ಕಲರ್ ಚಿಟ್ಟೆಗೆ ಕಲರವದ ಕೊರತೆ

Update: 2018-06-30 18:31 GMT

ಮನು ಮತ್ತು ಸೋನು ನವದಂಪತಿಯರು. ಹನಿಮೂನ್ ಮುಗಿಸಿಕೊಂಡು ಹೊಸ ಮನೆಯೊಂದನ್ನು ಸೇರಿಕೊಳ್ಳುತ್ತಾರೆ. ಅಲ್ಲಿ ದೆವ್ವದ ಕಾಟ ಶುರುವಾಗುತ್ತದೆ. ಅಲ್ಲಿಗೆ ರಾಮ್ ಗೋಪಾಲ್ ವರ್ಮ ಮಾದರಿಯ ದೆವ್ವದ ಚಿತ್ರಗಳ ಸಾಲಿಗೆ ಈ ಚಿತ್ರವೂ ಸೇರಿಕೊಳ್ಳುತ್ತದೆ. ನಿರ್ದೇಶಕ ಎಂ.ಎಲ್. ಪ್ರಸನ್ನ ಕೂಡ ಅಜ್ಜ ನೆಟ್ಟ ಆಲದ ಮರವನ್ನೇ ಮೆಚ್ಚಿಕೊಂಡಿರುವುದು ವಿಪರ್ಯಾಸ.

ಚಿತ್ರದ ಛಾಯಾಗ್ರಹಣದಲ್ಲಿ ಪ್ರಯೋಗಗಳು ನಡೆದಿಲ್ಲ. ಆದರೆ ಒಂದೊಳ್ಳೆಯ ಗುಣಮಟ್ಟ ಇದೆ. ಅದೊಂದೇ ಚಿತ್ರದ ಆರಂಭದ ಆಕರ್ಷಣೆ. ನಾಯಕಿಯಾಗಿ ಹರ್ಷಿಕಾ ಪೂಣಚ್ಚ ಮೊದಲ ಬಾರಿಗೆ ಹೆಚ್ಚು ಸಹಜವೆನಿಸುವ ನಟನೆ ನೀಡಿದ್ದಾರೆ. ಆಕೆಯೊಂದಿಗೆ ಯಶಸ್ ಸೂರ್ಯ ಗ್ಲಾಮರಸ್ ಜೋಡಿಯಾಗಿ ಮಿಂಚಿದ್ದಾರೆ. ದೆವ್ವದ ಚಿತ್ರಗಳಲ್ಲಿ ಸಹಜವಾಗಿ ನಾಯಕಿಯರಿಗೆ ನಟನೆಗೆ ಹೆಚ್ಚು ಅವಕಾಶಗಳಿರುತ್ತವೆ. ಇಲ್ಲೂ ಅಷ್ಟೇ, ರಾತ್ರಿ ದೆವ್ವ ಹೊಕ್ಕಂತಾಡುವ ಹರ್ಷಿಕಾ ಬೆಳಗ್ಗೆ ಅಮಾಯಕಳಂತೆ ಮುಖ ಮಾಡುವುದು ಆಕರ್ಷಕ. ಆದರೆ ಮಧ್ಯಂತರದ ಹೊತ್ತಿಗೆ ನಿಜವಾದ ದೆವ್ವದ ಆಗಮನವಾಗುತ್ತದೆ! ದೀಪಿಕಾ ನಿರ್ವಹಿಸಿರುವ ದೆವ್ವದ ಪಾತ್ರಕ್ಕೆ ಆಕಾರದಲ್ಲಿ ವಿಶೇಷ ಅಮಾನುಷತೆಗಳಿಲ್ಲ. ಥೇಟು ಯು ಟರ್ನ್ ಚಿತ್ರದ ದೆವ್ವದಂತೆ ಇದ್ದರೂ ಅಸಹಜವಾಗಿ ನಗುವಂತೆ ಮಾಡಿ ಪ್ರೇಕ್ಷಕರಲ್ಲಿ ಅಸಹನೆ ಮೂಡಿಸಲಾಗಿದೆ. ದೆವ್ವದ ಫ್ಲ್ಯಾಶ್ ಬ್ಯಾಕ್ ಲವ್ ಸ್ಟೋರಿ ಮತ್ತು ಪ್ರತೀಕಾರದೊಂದಿಗೆ ಚಿತ್ರ ಕೊನೆಯಾಗುತ್ತದೆ. ಪ್ರತೀಕಾರ ಯಾರೊಂದಿಗೆ ಮತ್ತು ಯಾಕೆ ಎನ್ನುವುದನ್ನು ಥಿಯೇಟರಲ್ಲಿ ನೋಡಬಹುದು.

ಪ್ರೇಮ ಸನ್ನಿವೇಶಗಳಷ್ಟು ಸಹಜತೆ ಹಾಸ್ಯದಲ್ಲಿ ಇಲ್ಲ. ಸಾಧುಕೋಕಿಲ ನಿರ್ವಹಿಸಬೇಕಾದಂಥ ಪಾತ್ರವನ್ನು ನಿರ್ದೇಶಕ ಬಿ.ಎಮ್ ಗಿರಿರಾಜ್ ಅವರಿಂದ ಮಾಡಿಸಿರುವುದು ನಿರರ್ಥಕ ಅನಿಸುತ್ತದೆ. ಬಹುಶಃ ನಿರ್ದೇಶಕರು ಚಿತ್ರವನ್ನು ಏಕಾಂಗಿ ಸಿನೆಮಾದ ಚಿಟ್ಟೆ ಹಿಡಿಯುವ ದೃಶ್ಯವೊಂದರಿಂದ ಸ್ಫೂರ್ತಿ ಪಡೆದು ತೆಗೆದಿರುವ ಸಾಧ್ಯತೆಯೂ ಇದೆ! ನಿರ್ದೇಶನದೊಂದಿಗೆ ಚಿತ್ರಕ್ಕೆ ಸಂಗೀತವನ್ನು ನೀಡಿರುವ ಎಂ.ಎಲ್. ಪ್ರಸನ್ನರ ಪ್ರತಿಭೆಯನ್ನು ಮೆಚ್ಚಲೇಬೇಕು. ಆದರೆ ಹಿನ್ನೆಲೆ ಸಂಗೀತದಲ್ಲಿ ಮಾತ್ರ ಈಗಾಗಲೇ ಎಲ್ಲೋ ಕೇಳಿದಂಥ ಟ್ಯೂನ್‌ಗಳದ್ದೇ ಕಾರುಬಾರು.
ಅಜ್ಜ ನೆಟ್ಟ ಆಲದ ಮರದಲ್ಲಿ ಒಂದು ಐಟಮ್ ಹಾಡೂ ಇದೆ. ಒಟ್ಟಿನಲ್ಲಿ ಹೂವಿನಿಂದ ಹೂವಿಗೆ ಹಾರುವ ಚಿಟ್ಟೆ ಎಷ್ಟು ಮಂದಿಯ ಮನದಲ್ಲಿ ನಿಂತುಕೊಳ್ಳಲಿದೆ ಎನ್ನುವುದನ್ನು ಮುಂದಿನ ದಿನಗಳೇ ಹೇಳಲಿವೆ.

ಚಿತ್ರ: ಚಿಟ್ಟೆ
ತಾರಾಗಣ: ಹರ್ಷಿಕಾ ಪೂಣಚ್ಚ, ಯಶಸ್ ಸೂರ್ಯ
ನಿರ್ದೇಶನ: ಎಂ ಎಲ್ ಪ್ರಸನ್ನ
ನಿರ್ಮಾಣ: ವಾಗ್ದೇವಿ ಕ್ರಿಯೇಶನ್ಸ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News