ರಾಷ್ಟ್ರಪತಿ ದಂಪತಿಗೆ ಕಿರುಕುಳ!: ಜಗನ್ನಾಥ ದೇವಸ್ಥಾನ ಭೇಟಿಯ ವೇಳೆ ನಡೆದದ್ದೇನು ?

Update: 2018-06-27 15:43 GMT

ಹೊಸದಿಲ್ಲಿ, ಜೂ.27: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿ ಸವಿತಾ ಒಡಿಶಾದ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಅವರಿಗೆ ಕಿರುಕುಳ ನೀಡಿದ ಘಟನೆ ನಡೆದು ಮೂರು ತಿಂಗಳ ಬಳಿಕ ಇದೀಗ ಪುರಿ ಜಿಲ್ಲಾಡಳಿತವು ಘಟನೆಯ ತನಿಖೆ ನಡೆಸಲು ಮುಂದಾಗಿದೆ.

 ಆಂಗ್ಲ ಪತ್ರಿಕೆಯ ವರದಿಯ ಪ್ರಕಾರ, ಮಾರ್ಚ್ 18ರಂದು ರಾಷ್ಟ್ರಪತಿ ದಂಪತಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಸೇವಕರ ಗುಂಪು ಅವರನ್ನು ಗರ್ಭಗುಡಿಯ ಸಮೀಪ ತಡೆದಿತ್ತು ಮತ್ತು ಅವರ ಪತ್ನಿ ಸವಿತಾರನ್ನು ಮುಂದಕ್ಕೆ ದೂಡಿತ್ತು. ಸೇವಕರ ವರ್ತನೆಯನ್ನು ವಿರೋಧಿಸಿ ಮಾರ್ಚ್ 19ರಂದು ರಾಷ್ಟ್ರಪತಿಭವನದಿಂದ ಪುರಿ ಕಲೆಕ್ಟರ್ ಅರವಿಂದ್ ಅಗರ್ವಾಲ್ ಅವರಿಗೆ ಪತ್ರವನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಮರುದಿನ ಶ್ರೀ ಜಗನ್ನಾಥ ದೇವಸ್ಥಾನ ಮಂಡಳಿ ಸಭೆಯನ್ನು ಕರೆದಿತ್ತು. ಮಾರ್ಚ್ 18ರಂದು ರಾಷ್ಟ್ರಪತಿ ದಂಪತಿ ದೇವಸ್ಥಾನ ಭೇಟಿಯ ಕಾರಣದಿಂದ ಬೆಳಿಗ್ಗೆ 6.35ರಿಂದ 8.40ರ ವರೆಗೆ ಭಕ್ತರಿಗೆ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲಿ ದಂಪತಿಯ ಜೊತೆಗೆ ಬೆರಳೆಣಿಕೆಯಷ್ಟು ಸೇವಕರು ಹಾಗೂ ಸರಕಾರಿ ಅಧಿಕಾರಿಗಳು ಮಾತ್ರ ಇದ್ದರು ಎಂದು ವರದಿ ತಿಳಿಸಿದೆ.

ಸ್ಥಳೀಯ ಪತ್ರಿಕೆ ಪ್ರಗತಿವಾದಿ ಮಾಡಿರುವ ವರದಿಯ ಪ್ರಕಾರ, ರಾಷ್ಟ್ರಪತಿಗಳು ದೇವಾಲಯದ ಅತ್ಯಂತ ಒಳಗಿರುವ ರತ್ನ ಸಿಂಹಾಸನದ ಬಳಿಗೆ ತೆರಳಿದಾಗ ಓರ್ವ ಸೇವಕ ಅವರನ್ನು ಮುಂದಕ್ಕೆ ಹೋಗದಂತೆ ತಡೆದ ಮತ್ತು ಇತರ ಕೆಲವು ಸೇವಕರು ಸವಿತಾ ಅವರನ್ನು ಮುಂದಕ್ಕೆ ಹೋಗುವಂತೆ ದೂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಮೂವರು ಸೇವಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ದೇವಾಲಯ ಮಂಡಳಿ ನಿರ್ಧರಿಸಿದೆ. ರಾಷ್ಟ್ರಪತಿ ದಂಪತಿಗೆ ದೇವಸ್ಥಾನದ ಒಳಗೆ ಕಿರಿಕಿರಿಯುಂಟಾಗಿರುವುದು ನಿಜ ಎಂದು ಒಪ್ಪಿಕೊಂಡಿರುವ ಮಂಡಳಿಯ ಮುಖ್ಯಸ್ಥ ಐಎಎಸ್ ಅಧಿಕಾರಿ ಪ್ರದೀಪ್ತ ಕುಮಾರ್ ಮೊಹಪಾತ್ರ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ದೇವಸ್ಥಾನದ ಸೇವಕರ ವರ್ತನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ ಭಕ್ತರಿಗೆ ಕಿರುಕುಳ ನೀಡುವುದನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News