ಶುಜಾತ್ ಬುಖಾರಿ ಹತ್ಯೆಗೆ ಪಾಕಿಸ್ತಾನದಲ್ಲಿ ಸಂಚು: ಜಮ್ಮುಕಾಶ್ಮೀರ ಪೊಲೀಸರು

Update: 2018-06-28 16:44 GMT

ಹೊಸದಿಲ್ಲಿ, ಜೂ. 28: ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಸಂಚನ್ನು ಲಷ್ಕರೆ-ತಯ್ಯಿಬ ರೂಪಿಸಿತ್ತು ಹಾಗೂ ಪಾಕಿಸ್ತಾನದಲ್ಲಿ ಯೋಜಿಸಲಾಗಿತ್ತು ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಜಿ ಎಸ್.ಪಿ. ಪಾನಿ, ‘‘ಈ ಹತ್ಯೆಯನ್ನು ಪಾಕಿಸ್ತಾನದಿಂದ ನಡೆಸಲಾಗಿದೆ ಎಂಬುದನ್ನು ಸಾಬೀತುಪಡಿಸುವ ಸಾಕಷ್ಟು ಪುರಾವೆಗಳು ನಮ್ಮಲ್ಲಿ ಇವೆ.’’ ಎಂದಿದ್ದಾರೆ.

 ಬುಖಾರಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಲಷ್ಕರೆ ತಯ್ಯಿಬದ ಉಗ್ರರಾದ ಸಜ್ಜಾದ್ ಗುಲ್, ಆಜಾದ್ ಅಹ್ಮದ್ ಮಲಿಕ್ ಆಲಿಯಾಸ್ ದಾದಾ, ಮುಝಾಫರ್ ಅಹ್ಮದ್ ಭಟ್ ಹಾಗೂ ನವೀದ್ ಜಾಟ್‌ನ ಹೆಸರು ಹಾಗೂ ಭಾವಚಿತ್ರವನ್ನು ಪಾನಿ ಬಿಡುಗಡೆ ಮಾಡಿದ್ದಾರೆ.

ನವೀದ್ ಜಾಟ್ ದಕ್ಷಿಣ ಕಾಶ್ಮೀರದಲ್ಲಿ ಕ್ರಿಯಾಶೀಲನಾಗಿದ್ದರೆ, ಸಜ್ಜಾದ್ ಗುಲ್ ಪಾಕಿಸ್ತಾನದಲ್ಲಿ ಸಕ್ರಿಯನಾಗಿದ್ದ.

‘ರೈಸಿಂಗ್ ಕಾಶ್ಮೀರ’ದ ಸಂಪಾದಕರ ಹತ್ಯೆಗೆ ಸಂಚು ರೂಪಿಸಲು ಸಾಮಾಜಿಕ ಜಾಲ ತಾಣವನ್ನು ಬಳಸಲಾಗಿತ್ತು ಎಂದು ಪೊಲೀಸ್ ತನಿಖೆ ವೇಳೆ ಪತ್ತೆಯಾಗಿದೆ. ಸಜ್ಜಾದ್ ಗುಲ್ ಈ ಹಿಂದೆ 2003ರಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದರು. ಅನಂತರ ಭಯೋತ್ಪಾದನ ಪ್ರಕರಣದಲ್ಲಿ ಜಮ್ಮು ಹಾಗೂ ಕಾಶ್ಮೀರ ಪೊಲೀಸರು 2016ರಲ್ಲಿ ಬಂಧಿಸಿದ್ದರು. 2016 ಮಾರ್ಚ್‌ನಲ್ಲಿ ಗುಲ್ ದೇಶ ತ್ಯಜಿಸಿದ್ದ. ಆತನ ವಿರುದ್ಧ ಲುಕೌಟ್ ನೋಟೀಸ್ ಹೊರಡಿಸಲಾಗಿತ್ತು. ಆತನೇ ಈ ಹತ್ಯೆ ನಡೆಸಿದ್ದಾನೆ ಎಂಬುದಕ್ಕೆ ನಮ್ಮಲ್ಲಿ ಸಾಕಷ್ಟು ಸಾಕ್ಷಿಗಳು ಇವೆ ಎಂದು ಪಾನಿ ಹೇಳಿದ್ದಾರೆ.

ಆದಾಗ್ಯೂ, ಬುಖಾರಿ ಅವರ ಹತ್ಯೆಯ ಹಿಂದಿನ ಉದ್ದೇಶ ಏನು ಎಂಬುದನ್ನು ಪೊಲೀಸರು ಬಹಿರಂಗಗೊಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News