ತೆರಿಗೆ ಪಾವತಿಸುವವರು ತೆರಿಗೆ ಸುಧಾರಣೆಗೆ ಸಿದ್ಧವಿರುವುದಕ್ಕೆ ಸಾಕ್ಷಿಯಾಗಿದೆ: ವಿತ್ತ ಸಚಿವಾಲಯ
ಹೊಸದಿಲ್ಲಿ, ಜೂ.30: ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ)ಯ ಮೊದಲ ವರ್ಷವು ದೇಶದ ತೆರಿಗೆ ಪಾವತಿದಾರರು ತೆರಿಗೆ ಸುಧಾರಣೆಯ ಜೊತೆ ಕೈಜೋಡಿಸಲು ಸಿದ್ಧವಾಗಿರುವುದಕ್ಕೆ ಉದಾಹರಣೆಯಾಗಿದೆ ಎಂದು ವಿತ್ತ ಸಚಿವಾಲಯ ಶನಿವಾರ ತಿಳಿಸಿದೆ. ಸರಕು ಹಾಗೂ ಸೇವಾ ತೆರಿಗೆಯ ಮೊದಲ ವರ್ಷದ ಅಂಗವಾಗಿ ಸರಕಾರವು ಜುಲೈ 1, 2018ನ್ನು ಜಿಎಸ್‌ಟಿ ದಿನ ಎಂದು ಆಚರಿಸಲಿದೆ. ಕೇಂದ್ರ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಪಿಯೂಶ್ ಗೋಯಲ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಹಾಗೂ ಕೇಂದ್ರ ವಿತ್ತ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ಗೌರವ ಅಥಿತಿಯಾಗಿ ಆಗಮಿಸಲಿದ್ದಾರೆ ಎಂದು ಸಚಿವಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಜೂನ್ 30 ಮತ್ತು ಜುಲೈ ಒಂದರ ಮಧ್ಯರಾತ್ರಿ ಸಂಸತ್‌ನ ಕೇಂದ್ರ ಸಭಾಭವನದಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಅನುಷ್ಠಾನಕ್ಕೆ ತರಲಾಯಿತು. ಹಲವು ಸ್ಥಳೀಯ ಸುಂಕಗಳನ್ನು ತೆಗೆದು ಹಾಕುವ ಜಿಎಸ್‌ಟಿಯು ಭಾರತವನ್ನು ಒಂದು ದೇಶ ಒಂದು ತೆರಿಗೆಯಾಗಿ ಬದಲಾಯಿಸಿದೆ ಹಾಗೂ ದೇಶವನ್ನು ಆರ್ಥಿಕ ಒಕ್ಕೂಟವಾಗಿ ಜೊತೆಯಾಗಿಸಿದೆ ಎಂದು ಸಚಿವಾಲಯ ತಿಳಿಸಿದೆ. ಇ-ವೇ ಬಿಲ್ ಜಾರಿಗೆ ತಂದಿರುವುದು ಒಂದು ಪರಿಣಾಮಕಾರಿ ಕ್ರಮವಾಗಿದ್ದು ಇಡೀ ದೇಶದಲ್ಲಿ ಸರಕು ಸಾಗಟಕ್ಕೆ ಕೇವಲ ಒಂದು ಇ-ವೇ ಬಿಲ್‌ನ ಅಗತ್ಯ ಬೀಳುವುದರಿಂದ ದೇಶಾದ್ಯಂತ ಸರಕುಗಳನ್ನು ಸಾಗಿಸಲು ಯಾವುದೇ ತೊಡಕಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ರಫ್ತು, ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು, ಕೃಷಿ ಮತ್ತು ಕೈಗಾರಿಕೆ, ಸಾಮಾನ್ಯ ಗ್ರಾಹಕರು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಲಾಭವನ್ನುಂಟು ಮಾಡುವ ಮೂಲಕ ಜಿಎಸ್‌ಟಿ ಆರ್ಥಿಕತೆಯ ಮೇಲೆ ಬಹುಹಂತದ ಪರಿಣಾಮ ಬೀರಲಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.