ಎನ್‌ಡಿಎ ಆಡಳಿತದ ರಾಜ್ಯಗಳ ಕಳಪೆ ಸಾಧನೆ: ನೀತಿ ಆಯೋಗದಿಂದ ಪಟ್ಟಿ ಬಿಡುಗಡೆ
ಹೊಸದಿಲ್ಲಿ, ಜೂ.30: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ‘ಮಹಾತ್ವಾಕಾಂಕ್ಷೆಯ ಜಿಲ್ಲೆಗಳು’ ಮಾಡಿರುವ ಸಾಧನೆಯ ಬಗ್ಗೆ ನೀತಿ ಆಯೋಗ ಬಿಡುಗಡೆಗೊಳಿಸಿದ ಇತ್ತೀಚಿನ ಪಟ್ಟಿಯಲ್ಲಿ ಪಶ್ಚಿಮ ಸಿಕ್ಕಿಂ, ತಮಿಳುನಾಡಿನ ರಾಮನಾಥಪುರಂ, ಆಂಧ್ರಪ್ರದೇಶದ ವಿಝಿಯನಗರಂ ಮತ್ತು ವೈ.ಎಸ್.ಆರ್ ಅಗ್ರ ಐದು ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಎನ್‌ಡಿಎ ಆಡಳಿತ ಇರುವ ರಾಜ್ಯಗಳು ಕಳಪೆ ಸಾಧನೆ ಮಾಡಿವೆ. ದೇಶದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳ ಪ್ರಥಮ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿರುವ ನೀತಿ ಆಯೋಗ, ಜಿಲ್ಲೆಗಳಲ್ಲಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುವ ಉದ್ದೇಶದಿಂದ ಇಂತಹ ಪಟ್ಟಿಯನ್ನು ರೂಪಿಸಲಾಗಿದೆ ಎಂದು ತಿಳಿಸಿದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ಸಾಧನೆಯನ್ನು ಸುಧಾರಿಸಿಕೊಂಡಿದ್ದರೆ ಎನ್‌ಡಿಎ ಆಡಳಿತ ಇರುವ ಇತರ ರಾಜ್ಯಗಳು ಕಳಪೆ ಸಾಧನೆ ಮಾಡಿವೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಕನಿಷ್ಟ ಅಭಿವೃದ್ಧಿ ಸಾಧಿಸಿದ ಜಿಲ್ಲೆಯಾಗಿದೆ.
ಶಿಕ್ಷಣ ಮೂಲಸೌಕರ್ಯ ವಿಭಾಗದಲ್ಲಿ ಆಂದ್ರಪ್ರದೇಶದ ವಿಝಿಯನಗರಂ, ವೈಎಸ್‌ಆರ್ ಮತ್ತು ವಿಶಾಖಪಟ್ಟಣಂ, ಗುಜರಾತ್‌ನ ದಾಹೋದ್ ಮತ್ತು ಬಿಹಾರದ ಔರಂಗಾಬಾದ್ ಜಿಲ್ಲೆಗಳು ಅಗ್ರ ಐದು ಸ್ಥಾನ ಗಳಿಸಿವೆ. ಅಭಿವೃದ್ಧಿಯಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ ಜಿಲ್ಲೆಗಳ ಪೈಕಿ 9 ಜಿಲ್ಲೆಗಳು ಎನ್‌ಡಿಎ ಆಡಳಿತ ಇರುವ ಬಿಹಾರ, ಉ.ಪ್ರದೇಶ, ಜಾರ್ಖಂಡ್ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿವೆ. ನಿತೀಶ್ ಕುಮಾರ್ ಕಳೆದ 13 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಹಾರದ ಬೆಗುಸರಾಯ್, ಬಾಂಕ ಮತ್ತು ಖಗಾರಿಯಾ ಜಿಲ್ಲೆಗಳು ಅತ್ಯಂತ ಕಳಪೆ ಸಾಧನೆ ತೋರಿದ ಜಿಲ್ಲೆಗಳ ಸಾಲಿನಲ್ಲಿವೆ. ಬಿಜೆಪಿ ಆಡಳಿತ ಇರುವ ಜಾರ್ಖಂಡ್‌ನ ಸಿಮ್ದೆಗ ಮತ್ತು ರಾಂಚಿ ಜಿಲ್ಲೆಗಳೂ ಪಟ್ಟಿಯಲ್ಲಿ ಕಡೆಯ ಸ್ಥಾನ ಪಡೆದಿವೆ.
ಕಳೆದ 14 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿರುವ ಛತ್ತೀಸ್‌ಗಢ ಕೂಡಾ ಅತ್ಯಂತ ಕಳಪೆ ಸಾಧನೆ ತೋರಿದ್ದು ನಕ್ಸಲರ ಹಾವಳಿಯಿಂದ ನಲುಗಿರುವ ಸುಕ್ಮಾ ಪಟ್ಟಿಯಲ್ಲಿ ಅಂತಿಮ 10ರಲ್ಲಿ ಸ್ಥಾನ ಪಡೆದಿದೆ. ತೆಲಂಗಾಣದ ಭೂಪಾಲಪಲ್ಲಿ ಜಿಲ್ಲೆಯು ಆರೋಗ್ಯ ಮತ್ತು ಪೋಷಣೆಯಲ್ಲಿ 100ನೇ ಸ್ಥಾನ ಪಡೆದಿದ್ದರೆ ಪ್ರಸವ ಪೂರ್ವ ಮತ್ತು ಪ್ರಸವದ ಬಳಿಕದ ಆರೈಕೆಯಲ್ಲಿ ಉತ್ತಮ ಸಾಧನೆ ತೋರಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಈ ಮಧ್ಯೆ, ಬಿಹಾರ, ಮಧ್ಯಪ್ರದೇಶ ಹಾಗೂ ಉ.ಪ್ರದೇಶದ ಕಳಪೆ ಸಾಧನೆ ದೇಶದ ಅಭಿವೃದ್ಧಿಗೆ ಹಿನ್ನಡೆ ತಂದಿದೆ ಎಂಬ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿಕೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೀವ್ರವಾಗಿ ಖಂಡಿಸಿದ್ದಾರೆ.