ಮನಮೋಹನ್ ಸಿಂಗ್ ಜೀವನಾಧಾರಿತ ಚಿತ್ರದಲ್ಲಿ ರಾಹುಲ್, ಪ್ರಿಯಾಂಕ ಗಾಂಧಿ ಪಾತ್ರದಲ್ಲಿ ನಟಿಸಿದ್ದು ಯಾರು ಗೊತ್ತಾ?

Update: 2018-06-28 15:19 GMT

ಹೊಸದಿಲ್ಲಿ, ಜೂ.28: ತಮ್ಮ ಮುಂಬರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಲನಚಿತ್ರದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಪಾತ್ರಧಾರಿಗಳ ಚಿತ್ರವನ್ನು ಬಾಲಿವುಡ್ ನಟ ಅನುಪಮ್ ಖೇರ್ ಶೇರ್ ಮಾಡಿದ್ದಾರೆ.  ಈ ಚಲನಚಿತ್ರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರ ಮಾಡುತ್ತಿರುವ ಖೇರ್ ಈ ಹಿಂದೆ ಚಿತ್ರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಪತ್ನಿ ಗುರುಶರಣ್ ಕೌರ್ ಪಾತ್ರಧಾರಿಗಳ ಫೋಟೋ ಶೇರ್ ಮಾಡಿದ್ದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಪಾತ್ರವನ್ನು ಅರ್ಜುನ್ ಮಾಥುರ್ ನಿರ್ವಹಿಸುತ್ತಿದ್ದರೆ, ಪ್ರಿಯಾಂಕ ಗಾಂಧಿ ಪಾತ್ರದಲ್ಲಿ ಆಹನಾ ಕುಮ್ರಾ ಇದ್ದಾರೆ. ಆಹನಾ ಈ ಹಿಂದೆ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ' ಹಾಗೂ ಅಮಿತಾಬ್ ಬಚ್ಚನ್ ಅವರ ಟಿವಿ ಮಾಲಿಕೆ 'ಯುದ್ಧ್'ನಲ್ಲಿ ಕಾಣಿಸಿಕೊಂಡಿದ್ದರು. ಅರ್ಜುನ್ ಅವರು 'ಆ್ಯಂಗ್ರಿ ಇಂಡಿಯನ್ ಗಾಡೆಸ್ಸಸ್', 'ಭೂಮಿ', 'ಮೈ ನೇಮ್ ಈಸ್ ಖಾನ್' ಮುಂತಾದ ಸಿನೆಮಾಗಳಲ್ಲಿ ನಟಿಸಿದ್ದಾರೆ.

ವಿಜಯ್ ರತ್ನಾಕರ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದ ಸೆಟ್ ನಿಂದ ತೆಗೆಯಲಾದ ಫೋಟೋವನ್ನು ಅನುಪಮ್ ಖೇರ್ ಶೇರ್ ಮಾಡಿದ್ದಾರೆ.  'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ಸಂಜಯ್ ಬರು ಆಗಿ ಅಕ್ಷಯ್ ಖನ್ನಾ, ವಾಜಪೇಯಿ ಆಗಿ ರಾಮ್ ಅವತಾರ್ ಭಾರದ್ವಾಜ್ ಹಾಗೂ ಗುರುಶರಣ್ ಕೌರ್ ಆಗಿ ದಿವ್ಯಾ ಸೇಠ್ ಶಾ ನಟಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ ಬರು ಅವರ ಕೃತಿಯನ್ನಾಧರಿಸಿ ತಯಾರಿಸಲಾಗುತ್ತಿರುವ ಈ ಸಿನೆಮಾವನ್ನು ಬೊಹ್ರಾ ಬ್ರದರ್ಸ್ ನಿರ್ಮಿಸುತ್ತಿದ್ದಾರೆ. ಚಿತ್ರ ಡಿಸೆಂಬರ್ 21ರಂದು ತೆರೆ ಕಾಣಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News