ.
ಕಾಯ್ದೆಯನ್ನು ಭಾರತೀಯ ಉನ್ನತ ಶಿಕ್ಷಣ ಆಯೋಗ ಕಾಯ್ದೆ,2018(ಯುಜಿಸಿ ಕಾಯ್ದೆಯ ರದ್ದತಿ) ಎಂದು ಹೆಸರಿಸಲಾಗಿದೆ. ಕರಡು ಕಾಯ್ದೆಯನ್ನು ಸಚಿವಾಲಯದ ಜಾಲತಾಣದಲ್ಲಿ ಬಿಡುಗಡೆಗೊಳಿಸಲಾಗಿದ್ದು,ಎಲ್ಲ ಶಿಕ್ಷಣತಜ್ಞರು,ಪಾಲುದಾರರು ಮತ್ತು ಸಾರ್ವಜನಿಕರು ತಮ್ಮ ಅಭಿಪ್ರಾಯ-ಸಲಹೆಗಳನ್ನು ಜು.5ರಂದು ಸಂಜೆ ಐದು ಗಂಟೆಯೊಳಗೆ ಸಲ್ಲಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಕೋರಿದ್ದಾರೆ.
ಆಯೋಗವು ಇದೇ ಮೊದಲ ಬಾರಿಗೆ ಶೈಕ್ಷಣಿಕ ಗುಣಮಟ್ಟ ಮಾನದಂಡಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಹೊಂದಿರಲಿದೆ. ಕಳಪೆ ಗುಣಮಟ್ಟದ ಮತ್ತು ನಕಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸುವ ಅಧಿಕಾರವೂ ಅದಕ್ಕಿರಲಿದೆ. ನಿಯಮಗಳ ಉಲ್ಲಂಘನೆಗಾಗಿ ದಂಡ ಅಥವಾ ಮೂರು ವರ್ಷಗಳವರೆಗೆ ಜೈಲುಶಿಕ್ಷೆಯನ್ನು ವಿಧಿಸಲಾಗುವುದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಹಾಲಿ ಯುಜಿಸಿಯು ನಕಲಿ ಶಿಕ್ಷಣ ಸಂಸ್ಥೆಗಳ ಹೆಸರುಗಳನ್ನು ಸಾರ್ವಜನಿಕರ ಮಾಹಿತಿಗಾಗಿ ತನ್ನ ಜಾಲತಾಣದಲ್ಲಿ ಪ್ರಕಟಿಸುತ್ತದೆ,ಆದರೆ ಅವುಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವ ಅಧಿಕಾರವನ್ನು ಅದು ಹೊಂದಿಲ್ಲ.
ನೂತನ ಕಾಯ್ದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.