ಕಳ್ಳನಿಗೆ ಶಸ್ತ್ರಕ್ರಿಯೆ ಮಾಡಿಸಿದ ಪೊಲೀಸರು!: ಕಾರಣವೇನು ಗೊತ್ತೇ?

Update: 2018-06-29 09:31 GMT

ಭೋಪಾಲ್, ಜೂ.29: ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ವ್ಯಕ್ತಿಗೆ ಪೊಲೀಸರು ಶಸ್ತ್ರಕ್ರಿಯೆ ಮಾಡಿಸಿದ ಬಗ್ಗೆ ವರದಿಯಾಗಿದೆ. ಮಧ್ಯ ಪ್ರದೇಶದ ಜಬಲ್ಪುರದಲ್ಲಿನ ಡಿಫೆನ್ಸ್ ಕಾಲನಿಯಲ್ಲಿ ತನ್ನ ಮನೆಯ ಹೊರಗಡೆ ಮಲಗಿದ್ದ ವೃದ್ಧೆಯೊಬ್ಬರ ಮಂಗಲಸೂತ್ರವನ್ನು ಕಸಿದು ಪರಾರಿಯಾದ ಆರೋಪಿಗಳಲ್ಲೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನುಂಗಿದ್ದ ಚಿನ್ನದ ಸರವನ್ನು ವೈದ್ಯರು ಎಂಡೋಸ್ಕೊಪಿ ಶಸ್ತ್ರಕ್ರಿಯೆಯ ಮೂಲಕ ಕೇವಲ ಐದೇ ನಿಮಿಷದಲ್ಲಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ ಸಂಜೆ 70 ವರ್ಷದ ಮಹಿಳೆ ಮಲಗಿಕೊಂಡಿದ್ದಾಗ ಮೋಟಾರ್ ಸೈಕಲ್ ನಲ್ಲಿ ಬಂದ ಇಬ್ಬರು ಆಗಂತುಕರು ಸರವನ್ನು ಸೆಳೆದು ಪರಾರಿಯಾಗುತ್ತಿದ್ದಂತೆಯೇ ಆಕೆ ಬೊಬ್ಬೆ ಹೊಡೆದಿದ್ದರು. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ  ಪೊಲೀಸರ ತಂಡವೊಂದು ಅವರನ್ನು ಸೆರೆ ಹಿಡಿದಾಗ ಅವರಲ್ಲೊಬ್ಬ ಸೂರಜ್ ಕುಮಾರ್ ಎಂಬಾತ ಥಟ್ಟನೆ ಸರವನ್ನು ನುಂಗಿ ತಾನು ಕದ್ದಿಲ್ಲವೆಂದು ಹೇಳಲು ಪ್ರಯತ್ನಿಸಿದ್ದ. ಪೊಲೀಸರು ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸ್ ರೇ ತೆಗೆಸಿದಾಗ ಆತನ  ಕರುಳಿನಲ್ಲಿ ಚಿನ್ನದ ತುಂಡುಗಳು ಹಾಗೂ ಪೆಂಡೆಂಟ್ ಪತ್ತೆಯಾಗಿದ್ದವು.

ವೈದ್ಯರು ಕೂಡಲೇ ಎಂಡೋಸ್ಕೋಪಿಕ್ ಶಸ್ತ್ರಕ್ರಿಯೆ ಮುಖಾಂತರ ಚಿನ್ನವನ್ನು ಹೊರತೆಗೆದಿದ್ದು ಅದನ್ನು ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಹಲವು ಕಡೆ ಸರ ಕದ್ದಿದ್ದಾಗಿ ಹಾಗೂ ಕೆಲ ತಿಂಗಳುಗಳ ಹಿಂದೆ ಜೈಲಿಗೆ ಹೋಗಿ ಈಗ ಜಾಮೀನಿನ ಮೇಲಿರುವುದಾಗಿ ಬಾಯ್ಬಿಟ್ಟಿದ್ದ.

2016ರಲ್ಲಿ ಇಂತಹುದೇ ಒಂದು ಸನ್ನಿವೇಶವನ್ನು ಈತ ಎದುರಿಸಿದ್ದ. ಮುಂಬೈ ಪೊಲೀಸರು ಆರೋಪಿಗೆ ಎರಡು ದಿನಗಳಲ್ಲಿ ಸುಮಾರು 96 ಬಾಳೆಹಣ್ಣುಗಳನ್ನು ನೀಡಿ ಆತ ಪ್ರತಿ ಬಾರಿ ಶೌಚಾಲಯಕ್ಕೆ ಹೋಗಿ ಬಂದ ನಂತರವೂ ಆತನ ಮಲ ಪರೀಕ್ಷಿಸುವ ಅನಿವಾರ್ಯತೆ ಎದುರಿಸಿದ್ದರು. ಕೊನೆಗೆ ಮೂರನೇ ದಿನ ಆತನಿಗೆ ಎನಿಮಾ ನೀಡಿದ ನಂತರ ಆತ ನುಂಗಿದ್ದ ಚಿನ್ನ ಹೊರಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News