‘ಬೂದು ಪಟ್ಟಿ’ಯಲ್ಲಿ ಪಾಕಿಸ್ತಾನ: ಭಾರತ ಸ್ವಾಗತ

Update: 2018-06-30 16:34 GMT

ಹೊಸದಿಲ್ಲಿ, ಜೂ. 30: ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುತ್ತಿರುವುದನ್ನು ನಿಗ್ರಹಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಾಗತಿಕ ಹಣ ಅಕ್ರಮ ವರ್ಗಾವಣೆ ಸಂಘಟನೆ (ಎಫ್‌ಎಟಿಎಫ್) ಪಾಕಿಸ್ತಾನಕ್ಕೆ ‘ಬೂದು’ ಪಟ್ಟಿಯಲ್ಲಿ ಸ್ಥಾನ ನೀಡಿದ ಬಳಿಕ, ಪಾಕಿಸ್ತಾನದ ನೆಲದಿಂದ ನಡೆಯುತ್ತಿರುವ ಭಯೋತ್ಪಾದನೆ ಕುರಿತ ಅತಂತಾರಾಷ್ಟ್ರೀಯ ಕಳವಳ ಪರಿಹರಿಸಲು ಪಾಕಿಸ್ತಾನ ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಭರವಸೆಯನ್ನು ಭಾರತ ಹೊಂದಿದೆ. 

ಪೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ತನ್ನ ‘ಬೂದು ಪಟ್ಟಿ’ಯಲ್ಲಿ ಪಾಕಿಸ್ತಾನವನ್ನು ಗುರುತಿಸಿರುವುದನ್ನು ಭಾರತ ಸ್ವಾಗತಿಸಿದೆ ಹಾಗೂ ಜಾಗತಿಕ ಸಂಸ್ಥೆ ಸಲಹೆ ನೀಡಿದ ಕ್ರಿಯಾ ಯೋಜನೆಯನ್ನು ಪಾಕಿಸ್ತಾನ ಸಮಯ ಮಿತಿಯ ಒಳಗಡೆ ಅನುಸರಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದೆ. ತನ್ನ ನಿಯಂತ್ರಣದ ಒಳಗಿರುವ ಯಾವುದೇ ಭೂಪ್ರದೇಶದಿಂದ ನಡೆಯುವ ಭಯೋತ್ಪಾದನೆಗೆ ಸಂಬಂಧಿಸಿದ ಜಾಗತಿಕ ಆತಂಕ ಪರಿಹರಿಸಲು ಎಫ್‌ಎಟಿಎಫ್‌ನ ಕ್ರಿಯಾ ಯೋಜನೆಯನ್ನು ಪಾಕಿಸ್ತಾನ ಸಮಯ ಮಿತಿಯಲ್ಲಿ ಅನುಸರಿಸಲಿದೆ ಹಾಗೂ ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ತನ್ನ ಭೂಭಾಗವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿ ಮಾಡಲು ಅವಕಾಶ ನೀಡಿರುವ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಜಾಗತಿಕ ಸಂಸ್ಥೆಯನ್ನು ಕೋರಿದೆ ಹಾಗೂ ಮುಂಬೈ ದಾಳಿ ಸಹಿತ ಭಾರತದಲ್ಲಿ ನಡೆದ ಸರಣಿ ದಾಳಿಯಲ್ಲಿ ಭಾಗಿಯಾದ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಶಿಕ್ಷಿಸುವಂತೆ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News