ಎಂಟರ ತಂಗಿಯ ಮೇಲೆ ಅಪ್ರಾಪ್ತ ಅಣ್ಣನಿಂದ ಅತ್ಯಾಚಾರ !

Update: 2018-07-05 04:13 GMT

ಹೊಸದಿಲ್ಲಿ, ಜು. 5: ಎಂಟು ವರ್ಷದ ಬಾಲಕಿಯ ಮೇಲೆ ಆಕೆಯ ಅಪ್ರಾಪ್ತ ವಯಸ್ಸಿನ ಅಣ್ಣನೇ ಅತ್ಯಾಚಾರ ಎಸಗಿರುವ ವಿಲಕ್ಷಣ ಘಟನೆ ದೆಹಲಿಯ ಆದರ್ಶ ನಗರದಲ್ಲಿ ಬೆಳಕಿಗೆ ಬಂದಿದೆ.

ಗುಪ್ತಾಂಗದಿಂದ ತೀವ್ರ ರಕ್ತಸ್ರಾವವಾಗುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಕರೆತರಲಾಗಿದೆ ಎಂದು ಸ್ಥಳೀಯ ಆಸ್ಪತ್ರೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಈ ಪ್ರಕರಣ ಬಹಿರಂಗವಾಗಿದೆ.

ಪೋಷಕರು ಹೊರಗೆ ಹೋಗಿದ್ದಾಗ ಅಣ್ಣ ಬಲವಂತವಾಗಿ ಈ ಕೃತ್ಯ ಎಸಗಿದ್ದಾಗಿ ಬಾಲಕಿ ಕೌನ್ಸಿಲರ್‌ಗಳ ಬಳಿ ಹೇಳಿಕೊಂಡಿದ್ದಾಳೆ. ಸಂಜೆ ಮನೆಗೆ ಬಂದ ಪೋಷಕರು, ಬಾಲಕಿಗೆ ತೀವ್ರ ರಕ್ತಸ್ರಾವವಾಗುತ್ತಿದ್ದುದನ್ನು ನೋಡಿ ಆಸ್ಪತ್ರೆಗೆ ಒಯ್ದರು. ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಳ್ ಸ್ಥಳಕ್ಕೆ ಭೇಟಿ ನೀಡಿದ್ದರು.

"ತೀವ್ರ ಗಾಯಗಳಾಗಿರುವ ಆಕೆಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಸದ್ಯಕ್ಕೆ ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಾಲಕಿಯ ಪೋಷಕರು ಕೂಲಿಕಾರ್ಮಿಕರು. ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಆಯೋಗವೇ ಭರಿಸಲಿದ್ದು, ಸೂಕ್ತ ಪರಿಹಾರ ಕೋರಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News