ಅತ್ಯಾಚಾರ ಪ್ರಕರಣ: ಮಿಥುನ್ ಚಕ್ರವರ್ತಿ ಪತ್ನಿ, ಪುತ್ರನ ವಿರುದ್ಧ ಎಫ್ ಐಆರ್ ದಾಖಲಿಸಲು ಕೋರ್ಟ್ ಆದೇಶ

Update: 2018-07-02 16:42 GMT

ಹೊಸದಿಲ್ಲಿ, ಜು.2: ಸಿನೆಮ ನಟಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಆಕೆ ಗರ್ಭಿಣಿಯಾದಾಗ ಒಪ್ಪಿಗೆಯಿಲ್ಲದೆ ಬಲಾತ್ಕಾರವಾಗಿ ಗರ್ಭಪಾತ ನಡೆಸಿದ ಆರೋಪದಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿಯ ಪುತ್ರ, ಹಿಂದಿ ನಟ ಮಹಾಕ್ಷಯ್ ಚಕ್ರವರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಆ ನಟಿಗೆ ಬೆದರಿಕೆ ಒಡ್ಡಿರುವ ಆರೋಪದಲ್ಲಿ ಮಿಥುನ್ ಪತ್ನಿ ಯೋಗಿತಾ ಬಾಲಿ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಏಕ್ತಾ ಗೌಬಾ ಆದೇಶದಲ್ಲಿ ತಿಳಿಸಿದ್ದಾರೆ.

 ಬಾಲಿವುಡ್‌ನ ಖ್ಯಾತ ನಟರಾಗಿದ್ದ ಹಾಗೂ ರಾಜ್ಯಸಭೆಯ ಮಾಜಿ ಸಂಸದರಾಗಿರುವ ಮಿಥುನ್ ಚಕ್ರವರ್ತಿಯ ಪುತ್ರ ಹಾಗೂ ಪತ್ನಿಯರು ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದಾರೆ. ಅಲ್ಲದೆ ಪ್ರತಿವಾದಿಗಳು ಪ್ರಭಾವ ಹಾಗೂ ಉನ್ನತ ಸ್ಥಾನಮಾನ ಹೊಂದಿರುವ ಕಾರಣ ಮುಂಬೈಯಲ್ಲಿ ತನಗೆ ಜೀವಬೆದರಿಕೆ ಇದೆ ಎಂದು ಸಂತ್ರಸ್ತ ಮಹಿಳೆ ದಿಲ್ಲಿಯಲ್ಲಿರುವ ಕೆಲವು ಸ್ನೇಹಿತರು ಹಾಗೂ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಗೂಢತೆಯನ್ನು ಬೇಧಿಸಬೇಕು ಹಾಗೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಪ್ರಸ್ತುತಪಡಿಬೇಕು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

2015ರ ಮೇ ತಿಂಗಳಿನಲ್ಲಿ ಪಾನೀಯದಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ತನ್ನ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದು ಬಳಿಕ ನಾಲ್ಕು ವರ್ಷ ನಿರಂತರ ಅತ್ಯಾಚಾರ ನಡೆಸಿದ್ದಾನೆ. ತಾನು ಗರ್ಭಿಣಿಯಾಗಿರುವುದಾಗಿ ತಿಳಿಸಿದಾಗ ಆರೋಪಿ ಕೆಲವು ಔಷಧಿ ನೀಡಿದ್ದು ಆಗ ಗರ್ಭಪಾತವಾಗಿದೆ ಎಂದು ಮಹಿಳೆ ದೂರಿದ್ದಾಳೆ. ಮದುವೆಯಾಗಲು ಒತ್ತಾಯಿಸಿದಾಗ ತನ್ನ ಜಾತಕವನ್ನು ಪಡೆದ ಆತ, ಇಬ್ಬರ ಜಾತಕದಲ್ಲೂ ವಿವಾಹ ಯೋಗವಿಲ್ಲ. ಕೇವಲ ಸ್ನೇಹಿತರಾಗಿ ಇರುವ ಯೋಗವಿದೆ ಎಂದು ತಿಳಿಸಿದ್ದ. ಅಲ್ಲದೆ ಆರೋಪಿಯ ತಾಯಿ ತನಗೆ ಎಚ್ಚರಿಕೆ ನೀಡಿದ್ದು, ತನ್ನ ಸೊಸೆಯಾಗುವ ಕನಸು ಕಟ್ಟಿಕೊಂಡರೆ ಪರಿಸ್ಥಿತಿ ನೆಟ್ಟಗಿರದು ಎಂದು ಜೀವ ಬೆದರಿಕೆ ಒಡ್ಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News