ಬ್ರೆಝಿಲ್‌ಗೆ ಬೆಲ್ಜಿಯಂ ಸವಾಲು

Update: 2018-07-05 18:35 GMT

ಕಝಾನ್, ಜು.5: ಕಝಾನ್ ಅರೆನಾದಲ್ಲಿ ಶುಕ್ರವಾರ ನಡೆಯಲಿರುವ ವಿಶ್ವಕಪ್‌ನ ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಝಿಲ್‌ಗೆ ಬೆಲ್ಜಿಯಂ ಸವಾಲು ಎದುರಾಗಲಿದೆ.

  ಬ್ರೆಝಿಲ್ ತಂಡ 6ನೇ ಬಾರಿ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದು, ಆದರೆ ಬ್ರೆಝಿಲ್‌ಗೆ ಸೋಲುಣಿಸಿ ಮುಂದಿನ ಹಂತಕ್ಕೇರುವುದು ಬೆಲ್ಜಿಯಂನ ಗುರಿಯಾಗಿದೆ ಎಂದು ತಂಡದ ಕೋಚ್ ರಾಬರ್ಟ್ ಮಾರ್ಟಿನೆಝ್ ತಿಳಿಸಿದ್ದಾರೆ.

 ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಬ್ರೆಝಿಲ್‌ನ್ನು ಕ್ವಾರ್ಟರ್ ಫೈನಲ್‌ನಲ್ಲಿ ಮಣಿಸುವ ಕ್ಷಣಕ್ಕಾಗಿ ತಂಡದ ಆಟಗಾರರು ಎದುರು ನೋಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಲ್ಜಿಯಂ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡವನ್ನು 3-2 ಅಂತರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್‌ಗೇರಿದೆ.

 ಬೆಲ್ಜಿಯಂ ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ನಾಯಕ ಚೆಲ್ಸಿ ತಂಡದ ಏಡೆನ್ ಹಝಾರ್ಡ್, ಮ್ಯಾಂಚೆಸ್ಟರ್ ಸಿಟಿ ತಂಡದ ಕೆವಿನ್ ಡೆ ಬ್ರೂನ್, ಮ್ಯಾಂಚೆಸ್ಟರ್ ಸಿಟಿ ತಂಡದ ಸ್ಟ್ರೈಕರ್ ರೊಮೆಲು ಲುಕಾಕು ಬ್ರೆಝಿಲ್‌ಗೆ ಸವಾಲಾಗಲಿದ್ದಾರೆ.

ಗ್ರೂಪ್ ಹಂತದ ‘ಜಿ’ ಗುಂಪಿನಲ್ಲಿ ಹ್ಯಾಟ್ರಿಕ್ ಗೆಲುವು, ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ವಿರುದ್ಧ ಜಯ ಗಳಿಸಿ ಎಂಟರ ಘಟ್ಟ ತಲುಪಿರುವ ಯೋಜನೆ ಬ್ರೆಝಿಲ್ ವಿರುದ್ಧ ಫಲ ನೀಡಿದರೆ ಫೈನಲ್‌ಗೇರುವುದು ಖಚಿತ ಎಂದು ಮಾರ್ಟಿನೆಝ್ ಅಭಿಪ್ರಾಯಪಟ್ಟರು.

ಫಿಫಾ ರ್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಬೆಲ್ಜಿಯಂ 2014ರಲ್ಲಿ ಬ್ರೆಝಿಲ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು. ಆದರೆ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನ ಕ್ವಾರ್ಟರ್ ಫೈನಲ್‌ನಲ್ಲಿ 1-0 ಅಂತರದಿಂದ ಮಣಿಸಿ ಕೂಟದಿಂದ ಹೊರಗಟ್ಟಿತ್ತು. 1986ರಲ್ಲಿ ಎಂಟರ ಘಟ್ಟದ ಹಣಾಹಣಿಯಲ್ಲಿ ಡಿಯಾಗೊ ಮರಡೋನಾ ಅವಳಿ ಗೋಲು ದಾಖಲಿಸಿ ಬೆಲ್ಜಿಯಂ ಆಘಾತ ನೀಡಿದ್ದರು.

  ಕಳೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 2-0 ಹಿನ್ನಡೆ ಯೊಂದಿಗೆ ಸೋಲಿನ ದವಡೆಗೆ ಸಿಲುಕಿದ್ದರೂ, ಕೊನೆಯಲ್ಲಿ ಆಕ್ರಮಣಕಾರಿ ಆಟವಾಡಿ ಜಪಾನ್‌ಗೆ 3-2 ಅಂತರದಲ್ಲಿ ಸೋಲುಣಿಸಿತ್ತು. ಕಳೆದ 48 ವರ್ಷಗಳ ಅವಧಿಯಲ್ಲಿ ನಾಕೌಟ್ ಹಂತದಲ್ಲಿ ಎದುರಾಳಿ ತಂಡಕ್ಕೆ ಕೊನೆಯ ಹಂತದಲ್ಲಿ ತಿರುಗೇಟು ನೀಡಿ ತಂಡವೊಂದು ಗೆಲುವು ದಾಖಲಿಸಿರುವುದು ಇದೊಂದು ದಾಖಲೆಯಾಗಿದೆ.

   ಕ್ವಾರ್ಟರ್ ಫೈನಲ್ ತಲುಪಿರುವ ಬ್ರೆಝಿಲ್ ಇದೀಗ ಕಣದಲ್ಲಿ ಉಳಿದಿರುವ ಬಲಿಷ್ಠ ತಂಡವಾಗಿದೆ. ತಂಡದ ಸ್ಟಾರ್ ಆಟಗಾರ ನೇಮರ್ ಫಿಟ್‌ನೆಸ್ ಸಮಸ್ಯೆಯಿಂದ ಹೊರಬಂದು ಆಡುವ ವಿಶ್ವಾಸದಲಿದ್ದಾರೆ.

 ಕ್ವಾರ್ಟರ್ ಫೈನಲ್‌ನಲ್ಲಿ ಮೆಕ್ಸಿಕೊ ವಿರುದ್ಧ ನೇಮರ್ 51ನೇ ನಿಮಿಷದಲ್ಲಿ ಮೊದಲ ಗೋಲು ಜಮೆ ಮಾಡಿದ್ದರು. 88ನೇ ನಿಮಿಷದಲ್ಲಿ ರಾಬರ್ಟ್ ಫಿರ್ಮಿನೊ ವಿಶ್ವಕಪ್‌ನಲ್ಲಿ ಚೊಚ್ಚಲ ಗೋಲು ದಾಖಲಿಸಿದ್ದರು. ಈ ಎರಡು ಗೋಲುಗಳ ನೆರವಿನಲ್ಲಿ ಬ್ರೆಝಿಲ್ ತಂಡ ಮೆಕ್ಸಿಕೊವನ್ನು 2-0 ಅಂತರದಲ್ಲಿ ಬಗ್ಗು ಬಡಿದು ಕ್ವಾರ್ಟರ್ ಫೈನಲ್ ತಲುಪಿತ್ತು.

ಬ್ರೆಝಿಲ್ ತಂಡ ದಾಳಿಯಲ್ಲಿ ಬಲಿಷ್ಠವಾಗಿದೆ. ಆದರೆ ಮೊದಲ ಗ್ರೂಪ್ ಪಂದ್ಯದಲ್ಲಿ ಸ್ವಿಟ್ಝರ್ಲೆಂಡ್ ವಿರುದ್ಧ ಗೆಲುವು ದಾಖಲಿಸಲಾಗದೆ 1-1 ಡ್ರಾ ಸಾಧಿಸಿತ್ತು. ತಂಡದ ಜಾವೊ ಮಿರಾಂದೊ ಮತ್ತು ಥಿಯಾಗೊ ಸಿಲ್ವ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಪಂದ್ಯ ನಡೆಯುವ ಕ್ರೀಡಾಂಗಣ: ಕಝಾನ್ ಅರೆನಾ, ಆಸನಗಳ ಸಾಮರ್ಥ್ಯ 45,000

ಪಂದ್ಯದ ಸಮಯ: ರಾತ್ರಿ 11:30ಕ್ಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News