×
Ad

ಫಿಫಾ ವಿಶ್ವಕಪ್‌: ಫ್ರಾನ್ಸ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Update: 2018-06-30 21:31 IST
ಕೈಲ್ಯಾನ್ ಬಾಪೆ(64 ನಿ. ಮತ್ತು 68ನೇ ನಿ.)

ಫ್ರಾನ್ಸ್ 4, ಅರ್ಜೆಂಟೀನ 3

ಕಝಾನ್, ಜು.1: ಯುವ ಆಟಗಾರ ಕಿಲಿಯನ್ ಬಾಪ್ಪೆ ನಾಲ್ಕು ನಿಮಿಷಗಳಲ್ಲಿ ಎರಡು ಗೋಲು ಗಳಿಸಿ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ರೋಚಕ ನಾಕೌಟ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಫುಟ್ಬಾಲ್ ರಂಗದ ದಿಗ್ಗಜ ಲಿಯೊನಾಲ್ ಮೆಸ್ಸಿ ಪಡೆಯನ್ನು 4-3ರಿಂದ ಹಿಮ್ಮೆಟ್ಟಿಸಿ ಎಂಟರ ಘಟ್ಟಕ್ಕೆ ಮುನ್ನಡೆಯಿತು.

19 ವರ್ಷದ ಮುನ್ಪಡೆ ಆಟಗಾರ ಬಾಪ್ಪೆ ಪಾದರಸದ ಚಲನೆ ಅರ್ಜೆಂಟೀನಾಗೆ ಆರಂಭದಿಂದಲೂ ತೊಂದರೆ ಕೊಟ್ಟಿತು. ಇವರ ಅವಳಿ ಗೋಲುಗಳು ಫ್ರಾನ್ಸ್‌ಗೆ ಹಿನ್ನಡೆಯಿಂದ ಚೇತರಿಸಿಕೊಂಡು ಮುಂದಿನ ಶುಕ್ರವಾರ ಉರುಗ್ವೆಯನ್ನು ಎದುರಿಸಲು ಅರ್ಹತೆ ಪಡೆಯಲು ಸಹಕಾರಿಯಾದವು.

ಬಾಪ್ಪೆ ಪಂದ್ಯದುದ್ದಕ್ಕೂ ಅಧಿಕಾರಯುತ ಪ್ರದರ್ಶನ ತೋರಿದರೆ, ಅರ್ಜೆಂಟೀನಾದ ಆಂಜೆಲ್ ಡಿಮಾರಿಯೊ ಮತ್ತು ಫ್ರಾನ್ಸ್‌ನ ಬೆಂಜಮಿನ್ ಪವಾರ್ಡ್ ಟೂರ್ನಿಯ ಅತ್ಯುತ್ತಮ ಗೋಲಿಗೆ ಸ್ಪರ್ಧಿಸುವ ರೀತಿಯಲ್ಲಿ ದೀರ್ಘ ಅಂತರದ ಎರಡು ಅದ್ಭುತ ಗೋಲುಗಳನ್ನು ಗಳಿಸಿದರು. ಡಿ ಮಾರಿಯೊ ಸಾಹಸದಿಂದ 57ನೇ ನಿಮಿಷದಲ್ಲಿ ಅರ್ಜೆಂಟೀನಾ 2-2 ಸಮಬಲ ಸಾಧಿಸಲು ಸಾಧ್ಯವಾಯಿತು. ಬಳಿಕ ಗ್ಯಾಬ್ರಿಯೆಲ್ ಮೆಕಾರ್ಡೊ ಅರ್ಜೆಂಟೀನಾಗೆ ಮುನ್ನಡೆ ದೊರಕಿಸಿಕೊಟ್ಟರು.

1958ರಲ್ಲಿ ಹದಿಹರೆಯದ ಆಟಗಾರನಾಗಿ ಫುಟ್ಬಾಲ್ ಮಾಂತ್ರಿಕ ಪೀಲೆ ಫೈನಲ್‌ನಲ್ಲಿ ಬ್ರೆಝಿಲ್ ಪರ ಎರಡು ಗೋಲುಗಳನ್ನು ಬಾರಿಸಿದ ಸಾಧನೆಯನ್ನು ಬಾಪ್ಪೆ ಸರಿಗಟ್ಟಿದರು. ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ ಬದಲಿ ಸ್ಟ್ರೈಕರ್ ಸೆರ್ಗಿಯೊ ಅಗೆರೊ ಮೂಲಕ ಪ್ರತಿದಾಳಿಯ ತಂತ್ರ ಹೂಡಿದರೂ ಬಾಪ್ಪೆಯವರ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಬಾಪ್ಪೆ 64 ಹಾಗೂ 68ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಬಾರಿಸಿದರು. ಕೊನೆಯ 20 ನಿಮಿಷಗಳಲ್ಲಿ ಅರ್ಜೆಂಟೀನಾ ಪ್ರತಿದಾಳಿಯ ಪ್ರಯತ್ನ ನಡೆಸಿದರೂ ಯಶ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News