ಬುಲೆಟ್ 'ರೈಲು' ಹಳಿ ಮೇಲೆ ಓಡದು: ರಾಹುಲ್ ಲೇವಡಿ
ಫರ್ಸತ್‌ಗಂಜ್ (ಉತ್ತರ ಪ್ರದೇಶ), ಜು. 5: "ಬುಲೆಟ್ ರೈಲು ಕೇವಲ ಮ್ಯಾಜಿಕ್. ಈ ಯೋಜನೆ ವಾಸ್ತವವಾಗಿ ಎಂದೂ ಕಾರ್ಯಗತಗೊಳ್ಳದು; ಒಂದು ವೇಳೆ ಯೋಜನೆ ಪೂರ್ಣಗೊಳ್ಳುವುದಾದರೆ ಅದು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸ್ವಕ್ಷೇತ್ರ ಅಮೇಥಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದ ಅವರು ಫರ್ಸತ್‌ಗಂಜ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ಸರ್ಕಾರ ಸಣ್ಣ ಹಾಗೂ ಮಧ್ಯಮ ಪ್ರಮಾಣದ ವ್ಯಾಪಾರಿಗಳಿಂದ ಹಣ ಕಸಿದುಕೊಂಡು ಮೋದಿಯವರ ಮಾರಾಟ ವ್ಯವಸ್ಥಾಪಕರು ಎನಿಸಿದ ದೊಡ್ಡ ಉದ್ಯಮಿಗಳಿಗೆ ನೀಡುತ್ತಿದೆ ಎಂದು ಆರೋಪ ಮಾಡಿದರು.
ಭಾರತ ಪ್ರಮುಖವಾಗಿ ನಿರುದ್ಯೋಗ, ರೈತರ ಸಮಸ್ಯೆ ಮತ್ತು ಹಣದುಬ್ಬರ ಹೀಗೆ ಮೂರು ಸವಾಲುಗಳನ್ನು ಎದುರಿಸುತ್ತಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಉದ್ಯೋಗ ಸೃಷ್ಟಿಸುತ್ತವೆ. ಆದರೆ ಮೋದಿಯವರು ನೋಟು ರದ್ದತಿ ಮತ್ತು ಜಿಎಸ್‌ಟಿ ಮೂಲಕ ಈ ರಂಗದ ಬೆನ್ನೆಲುಬು ಮುರಿದಿದ್ದಾರೆ. ಕಳೆದ ವರ್ಷ ರೈತರ ಸಾಲ ಮನ್ನಾ ಮಾಡುವ ಬದಲು ಉದ್ಯಮಿಗಳ 2 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಾರ್ಯಕರ್ತರು ಜನರನ್ನು ಭೇಟಿ ಮಾಡಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮಗ ಜೈ ಶಾ 50 ಸಾವಿರ ರೂಪಾಯಿಯನ್ನು ಒಂದೇ ವರ್ಷದಲ್ಲಿ ಹೇಗೆ 80 ಕೋಟಿಯಾಗಿ ಪರಿವರ್ತಿಸಿಕೊಂಡರು ಎಂದು ಪ್ರಶ್ನಿಸಬೇಕು ಎಂದು ಹೇಳಿದರು.