ಹುದೈದಾದಲ್ಲಿ ಯುಎಇಯಿಂದ ಯುದ್ಧವಿರಾಮ ಘೋಷಣೆ
ಅಬುಧಾಬಿ, ಜು. ೧: ಯಮನ್‌ನ ಬಂದರು ನಗರ ಹುದೈದಾದಲ್ಲಿ ಹೌದಿ ಬಂಡುಕೋರರ ವಿರುದ್ಧ ನಡೆಯುತ್ತಿರುವ ಕಾಳಗಕ್ಕೆ ಯುಎಇ ರವಿವಾರ ವಿರಾಮ ನೀಡಿದೆ. ವಿಶ್ವಸಂಸ್ಥೆ ನಡೆಸುತ್ತಿರುವ ಶಾಂತಿ ಪ್ರಕ್ರಿಯೆಗಳಿಗೆ ಒಂದು ಅವಕಾಶ ನೀಡುವುದಕ್ಕಾಗಿ ಅದು ಈ ಕ್ರಮ ತೆಗೆದುಕೊಂಡಿದೆ.
‘‘ಹುದೈದಾ ನಗರ ಮತ್ತು ಬಂದರಿನಿಂದ ಹೌದಿ ಬಂಡುಕೋರರು ನಿಶ್ಶರ್ತವಾಗಿ ಹಿಂದೆ ಹೋಗುವಂತೆ ಮಾಡುವ ವಿಶ್ವಸಂಸ್ಥೆ ವಿಶೇಷ ರಾಯಭಾರಿಯ ನಿರಂತರ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ’’ ಎಂದು ಯುಎಇಯ ವಿದೇಶ ವ್ಯವಹಾರಗಳ ಸಹಾಯಕ ಸಚಿವ ಅನ್ವರ್ ಗಾರ್ಗಶ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
‘‘ಈ ಆಯ್ಕೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸುವ ನಿಟ್ಟಿನಲ್ಲಿ ಸಾಕಷ್ಟು ಸಮಯ ನೀಡುವುದಕ್ಕಾಗಿ ನಾವು ನಮ್ಮ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಿದ್ದೇವೆ. ನಾವು ಯಶಸ್ವಿಯಾಗುತ್ತೇವೆ ಎಂದು ನಾವು ಭಾವಿಸಿದ್ದೇವೆ’’ ಎಂದಿದ್ದಾರೆ.
ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯು ಯಮನ್ ಅಧ್ಯಕ್ಷ ಆಬಿದ್‌ರಬ್ಬೂ ಮನ್ಸೂರ್ ಹಾದಿಯನ್ನು ಕಳೆದ ವಾರ ಭೇಟಿಯಾದ ಬಳಿಕ ಯುಎಇಯ ಈ ಘೋಷಣೆ ಹೊರಬಿದ್ದಿದೆ.
ಯಮನ್ ಅಧ್ಯಕ್ಷರ ಸೇನೆಯು ಹುದೈದಾ ಬಂದರು ನಗರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಾಗಿ ಹೌದಿ ಬಂಡುಕೋರರ ವಿರುದ್ಧ ಭೀಕರ ಕಾಳಗದಲ್ಲಿ ತೊಡಗಿದೆ. ಯಮನ್ ಸೈನಿಕರಿಗೆ ಸೌದಿ ಅರೇಬಿಯ ಮತ್ತು ಯುಎಇ ಮುಂತಾದ ಮಿತ್ರಪಡೆಗಳ ಸೇನೆ ವಾಯು ಬೆಂಬಲ ನೀಡುತ್ತಿದೆ.
ಹೌದಿ ಪರವಾಗಿ ಯುದ್ಧ ಮಾಡಲು ನಿರಾಕರಿಸಿದರೆ ಚಿತ್ರಹಿಂಸೆ: ವರದಿ
ಲಂಡನ್, ಜು. ೧: ಹುದೈದಾ ನಗರದ ಕೇಂದ್ರೀಯ ಕಾರಾಗೃಹದಲ್ಲಿರುವ ಕೈದಿಗಳು ಹೌದಿ ಬಂಡುಕೋರರ ಪರವಾಗಿ ಯುದ್ಧ ಮಾಡಲು ನಿರಾಕರಿಸಿದರೆ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.
ತಮ್ಮ ಪರವಾಗಿ ಯುದ್ಧ ಮಾಡಲು ಒಪ್ಪದ ಕೈದಿಗಳ ವಾರ್ಡ್‌ಗಳಿಗೆ ಬೆಂಕಿ ಹಚ್ಚಲಾಗುತ್ತದೆ ಹಾಗೂ ಅವರ ಮೇಲೆ ಗುಂಡು ಹಾರಿಸಲಾಗುತ್ತದೆ ಎಂದು ‘ಅಶರ್ಕ್ ಅಲ್-ಔಸತ್’ ಪತ್ರಿಕೆ ವರದಿ ಮಾಡಿದೆ.
ಹೌದಿ ಚಿತ್ರಹಿಂಸೆಯಿಂದಾಗಿ ಕನಿಷ್ಠ ಮೂವರು ಕೈದಿಗಳು ಮೃತಪಟ್ಟಿದ್ದಾರೆ ಹಾಗೂ ೨೦ ಮಂದಿ ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.