ಭಾರತದಲ್ಲಿ 19,500ಕ್ಕೂ ಹೆಚ್ಚು ಮಾತೃಭಾಷೆಗಳು: ಗಣತಿ ವರದಿ
ಹೊಸದಿಲ್ಲಿ,ಜು.1: ಭಾರತದಲ್ಲಿ 19,500ಕ್ಕೂ ಅಧಿಕ ಭಾಷೆಗಳು ಮತ್ತು ಉಪಭಾಷೆಗಳನ್ನು ಮಾತೃಭಾಷೆಯನ್ನಾಗಿ ಬಳಸಲಾಗುತ್ತಿದೆ ಎಂದು ಈ ವಾರ ಬಿಡುಗಡೆಗೊಂಡಿರುವ 2011ರ ಜನಗಣತಿಯ ಇತ್ತೀಚಿನ ವಿಶ್ಲೇಷಣೆಯು ತಿಳಿಸಿದೆ.
121 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ 10,000 ಅಥವಾ ಅದಕ್ಕಿಂತ ಹೆಚ್ಚಿನ ಜನರು ಮಾತನಾಡುತ್ತಿರುವ 121 ಭಾಷೆಗಳಿವೆ. ದೇಶದ ಶೇ.96.71ರಷ್ಟು ಜನರು 22 ಅನುಸೂಚಿತ ಭಾಷೆಗಳ ಪೈಕಿ ಒಂದನ್ನು ತಮ್ಮ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. 2001ರ ಜನಗಣತಿ ಸಂದರ್ಭದಲ್ಲಿಯೂ ಇಷ್ಟೇ ಅನುಸೂಚಿತ ಭಾಷೆಗಳನ್ನು ಪರಿಗಣಿಸಲಾಗಿತ್ತು. ಶೇ.3.29 ಜನರು ಇತರ ಭಾಷೆಗಳನ್ನು ಮಾತೃಭಾಷೆಯನ್ನಾಗಿ ಬಳಸುತ್ತಿದ್ದಾರೆ.
10,000 ಮತ್ತು ಅದಕ್ಕಿಂತ ಹೆಚ್ಚಿನ ಜನರು ಮಾತನಾಡುವ 121 ಭಾಷೆಗಳನ್ನು ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾಗಿರುವ 22 ಭಾಷೆಗಳು ಮತ್ತು ಅದರಲ್ಲಿ ಸೇರ್ಪಡೆಗೊಂಡಿರದ 99 ಭಾಷೆಗಳನ್ನಾಗಿ ವರ್ಗೀಕರಿಸಲಾಗಿದೆ. ಇದರೊಂದಿಗೆ ಒಟ್ಟು ಇತರ ಭಾಷೆಗಳ ವರ್ಗವನ್ನು ಸೃಷ್ಟಿಸಲಾಗಿದ್ದು,ಅಖಿಲ ಭಾರತ ಮಟ್ಟದಲ್ಲಿ 10,000ಕ್ಕೂ ಕಡಿಮೆ ಜನರು ಮಾತನಾಡುವ ಭಾಷೆಗಳನ್ನು ಇದರಲ್ಲಿ ಸೇರಿಸಲಾಗಿದೆ.
2001ರಲ್ಲಿ 100ರಷ್ಟಿದ್ದ,ಎಂಟನೇ ಪರಿಚ್ಛೇದದಿಂದ ಹೊರಗಿರುವ ಭಾಷೆಗಳ ಸಂಖ್ಯೆ 2011ರಲ್ಲಿ 99ಕ್ಕೆ ತಗ್ಗಿದೆ. ಸಿಮ್ಟೆ ಮತ್ತು ಪರ್ಷಿಯನ್ ಭಾಷೆಗಳನ್ನು ಮಾತನಾಡುವವರ ಸಂಖ್ಯೆ 2011ರ ಜನಗಣತಿಯಲ್ಲಿ ಗಣನೀಯವಾಗಿ ತಗ್ಗಿದ್ದರಿಂದ ಅವುಗಳನ್ನು ಹೊರತುಪಡಿಸಿ,10,000ಕ್ಕೂ ಅಧಿಕ ಜನರು ಮಾತನಾಡುವ ಮಾವೊ ಭಾಷೆಯನ್ನು ಸೇರ್ಪಡೆಗೊಳಿಸಿರುವುದು ಇದಕ್ಕೆ ಕಾರಣವಾಗಿದೆ.
ಅಖಿಲ ಭಾರತ ಮಟ್ಟದಲ್ಲಿ 10,000 ಅಥವಾ ಅದಕ್ಕೂ ಹೆಚ್ಚು ಜನರು ಮಾತ್ರಭಾಷೆಗಳನ್ನಾಗಿ ಬಳಸುತ್ತಿರುವ ಒಟ್ಟು 270 ಭಾಷೆಗಳನ್ನು ಗುರುತಿಸಲಾಗಿದೆ. ಸಂವಿಧಾನದ ಎಂಟನೇ ಪರಿಚ್ಛೇದವು ಅಸ್ಸಾಮೀಸ್,ಬಂಗಾಲಿ,ಗುಜರಾತಿ, ಹಿಂದಿ,ಕನ್ನಡ,ಕಾಶ್ಮೀರಿ,ಕೊಂಕಣಿ,ಮಲಯಾಳಂ,ಮಣಿಪುರಿ,ಮರಾಠಿ,ನೇಪಾಳಿ, ಒರಿಯಾ,ಪಂಜಾಬಿ,ಸಂಸ್ಕೃತ,ಸಿಂಧಿ,ತಮಿಳು,ತೆಲುಗು,ಉರ್ದು,ಬೋಡೊ, ಸಂಥಾಲಿ,ಮೈಥಿಲಿ ಮತ್ತು ಡೋಗ್ರಿ ಭಾಷೆಗಳನ್ನು ಒಳಗೊಂಡಿದೆ.