ಸಾಲ ತೀರಿಸಲು ಪತ್ನಿ, ಮಕ್ಕಳನ್ನೇ ಮಾರಿದ ಭೂಪ: ಆರೋಪ
ಕುರ್ನೋಲ್, ಜೂ. 28: ಸಾಲದ ಭಾದೆ ತಾಳಲಾರದೆ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮಕ್ಕಳನ್ನು 5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಕುರ್ನೋಲ್ ಜಿಲ್ಲೆಯ ಕೋಯಿಲಕುಂಟ್ಲದಲ್ಲಿ ನಡೆದಿದೆ.
ನಂದ್ಯಾಲ್ ಪಟ್ಟಣದ 35ರ ಹರೆಯದ ವೆಂಕಟಮ್ಮ ಕೋಯಿಲಕುಂಟ್ಲ ದ ಪಶುಪಲೇಟಿ ಮಡ್ಡಿಲೆಟಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಓರ್ವ ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳಿದ್ದರು. ಮಡ್ಡಿಲೇಟಿ ದುಡಿದ ಹಣವನ್ನು ಜೂಜು ಹಾಗೂ ಹೆಂಡಕ್ಕೆ ಖರ್ಚು ಮಾಡುತ್ತಿದ್ದ. ಅನಂತರ ಸಾಲ ಮಾಡಿದ್ದ. ಸಾಲ ತೀರಿಸಲು ಆತ ತನ್ನ ಪತ್ನಿ ಹಾಗೂ ಮಕ್ಕಳನ್ನು ಸಹೋದರನಿಗೆ ಮಾರಾಟ ಮಾಡಿದ್ದಾನೆ. ಮಾತುಕತೆ ಅಂತಿಮಗೊಂಡ ಬಳಿಕ ಒಪ್ಪಂದಕ್ಕೆ ಸಹಿ ಹಾಕಲು ಸೂಚಿಸಿದ ಸಂದರ್ಭ ಇದು ಬೆಳಕಿಗೆ ಬಂದಿದೆ.
ಮಡ್ಡಿಲೇಟಿ ತನ್ನ ಪತ್ನಿಯಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಬಲವಂತ ಮಾಡಿದ್ದಾನೆ. ವೆಂಕಟಮ್ಮ ನಿರಾಕರಿಸಿದ್ದಾರೆ. ಆತನೊಂದಿಗೆ ಜೀವಿಸಲು ಸಾಧ್ಯವಿಲ್ಲ ಎಂದು ಅರಿತಾಗ ವೆಂಕಟಮ್ಮ ತನ್ನ ಮಕ್ಕಳೊಂದಿಗೆ ನಂದ್ಯಾಳ್‌ನಲ್ಲಿರುವ ತವರು ಮನೆಗೆ ತೆರಳಿದ್ದಾರೆ. ವೆಂಕಟಮ್ಮ ಅವರ ಹೆತ್ತವರು ನಂದ್ಯಾಳ್ ತಾಲೂಕು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಸಬ್ ಇನ್ಸ್‌ಪೆಕ್ಟರ್ ರಮೇಶ್ ಬಾಬು, ಇದು ಪತಿ ಪತ್ನಿಯನ್ನು ಮಾರಾಟ ಮಾಡಿರುವ ಪ್ರಕರಣ ಎಂಬುದನ್ನು ನಿರಾಕರಿಸಿದ್ದಾರೆ.