ನೀರವ್ ಮೋದಿ ಹಸ್ತಾಂತರ ವಿಚಾರ: ಮೂರು ದೇಶಗಳಿಗೆ ಸರಕಾರದಿಂದ ಪತ್ರ
ಹೊಸದಿಲ್ಲಿ, ಜೂ.27: ಭಾರತದ ಬ್ಯಾಂಕ್‌ಗಳಿಗೆ ಕೋಟ್ಯಂತರ ಹಣವನ್ನು ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಪತ್ತೆಹಚ್ಚಿ ಭಾರತಕ್ಕೆ ಕರೆತರುವ ಪ್ರಯತ್ನದ ಭಾಗವಾಗಿ ಸರಕಾರವು ಮೂರು ದೇಶಗಳಿಗೆ ಪತ್ರವನ್ನು ಬರೆದಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ನಿರಂತರ ಸಭೆಗಳು ನಡೆಯುತ್ತಲೇ ಇದ್ದು ಕಳೆದ ವಾರ ಸಚಿವಾಲಯದ ಅಧಿಕಾರಿಗಳು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಪಾಸ್‌ಪೋರ್ಟನ್ನು ರದ್ದುಪಡಿಸಿದ ನಂತರವೂ ನೀರವ್ ಮೋದಿ ವಿವಿಧ ದೇಶಗಳಿಗೆ ತೆರಳಲು ಹೇಗೆ ಸಾಧ್ಯ ಎಂಬ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ. ಪಾಸ್‌ಪೋರ್ಟ್ ರದ್ದುಪಡಿಸುವುದರಿಂದ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಿಲ್ಲ. ಅನೇಕ ದೇಶಗಳು ಪಾಸ್‌ಪೋರ್ಟ್ ರದ್ದತಿಗೆ ಮನ್ನಣೆ ನೀಡುವುದಿಲ್ಲ. ಇಂಟರ್‌ಪೋಲ್ ಜಾರಿ ಮಾಡುವ ರೆಡ್ ಕಾರ್ನರ್ ನೋಟಿಸ್‌ಗೆ ಮಾತ್ರ ಅವರು ಮನ್ನಣೆ ನೀಡುತ್ತಾರೆ. ನೀರವ್ ಮೋದಿ ಪ್ರಕರಣದಲ್ಲಿ ಅದನ್ನು ಇನ್ನೂ ಪಡೆಯಲಾಗಿಲ್ಲ ಎಂದು ವರದಿ ತಿಳಿಸಿದೆ.
ಮಂಗಳವಾರ ನೀರವ್ ಮೋದಿ ಪ್ರಕರಣದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ನೀರವ್ ಅಡಗಿರಬಹುದು ಎಂದು ನಂಬಲಾಗಿರುವ ಬ್ರಿಟನ್, ಬೆಲ್ಜಿಯಂ ಮತ್ತು ಫ್ರಾನ್ಸ್ ದೇಶಗಳಿಗೆ ಭಾರತ ಸರಕಾರ ಪತ್ರವನ್ನು ಬರೆದಿದೆ ಎಂದು ತಿಳಿಸಿದ್ದಾರೆ.
ನೀರವ್ ಮೋದಿಯನ್ನು ಭಾರತಕ್ಕೆ ಕರೆತರಲು ಎರಡು ಸಾಧ್ಯತೆಗಳಿವೆ. ಮೊದಲನೆಯದಾಗಿ ಇಂಟರ್‌ಪೋಲ್‌ನಿಂದ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿಸುವುದು. ಎರಡನೆಯದಾಗಿ ಆತ ಯಾವ ದೇಶದಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ಪಡೆಯುವುದು. ಇದರಿಂದ ಆ ದೇಶದ ಜೊತೆ ಭಾರತ ಕಾನೂನು ಅಥವಾ ಹಸ್ತಾಂತರ ಒಪ್ಪಂದವನ್ನು ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ ಮತ್ತು ಅದರಂತೆ ಮುಂದಿನ ಕಾನೂನು ಕ್ರಮ ಜರುಗಿಸಲು ಸುಲಭವಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.