ರಾಮಾಯಣವನ್ನು ಉರ್ದುಗೆ ಭಾಷಾಂತರಿಸಿದ ಮುಸ್ಲಿಂ ಮಹಿಳೆ
ಕಾನ್ಪುರ, ಜೂ. 30: ಇಲ್ಲಿನ ಪ್ರೇಮ್ ನಗರ ಪ್ರದೇಶದ ಮಸ್ಲಿಂ ಮಹಿಳೆಯೊಬ್ಬರು ರಾಮಾಯಣವನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲೇಖಕಿ ಡಾ. ಮಹಿ ತಲಾತ್ ಸಿದ್ದೀಖಿ, ಹಿಂದೂಗಳ ದೇವರನ್ನು ಮುಸ್ಲಿಂ ಸಮುದಾಯ ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ. ಎರಡು ವರ್ಷಗಳ ಹಿಂದೆ ರಾಮಾಯಣವನ್ನು ಉರ್ದುವಿನಲ್ಲಿ ಭಾಷಾಂತರಿಸಲು ನಿರ್ಧರಿಸಿದ ಬಳಿಕ ಕಾನ್ಪುರದ ನಿವಾಸಿಯಾಗಿರುವ ಬದ್ರಿ ನಾರಾಯಣ ತಿವಾರಿ ಅವರು ಡಾ. ಮಹಿ ತಲಾತ್ ಅವರಿಗೆ ರಾಮಾಯಣದ ಪ್ರತಿ ನೀಡಿದ್ದರು.
‘‘ಎಲ್ಲ ಧರ್ಮಗಳ ಪವಿತ್ರ ಪಠ್ಯಗಳಂತೆ ರಾಮಾಯಣ ಕೂಡ ಶಾಂತಿ ಹಾಗೂ ಭಾತೃತ್ವದ ಸಂದೇಶ ನೀಡುತ್ತದೆ. ಈ ಮಹಾಕಾವ್ಯವನ್ನು ಸುಂದರವಾಗಿ ಬರೆಯಲಾಗಿದೆ. ಇದನ್ನು ಉರ್ದುವಿನಲ್ಲಿ ಬರೆದ ಬಳಿಕ ನನಗೆ ಆರಾಮದ ಹಾಗೂ ಶಾಂತಿಯ ಅನುಭವವಾಯಿತು’’ಎಂದು ಡಾ. ತಲಾತ್ ಹೇಳಿದ್ದಾರೆ. ಇದನ್ನು ಭಾಷಾಂತರಿಸಲು ಅವರಿಗೆ ಒಂದೂವರೆ ವರ್ಷ ಹಿಡಿಯಿತು. ಪಠ್ಯದ ಸಹಜ ಅರ್ಥ ಬದಲಾಣೆಯಾಗದಂತೆ ಭಾಷಾಂತರಿಸಲು ಅವರು ಗಮನ ಕೇಂದ್ರೀಕರಿಸಿದ್ದರು.
ಕೆಲವರು ಧಾರ್ಮಿಕ ವಿಷಯಗಳಲ್ಲಿ ಸಮಾಜದಲ್ಲಿ ಹಿಂಸಾಚಾರವನ್ನು ಉತ್ತೇಜಿಸುತ್ತಾರೆ. ಆದರೆ, ಯಾವುದೇ ಧರ್ಮ ಕೂಡ ದ್ವೇಷವನ್ನು ಬೋಧಿಸುವುದಿಲ್ಲ. ಎಲ್ಲ ಧರ್ಮಗಳ ಜನರು ಕೂಡ ಪ್ರೀತಿ ಹಾಗೂ ಸೌಹಾರ್ದತೆಯಿಂದ ಜೊತೆೆಯಾಗಿ ಜೀವಿಸಬೇಕು ಎಂದು ಡಾ. ತಲಾತ್ ಹೇಳಿದ್ದಾರೆ.