‘ಆಪರೇಷನ್ ಬ್ಲೂಸ್ಟಾರ್’: ಬಂಧಿತರಾಗಿದ್ದ 40 ಮಂದಿಗೆ ಪರಿಹಾರ ನೀಡಲು ಕೇಂದ್ರದ ಸಮ್ಮತಿ
ಹೊಸದಿಲ್ಲಿ, ಜು.2: 1984ರಲ್ಲಿ ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣಮಂದಿರಲ್ಲಿ ನಡೆದಿದ್ದ ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆ ಸಂದರ್ಭ ಬಂಧಿತರಾಗಿದ್ದ 40 ಮಂದಿಗೆ ಪರಿಹಾರ ನೀಡಲು ಕೇಂದ್ರ ಸರಕಾರ ಕಡೆಗೂ ಸಮ್ಮತಿಸಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಅಮೃತಸರದ ನ್ಯಾಯಾಲಯವು, ಕಾರ್ಯಾಚರಣೆ ಸಂದರ್ಭ ಬಂಧಿತರಾಗಿ, ತಾತ್ಕಾಲಿಕ ಸೆರೆಮನೆಯಲ್ಲಿ ಇರಿಸಲಾಗಿದ್ದ 40 ಮಂದಿಗೆ ತಲಾ 4 ಲಕ್ಷ ರೂ.ಪರಿಹಾರಧನ ನೀಡುವಂತೆ ಕಳೆದ ವರ್ಷ ಪಂಜಾಬ್ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಕಾರ್ಯಾಚರಣೆ ಸಂದರ್ಭ ಈ 40 ಮಂದಿ ಸೇನೆಯ ಮೇಲೆ ಗುಂಡು ಹಾರಿಸಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು. ಪಂಜಾಬ್ ಸರಕಾರ ತನ್ನ ಪಾಲಿನ ಪರಿಹಾರ ಧನವನ್ನು ಸಂತ್ರಸ್ತರಿಗೆ ಪಾವತಿಸಿತ್ತು.
ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಈ ವರ್ಷದ ಜೂನ್ 2ರಂದು ಸಿಬಿಐ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕಾರ್ಯಾಚರಣೆಯ ಸಂದರ್ಭ ಯಾವ ರೀತಿಯ ಒತ್ತಡದ ಸನ್ನಿವೇಶವಿತ್ತು ಎಂಬುದನ್ನು ಜಿಲ್ಲಾ ನ್ಯಾಯಾಧೀಶರು ಪರಿಗಣಿಸಿಲ್ಲ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆಯೂ ಲಿಖಿತವಾಗಿ ಆರೋಪಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಸಿಬಿಐ ತಿಳಿಸಿತ್ತು. ಪಂಜಾಬ್ ಸರಕಾರ ಮತ್ತು ವಿಪಕ್ಷ ಶಿರೋಮಣಿ ಅಕಾಲಿದಳದ ನಿರಂತರ ಒತ್ತಡದ ಬಳಿಕ ಕೇಂದ್ರ ಸರಕಾರ ತನ್ನ ಪಾಲಿನ ಮೊತ್ತವಾದ 2.16 ಕೋಟಿ ರೂ.ಯನ್ನು ಬಿಡುಗಡೆಗೊಳಿಸಲು ಸಮ್ಮತಿಸಿದೆ. ಸರಕಾರ 2.16 ಕೋಟಿ ರೂ. ಪರಿಹಾರ ಧನವನ್ನು ಬಿಡುಗಡೆಗೊಳಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಒಂದು ವೇಳೆ ಕೇಂದ್ರ ಸರಕಾರ ತನ್ನ ಪಾಲಿನ ಮೊತ್ತ ಪಾವತಿಸದಿದ್ದರೆ ತಾವೇ ಸಂಪೂರ್ಣ ಮೊತ್ತ ಪಾವತಿಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾ ಅಮರೀಂದರ್ ಸಿಂಗ್ ಹೇಳಿದ್ದರು.