ಎಟಿಎಂ ಯಂತ್ರ ಹಣ ನೀಡದಿದ್ದರೂ ನಿಮ್ಮ ಬ್ಯಾಂಕ್ ಖಾತೆಗೆ ಖರ್ಚು ಬಿದ್ದರೆ ಏನು ಮಾಡಬೇಕು...?

Update: 2018-07-07 11:58 GMT

ನಿಮಗೆ ಈಗ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಬೇಕಿದ್ದರೆ ಹಿಂದಿನಂತೆ ಬ್ಯಾಂಕಿಗೇ ಹೋಗಿ ಸರದಿಯಲ್ಲಿ ನಿಲ್ಲಬೇಕಾಗಿಲ್ಲ. ಬ್ಯಾಂಕ್ ನಿಮಗೆ ನೀಡಿರುವ ಡೆಬಿಟ್ ಕಾರ್ಡ್‌ನ್ನು ಎಟಿಎಂ ಯಂತ್ರದಲ್ಲಿ ತೂರಿಸಿದರೆ ನೀವು ಕೋರಿದಷ್ಟು ಹಣ ದೊರೆಯುತ್ತದೆ. ಎಟಿಎಂ ಸೌಲಭ್ಯದಿಂದಾಗಿ ಈಗ ವಾರದ ಏಳೂ ದಿನಗಳ ಕಾಲ ಯಾವುದೇ ಸಮಯದಲ್ಲಿಯೂ ಹಣವನ್ನು ಹಿಂಪಡೆಯಬಹುದಾಗಿದೆ.

ಎಟಿಎಂ ಮೂಲಕ ನೀವು ತಕ್ಷಣವೇ ಹಣವನ್ನು ಪಡೆಯಬಹುದು ಅಥವಾ ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದಿದ್ದರೆ ಅಥವಾ ನೀವು ತಪ್ಪು ಪಿನ್ ಬಳಸಿದ್ದರೆ ಎಟಿಎಂ ವಹಿವಾಟು ರದ್ದುಗೊಳ್ಳಬಹುದು. ಇವು ಸಾಮಾನ್ಯ ಅನುಭವಗಳು. ಆದರೆ ನಿಮ್ಮ ಗ್ರಹಚಾರ ಕೆಟ್ಟಿದ್ದರೆ ಇನ್ನೊಂದು ಅನುಭವವೂ ಆಗುತ್ತದೆ. ಎಟಿಎಂ ಬೂತ್‌ಗೆ ತೆರಳಿ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ಹಣಕ್ಕಾಗಿ ಕಾಯುತ್ತಿದ್ದರೆ ಹಣವು ಯಂತ್ರದಿಂದ ಹೊರಕ್ಕೆ ಬರುವುದೇ ಇಲ್ಲ ಮತ್ತು ವ್ಯವಹಾರವು ನಿರಾಕರಿಸಲ್ಪಡುತ್ತದೆ ಮತ್ತು ತಕ್ಷಣವೇ ನಿಮ್ಮ ಖಾತೆಯಿಂದ ಹಣ ಕಡಿತವಾಗಿರುವ ಸಂದೇಶ ನಿಮ್ಮ ಮೊಬೈಲ್‌ಗೆ ಬರುತ್ತದೆ. ಎಟಿಎಂ ಯಂತ್ರವು ಹೊರಹಾಕುವ ಚೀಟಿಯಲ್ಲಿಯೂ ಹಣ ಕಡಿತವಾಗಿರುವುದು ಸ್ಪಷ್ಟವಾಗಿರುತ್ತದೆ. ಇದು ಸಹಜವಾಗಿಯೇ ನಿಮ್ಮಲ್ಲಿ ಆತಂಕವನ್ನು ಸೃಷ್ಟಿಸುತ್ತದೆ. ಹೀಗಾದಾಗ ನೀವೇನು ಮಾಡಬೇಕು?

ಇಂತಹ ವಿದ್ಯಮಾನ ಏಕೆ ಸಂಭವಿಸುತ್ತದೆ ಎನ್ನುವುದನ್ನು ಮೊದಲು ತಿಳಿಯೋಣ. ಯಂತ್ರವು ದೋಷಪೂರಿತವಾಗಿರಬಹುದು ಮತ್ತು ವಿವರಗಳನ್ನು ಸರಿಯಾಗಿ ದಾಖಲಿಸಿಕೊಂಡಿರದಿರಬಹುದು ಎನ್ನುವುದು ಮೊದಲ ಕಾರಣವಾಗಿರಬಹುದು. ಕೆಲವು ಸಂದರ್ಭಗಳಲ್ಲಿ ಎಟಿಎಂ ಯಂತ್ರದಲ್ಲಿ ಹಣವು ಖಾಲಿಯಾಗಿರಬಹುದು ಮತ್ತು ಇನ್ನು ಕೆಲವು ಸಂದರ್ಭಗಳಲ್ಲಿ ಇದು ವಂಚನೆ ಪ್ರಕರಣವಾಗಿರಬಹುದು.

ಎಟಿಎಂ ಯಂತ್ರವು ದೋಷಯುಕ್ತವಾಗಿದ್ದರೆ ಸಾಮಾನ್ಯವಾಗಿ ಬ್ಯಾಂಕ್ ವ್ಯವಸ್ಥೆಯು ಅದನ್ನು ಗುರುತಿಸುತ್ತದೆ ಮತ್ತು ನಿಮ್ಮ ಖಾತೆಯಿಂದ ಕಡಿತಗೊಂಡ ಹಣವನ್ನು ಮರು ಜಮಾ ಮಾಡುತ್ತದೆ ಮತ್ತು ಆ ಬಗ್ಗೆ ನಿಮ್ಮ ಮೊಬೈಲ್‌ಗೆ ಸಂದೇಶವು ಬರುತ್ತದೆ. ಆದರೆ ಹೀಗೆ ಮರು ಜಮಾ ಆಗದಿದ್ದರೆ ನೀವು ಈ ಕೆಳಗೆ ಸೂಚಿಸಲಾಗಿರುವ ಯಾವುದೇ ಕ್ರಮವನ್ನು ಅನುಸರಿಸಬಹುದು.

 ವಹಿವಾಟು ರದ್ದುಗೊಂಡ ಸಂದರ್ಭ ಎಟಿಎಂ ಯಂತ್ರವು ನೀಡಿರುವ ರಸೀದಿಯಲ್ಲಿ ವಹಿವಾಟು ಉಲ್ಲೇಖ ಸಂಖ್ಯೆಯು ನಮೂದಾಗಿರುವುದರಿಂದ ಅದನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ ಎನ್ನುವುದು ನಿಮ್ಮ ನೆನಪಿನಲ್ಲಿರಲಿ.

ಕಸ್ಟಮರ್ ಕೇರ್: ಹೆಚ್ಚಿನ ಬ್ಯಾಂಕ್‌ಗಳು ಕಾಲ್ ಸೆಂಟರ್‌ಗಳನ್ನು ಹೊಂದಿದ್ದು, ಗ್ರಾಹಕರಿಗೆ ನೆರವಾಗಲು ತಮ್ಮ ಸಿಬ್ಬಂದಿಗಳನ್ನು ನಿಯೋಜಿಸಿರುತ್ತವೆ. ಹೀಗಾಗಿ ನೀವು ಕಾಲ್‌ಸೆಂಟರ್‌ನ್ನು ಸಂಪರ್ಕಿಸಿದಾಗ ಇಡೀ ಘಟನೆಯನ್ನು ಅಲ್ಲಿಯ ಅಧಿಕಾರಿಗೆ ವಿವರಿಸಿ ಮತ್ತು ನಿಮ್ಮ ವಹಿವಾಟು ಉಲ್ಲೇಖ ಸಂಖ್ಯೆಯನ್ನು ಒದಗಿಸಿ. ಸಾಮಾನ್ಯವಾಗಿ ಅಧಿಕಾರಿ ನಿಮಗೆ ಟ್ರಾಕಿಂಗ್ ಸಂಖ್ಯೆಯೊಂದನ್ನು ನೀಡುತ್ತಾರೆ ಮತ್ತು ವಿಷಯವನ್ನು ತನಿಖೆಗೆ ಸಲ್ಲಿಸುತ್ತಾರೆ. ನಿಮ್ಮ ಖಾತೆಯಲ್ಲಿ ಹಣ ಕಡಿತವಾಗಿದ್ದರೂ ಎಟಿಎಂ ಯಂತ್ರವು ಹಣವನ್ನು ನೀಡದಿದ್ದುದು ಬ್ಯಾಂಕಿನ ಕಡೆಯಿಂದಲೇ ಆಗಿರುವ ತಪ್ಪು ಎನ್ನುವುದು ಖಚಿತಪಟ್ಟರೆ ಏಳು ಕೆಲಸದ ದಿನಗಳೊಳಗೆ ಕಡಿತಗೊಂಡಿರುವ ಹಣವು ನಿಮ್ಮ ಖಾತೆಗೆ ಮತ್ತೆ ಜಮೆಯಾಗುತ್ತದೆ.

ಬ್ಯಾಂಕ್ ಶಾಖೆಗೆ ಭೇಟಿ: ಕಸ್ಟಮರ್ ಕೇರ್‌ನಿಂದ ಸಮಸ್ಯೆಗೆ ಪರಿಹಾರ ದೊರಕದಿದ್ದರೆ ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವಿಷಯವನ್ನು ತಿಳಿಸಿ. ಅಲ್ಲಿಯ ಹೆಲ್ಪ್ ಡೆಸ್ಕ್ ನಿಮ್ಮ ದೂರನ್ನು ಸ್ವೀಕರಿಸಿ ಸೂಕ್ತ ವ್ಯಕ್ತಿಗೆ ಅಥವಾ ತಂಡಕ್ಕೆ ಅದನ್ನು ಹಸ್ತಾಂತರಿಸುತ್ತದೆ. ಅವರು ನಿಮ್ಮ ದೂರನ್ನು ಪರಿಶೀಲಿಸಿ ಕಡಿತಗೊಂಡ ಹಣವನ್ನು ನಿಮ್ಮ ಖಾತೆಗೆ ಮರು ಜಮೆ ಮಾಡುತ್ತಾರೆ.

ಸ್ವಂತ ಶಾಖೆಗೆ ಭೇಟಿ: ಈ ಎರಡು ವಿಧಾನಗಳಲ್ಲಿಯೂ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ನೀವು ಖಾತೆ ಹೊಂದಿರುವ ಶಾಖೆಗೆ ತೆರಳಿ ಮ್ಯಾನೇಜರ್‌ಗೆ ದೂರು ನೀಡಿ. ಪ್ರತಿಯೊಂದೂ ಬ್ಯಾಂಕು ಇಂತಹ ವಿಷಯವನ್ನು ಆದ್ಯತೆಯಲ್ಲಿ ಪರಿಶೀಲಿಸಲು ಪ್ರತ್ಯೇಕ ದೂರುಗಳ ವಿಭಾಗವನ್ನೂ ಹೊಂದಿರುತ್ತದೆ. ಇದಕ್ಕಾಗಿ ನೀವು ಬ್ಯಾಂಕಿನ ವೆಬ್‌ಸೈಟ್‌ಗೆ ಭೇಟಿ ನೀಡಿ ದೂರನ್ನು ದಾಖಲಿಸಬಹುದು.

ಓಂಬುಡ್ಸ್‌ಮನ್: ಈ ಯಾವ ವಿಧಾನಗಳಿಂದಲೂ ಕಡಿತಗೊಂಡ ಹಣ ನಿಮ್ಮ ಖಾತೆಗೆ ಮರುಜಮೆಯಾಗಿರದಿದ್ದರೆ ನೀವು ನೇರವಾಗಿ ಆರ್‌ಬಿಐ ಅಥವಾ ಬ್ಯಾಂಕಿಂಗ್ ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು. ಲಿಖಿತವಾಗಿ ಅಥವಾ ಆರ್‌ಬಿಐ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ದೂರನ್ನು ಕಳುಹಿಸಬಹುದು. ಆದರೆ ನೀವು ಬ್ಯಾಂಕಿಗೆ ಲಿಖಿತ ದೂರು ಸಲ್ಲಿಸಿದ 30 ದಿನಗಳ ನಂತರವಷ್ಟೇ ಬ್ಯಾಂಕಿಂಗ್ ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು ಎನ್ನುವುದು ನಿಮ್ಮ ಗಮನದಲ್ಲಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News