ತೈಲ ಉತ್ಪನ್ನಗಳು ಹಂತಹಂತವಾಗಿ ಜಿಎಸ್‌ಟಿ ವ್ಯಾಪ್ತಿಗೆ: ಹಸ್ಮುಖ್ ಅಧಿಯ

Update: 2018-07-06 14:18 GMT

ಹೊಸದಿಲ್ಲಿ, ಜು.6: ತೈಲ ಉತ್ಪನ್ನಗಳನ್ನು ಹಂತಗಳಲ್ಲಿ  ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್‌ಟಿ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದು ವಿತ್ತ ಇಲಾಖೆಯ ಕಾರ್ಯದರ್ಶಿ ಹಸ್ಮುಖ್ ಅಧಿಯ ತಿಳಿಸಿದ್ದಾರೆ.

ಪ್ರಸಕ್ತ ಡೀಸೆಲ್, ಪೆಟ್ರೋಲ್, ಕಚ್ಛಾ ತೈಲ, ನೈಸರ್ಗಿಕ ಅನಿಲ, ವಿಮಾನದಲ್ಲಿ ಬಳಸುವ ಇಂಧನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಲಾಗಿದ್ದು, ರಾಜ್ಯಗಳು ಈ ವಸ್ತುಗಳ ಮೇಲೆ ಮೌಲ್ಯವರ್ಧಿತ ತೆರಿಗೆಯನ್ನು ವಿಧಿಸಬಹುದಾಗಿದೆ. ಇವುಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆಯಿದೆ. ಇದನ್ನು ಪರಿಶೀಲಿಸುತ್ತೇವೆ. ಎಲ್ಲವೂ ಹಂತಗಳಲ್ಲಿ ನಡೆಯಲಿದೆ ಎಂದು ಅಧಿಯ ಹೇಳಿದ್ದಾರೆ. ವಿಮಾನದಲ್ಲಿ ಬಳಸಲಾಗುವ ಇಂಧನದ ಅತ್ಯಧಿಕ ದರದ ಬಗ್ಗೆ ನಾಗರಿಕ ವಾಯುಯಾನ ಸಚಿವಾಲಯ ಹಲವಾರು ಬಾರಿ ಆತಂಕ ವ್ಯಕ್ತಪಡಿಸಿದ್ದು, ಅಧಿಕ ದರದ ಕಾರಣ ವಾಯುಯಾನದ ನಿರ್ವಹಣಾ ವೆಚ್ಚ ಹೆಚ್ಚುವುದಲ್ಲದೆ  ವಿಮಾನದ ಪ್ರಯಾಣ ದರವೂ ಏರಿಕೆಯಾಗುತ್ತದೆ ಎಂದು ತಿಳಿಸಿರುವ ಇಲಾಖೆಯು, ವಿಮಾನ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿತ್ತು.

ವಿಮಾನದಲ್ಲಿ ಬಳಸುವ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ವಿತ್ತ ಸಚಿವಾಲಯವು ತನ್ನ ಒಲವು ವ್ಯಕ್ತಪಡಿಸಿದೆ. ಯಾಂತ್ರೀಕೃತ ಮರುಪಾವತಿ ಕುರಿತು ಸ್ಪಷ್ಟಪಡಿಸಿದ ಹಸ್ಮುಖ್ ಅಧಿಯ, ಆರಂಭದ ಹಂತದಿಂದ ಯಾಂತ್ರೀಕೃತ ವ್ಯವಸ್ಥೆ ಎಂಬುದು ಇದರರ್ಥ. ಆದರೆ ದುರದೃಷ್ಟವಶಾತ್ ಆದಾಯತೆರಿಗೆ ಇಲಾಖೆಗೆ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಜನರು ಬಹಳಷ್ಟು ತಪ್ಪುಗಳನ್ನು ಮಾಡುತ್ತಿರುವ ಕಾರಣ ಅಂತಿಮ ಹಂತದಲ್ಲಿ  ದೈಹಿಕ ಪದ್ದತಿಗೆ ಮೊರೆಹೋಗಬೇಕಾಯಿತು. ಈಗ ಮತ್ತೊಮ್ಮೆ ಈ ವ್ಯವಸ್ಥೆಯನ್ನು ಸಂಪೂರ್ಣ ಯಾಂತ್ರೀಕೃತಗೊಳಿಸಲು  ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News