ಕಪ್ಪುಹಣ ವಾಪಸ್ ತರುವಲ್ಲಿ ಮೋದಿ ವಿಫಲ: ಮಾಯಾವತಿ ವಾಗ್ದಾಳಿ

Update: 2018-07-01 16:14 GMT

ಲಕ್ನೋ,ಜು.1: ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯ ಠೇವಣಿಗಳಲ್ಲಿ ಹೆಚ್ಚಳವಾಗಿರುವ ದತ್ತಾಂಶಗಳನ್ನು ಇಂದಿಲ್ಲಿ ಉಲ್ಲೇಖಿಸಿರುವ ಬಿಎಸ್‌ಪಿ ನಾಯಕಿ ಮಾಯಾವತಿ, ಕಪ್ಪು ಹಣವನ್ನು ವಾಪಸ್ ತರುವಲ್ಲಿ ತನ್ನ ವೈಫಲ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಳ್ಳುವರೇ ಎಂದವರು ಪ್ರಶ್ನಿಸಿದ್ದಾರೆ.

ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ವೌಲ್ಯವು ಕುಸಿದಿರುವ ಬಗ್ಗೆಯೂ ಮಾಯಾವತಿ, ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ ಅವರು, ‘‘ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಹೆಚ್ಚುತ್ತಿರುವುದರ ಶ್ರೇಯಸ್ಸನ್ನು ಮೋದಿ ಸರಕಾರವು ಪಡೆದುಕೊಳ್ಳಲು ಬಯಸುವುದಿಲ್ಲವೇ?. ರಾಷ್ಟ್ರೀಯ ಹಿತಾಸಕ್ತಿಯಿಂದ ಇಲ್ಲಿ ಉದ್ಭವಿಸುವ ಪ್ರಶ್ನೆಯೇನೆಂದರೆ, ಭಾರತದಲ್ಲಿ ಸಂಪಾದಿಸಲಾದ ಹಣವನ್ನು ವಿದೇಶದ ಬ್ಯಾಂಕ್‌ನಲ್ಲಿ ಯಾಕೆ ಠೇವಣಿಯಿರಿಸಲಾಗುತ್ತಿದೆಯೆಂಬುದಾಗಿದೆ’’ ಎಂದಿದ್ದಾರೆ.

‘‘ದಲಿತರನ್ನು ಹಾಗೂ ಹಿಂದುಳಿದ ವರ್ಗಗಳನ್ನು ಸದಾ ವಿರೋಧಿಸುತ್ತಿರುವ ಖಾಸಗಿ ವಲಯಕ್ಕೆ ಬಿಜೆಪಿ ಸರಕಾರ ಉತ್ತೇಜನ ನೀಡುತ್ತಿದೆಯೇ?. ಕಪ್ಪು ಹಣವನ್ನು ಮರಳಿ ತರುವಲ್ಲಿ ತನ್ನ ವೈಫಲ್ಯವನ್ನು ಮೋದಿ ಸರಕಾರವು ಸ್ವೀಕರಿಸಲಿದೆಯೇ?.ಬಿಜೆಪಿಯ ದೇಶಭಕ್ತಿಗೆ ಇದೊಂದು ಉದಾಹರಣೆಯೇ?’’ ಎಂದು ಮಾಯಾವತಿ ಚಾಟಿ ಬೀಸಿದ್ದಾರೆ.

   ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಕೂಡಿಹಾಕಿರುವ ಠೇವಣಿಯ ಮೊತ್ತವು 2017ರಲ್ಲಿ 1.01 ಶತಕೋಟಿ ಸ್ವಿಸ್ ಫ್ರಾಂಕ್(ಸುಮಾರು 7 ಸಾವಿರ ಕೋಟಿ ರೂ.)ಗಳಿಗೆ ತಲುಪಿದ್ದು, ಶೇ.50ರಷ್ಟು ಏರಿಕೆಯಾಗಿದೆ. ಸಾಗರೋತ್ತರದೇಶಗಳ ಬ್ಯಾಂಕ್‌ಗಳಲ್ಲಿ ಭಾರತೀಯರು ಸಂಗ್ರಹಿಸಿಟ್ಟಿರುವ ಕಪ್ಪುಹಣವನ್ನು ವಶಪಡಿಸಿಕೊಳ್ಳಲು ಭಾರತವು ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ ಬಳಿಕ ಇದಕ್ಕೂ ಹಿಂದಿನ ಮೂರು ವರ್ಷಗಳಲ್ಲಿ ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿತ್ತು.

  ಸ್ವಿಟ್ಜರ್‌ಲ್ಯಾಂಡ್‌ನ ಕೇಂದ್ರೀಯ ಬ್ಯಾಂಕಿಂಗ್ ಪ್ರಾಧಿಕಾರವು ಜೂನ್ 28ರಂದು ತನ್ನ ವಾರ್ಷಿಕ ದತ್ತಾಂಶಗಳನ್ನು ಬಿಡುಗಡೆಗೊಳಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ವೌಲ್ಯವು ಕುಸಿದಿರುವ ಬಗ್ಗೆ ಪ್ರಸ್ತಾಪಿಸಿರುವ ಮಾಯವತಿ, ‘‘ ಬಿಜೆಪಿ ಸರಕಾರವು ಕೇವಲ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದಋ್ದ, ಬಡವರ ವಿರೋಧಿ’’ ಎಂದು ಕಟಕಿಯಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News