×
Ad

ಒಬಿಸಿಯಲ್ಲಿ ಗುಜ್ಜರ್‌ಗಳಿಗೆ ಶೇ.21 ಕೋಟ: ರಾಜಸ್ಥಾನ ಸರಕಾರ

Update: 2018-07-02 20:15 IST

ಹೊಸದಿಲ್ಲಿ, ಜು.2: ಅತಿ ಹಿಂದುಳಿದ ವರ್ಗ (ಎಂಬಿಸಿ) ದಲ್ಲಿ ಬರುವ ಗುಜ್ಜರ್ ಸೇರಿದಂತೆ ಐದು ಸಮುದಾಯಗಳಿಗೆ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರಕಾರಿ ಉದ್ಯೋಗಗಳಿಗೆ ಪ್ರವೇಶ ಪಡೆಯಲು ಇತರ ಹಿಂದುಳಿದ ವರ್ಗ (ಒಬಿಸಿ) ಯಲ್ಲೂ ಶೇ. 21 ಕೋಟ ಒದಗಿಸಿ ರಾಜಸ್ಥಾನ ಸರಕಾರ ಸೋಮವಾರ ಆದೇಶ ಜಾರಿ ಮಾಡಿದೆ.

ಗುಜ್ಜರ್ ಸಮುದಾಯದ ನಾಯಕರು, ಜುಲೈ 7ರಂದು ಪ್ರಧಾನಿ ನರೇಂದ್ರ ಮೋದಿ ಜೈಪುರಕ್ಕೆ ಭೇಟಿ ನೀಡುವ ಸಮಯದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಸದೀಯ ವ್ಯವಹಾರಗಳ ಸಚಿವ ರಾಜೇಂದ್ರ ರಾಥೋಡ್ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಮರುದಿನವೇ ರಾಜ್ಯ ಸರಕಾರ ಈ ಆದೇಶವನ್ನು ಜಾರಿ ಮಾಡಿದೆ. ಬಂಜಾರ, ಗದಿಯ, ಗುಜ್ಜರ್, ರೈಕ ಮತ್ತು ಗದರಿಯ ಎಂಬ ಐದು ಜಾತಿಗಳನ್ನು ಅತಿ ಹಿಂದುಳಿದ ವರ್ಗದಲ್ಲಿ ಗುರುತಿಸಲಾಗಿದೆ.

ಜುಲೈ ಒಂದರ ಆದೇಶದಲ್ಲಿ, ಮೇಲೆ ತಿಳಿಸಿದ ಐದು ಜಾತಿಗಳ ಅಭ್ಯರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಬಯಸುವ ಅಥವಾ ಸರಕಾರಿ ಉದ್ಯೋಗಕ್ಕೆ ಆಯ್ಕೆ ಬಯಸುವ ಸಂದರ್ಭದಲ್ಲಿ ತಮ್ಮ ನಿರ್ವಹಣೆಯ ಆಧಾರದಲ್ಲಿ ಸಾಮಾನ್ಯ ಕೋಟದಲ್ಲಿ ಆಯ್ಕೆಯಾಗದಿದ್ದರೆ ಮೊದಲಿಗೆ ಒಬಿಸಿ (ಶೇ.21) ಹಾಗೂ ನಂತರ ಎಂಬಿಸಿ (ಶೇ.1) ಅಡಿಯಲ್ಲಿ ಆಯ್ಕೆ ಮಾಡಲಾಗುವುದು. ಕಳೆದ ವರ್ಷ ಡಿಸೆಂಬರ್ 21ರಂದು ವಸುಂದರಾ ರಾಜೆ ಸರಕಾರ ಗುಜ್ಜರ್ ಸಮುದಾಯದ ಬೇಡಿಕೆಗೆ ಮಣಿಸು ಅತಿ ಹಿಂದುಳಿದ ವರ್ಗ ಎಂಬ ಮೀಸಲಾತಿ ಕೋಟವನ್ನು ಆರಂಭಿಸಿ ಗುಜ್ಜರ್ ಹಾಗೂ ಇತರ ನಾಲ್ಕು ಸಮುದಾಯಗಳಿಗೆ ಶೇ. 1 ಮೀಸಲಾತಿ ನೀಡಿದ್ದರು. ಆದರೆ ಈ ಆದೇಶದ ಹೊರತಾಗಿಯೂ ಅದರ ಲಾಭ ಸರಿಯಾಗಿ ಸಿಗುತ್ತಿಲ್ಲ ಎಂದು ಈ ಸಮುದಾಯಗಳು ಆರೋಪಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News