ಜುಲೈ 2ರಂದು 10 ಲಕ್ಷ ವ್ಯಾಪಾರಿಗಳಿಂದ ಪ್ರತಿಭಟನೆ

Update: 2018-06-28 16:38 GMT

ಹೊಸದಿಲ್ಲಿ, ಜೂ.28: ವಿದೇಶಿ ಆನ್‌ಲೈನ್ ಸರಕು ಮಾರಾಟ ಸಂಸ್ಥೆ ಮಾಲ್ಮಾರ್ಟ್ ಮತ್ತು ಭಾರತದ ಫ್ಲಿಪ್‌ಕಾರ್ಟ್ ನಡುವೆ ನಡೆದಿರುವ ಒಪ್ಪಂದವನ್ನು ವಿರೋಧಿಸಿ ದೇಶದ ಹತ್ತು ಲಕ್ಷಕ್ಕೂ ಅಧಿಕ ಸಣ್ಣ ವ್ಯಾಪಾರಿಗಳು ಜುಲೈ ಎರಡರಂದು ಬೀದಿಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

“ಈ ಒಪ್ಪಂದದಿಂದ ವಾಲ್ಮಾರ್ಟ್ ನಮ್ಮ ಮಾರುಕಟ್ಟೆಗಳಲ್ಲಿ ಅಂಗಡಿಗಳನ್ನು ತೆರೆಯಲು ಸಾಧ್ಯವಾಗುತ್ತದೆ ಮತ್ತು ಆನ್‌ಲೈನ್‌ನಲ್ಲಿ ಆರ್ಡರ್ ಪಡೆದು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈ ರೀತಿಯಾದರೆ ಜನರು ಮಾರುಕಟ್ಟೆಗೆ ಬರುವುದನ್ನು ನಿಲ್ಲಿಸುತ್ತಾರೆ. ಆಗ ನಮ್ಮ ಗತಿಯೇನು” ಎಂದು ಸಣ್ಣ ವ್ಯಾಯಾಪಾರಿಗಳು ಅಲವತ್ತುಕೊಂಡಿದ್ದಾರೆ. ಅಖಿಲ ಭಾರತ ವ್ಯಾಪಾರಿಗಳ ಸಂಘಟನೆ (ಸಿಎಐಟಿ) ಈ ಪ್ರತಿಭಟನೆಯನ್ನು ಆಯೋಜಿಸಿದೆ. ವಾಲ್ಮಾರ್ಟ್ ಮತ್ತು ಫ್ಲಿಪ್‌ಕಾರ್ಟ್ ಒಪ್ಪಂದವನ್ನು ಈ ಸಂಘಟನೆ ಆರಂಭದಿಂದಲೂ ವಿರೋಧಿಸುತ್ತಾ ಬಂದಿದೆ.

ವ್ಯಾಪಾರಿ ಸಂಘಟನೆ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಮೊದಲನೆಯದಾಗಿ, ವಾಲ್ಮಾರ್ಟ್-ಫ್ಲಿಪ್‌ಕಾರ್ಟ್ ಒಪ್ಪಂದವನ್ನು ರದ್ದು ಮಾಡುವುದು. ಎರಡನೆಯದಾಗಿ, ಇ-ಕಾಮರ್ಸ್ ನೀತಿಯನ್ನು ರಚಿಸುವುದು ಮತ್ತು ಮೂರನೆಯದಾಗಿ, ಇ-ಕಾಮರ್ಸ್ ಉದ್ದಿಮೆಯ ನಿಯಂತ್ರಣ ಮಂಡಳಿಯನ್ನು ರಚಿಸುವುದು. “ಸರಕಾರವು ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರು ಈ ಒಪ್ಪಂದದ ಬಗ್ಗೆ ವಿಭಿನ್ನವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ದೇಶದ 6.5 ಕೋಟಿ ಸಣ್ಣ ವ್ಯಾಪಾರಿಗಳನ್ನು ಸಂಕಷ್ಟಕ್ಕೀಡು ಮಾಡುವ ವಿಷಯದ ಬಗ್ಗೆ ಸರಕಾರ ಯಾಕೆ ಮೌನ ತಾಳಿದೆ” ಎಂದು ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕಂಡೇಲ್ವಾಲ್ ತಿಳಿಸಿದ್ದಾರೆ. ಜುಲೈ 2ರಂದು ಹತ್ತು ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ದೇಶದ ಒಂದು ಸಾವಿರ ಕಡೆ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ. ಈ ಸಂದರ್ಭ ಒಪ್ಪಂದದ ವಿರುದ್ಧ ಘೋಷಣೆಗಳನ್ನು ಕೂಗಲಾಗುವುದು ಮತ್ತು ವಾಲ್ಮಾರ್ಟ್‌ನ ಪ್ರತಿಕೃತಿ ದಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ನಂತರ ಪ್ರತಿಭಟನಾಕಾರರು ಆಯಾ ಪ್ರದೇಶದ ಜಿಲ್ಲಾಯುಕ್ತರನ್ನು ಅಥವಾ ಮ್ಯಾಜಿಸ್ಟ್ರೇಟ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ವಾಲ್ಮಾರ್ಟ್-ಫ್ಲಿಪ್‌ಕಾರ್ಟ್ ಒಪ್ಪಂದವು ವಿದೇಶಿ ನೇರ ಬಂಡವಾಳ ನೀತಿಯ ಹಲವು ಅಂಶಗಳನ್ನು ಉಲ್ಲಂಘಿಸುತ್ತದೆ. ಜೊತೆಗೆ ದತ್ತಾಂಶ ಭದ್ರತೆ ಹಾಗೂ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ಹೊಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News